ಗುರುವಾರ , ಮೇ 28, 2020
27 °C

ಸ್ಮಾರ್ಟ್ ಕಾರ್ಡ್ ಯೋಜನೆ: ಶಿಕ್ಷಕರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಖಾಸಗಿ ಸಂಘವೊಂದು ರೂಪಿಸಿರುವ, ಹಣ ಸುಲಿಗೆಯ ‘ಸ್ಮಾರ್ಟ್’ ಯೋಜನೆಯೊಂದಕ್ಕೆ ಸರ್ಕಾರ ಒಪ್ಪಿಗೆ ನೀಡಿರುವುದು ರಾಜ್ಯದ ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಂಗೆಡಿಸಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ವಿವರ, ವೇತನ ಹಾಗೂ ಆದಾಯ ತೆರಿಗೆ ಮಾಹಿತಿ ಒಳಗೊಂಡ ‘ಸ್ಮಾರ್ಟ್ ಕಾರ್ಡ್’ ಒದಗಿಸುವ ನೆಪದಲ್ಲಿ ಶಿಕ್ಷಕರ ವೇತನದಲ್ಲಿ ಕತ್ತರಿ ಆಡಿಸುವ ಕಾರ್ಯ ನಡೆದಿದ್ದು, ಶಿಕ್ಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.ರಾಜ್ಯದ ಶಿಕ್ಷಕ ಸಮುದಾಯದಿಂದ ಅನಾಯಾಸವಾಗಿ ಕೋಟ್ಯಂತರ ರೂಪಾಯಿ ಹರಿದು ಬರುವ ಈ ‘ಸ್ಮಾರ್ಟ್’ ಯೋಜನೆಯ ಅನುಷ್ಠಾನಕ್ಕೆ ಕರ್ನಾಟ ರಾಜ್ಯ ಪ್ರಾಥಮಿಕ ಶಾಲಾ ಶಿಕರ ಸಂಘ ಉತ್ಸುಕವಾಗಿದೆ. ಶಿಕ್ಷಕರಿಂದ ಯಾವುದೇ ರೀತಿಯ ಬೇಡಿಕೆ ಇಲ್ಲದ, ಖಾಸಗಿ ಸಂಘಟನೆಯೊಂದರ ಈ ಯೋಜನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಸ್ತು ಎಂದಿದೆ. ಈ ಕುರಿತು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ (ಪ್ರಾಥಮಿಕ ಶಿಕ್ಷಣ) ಇಲಾಖೆಯ ನಿರ್ದೇಶಕರು, ಶಿಕ್ಷಕರ ವೇತನದಲ್ಲಿ ರೂ. 210 ಕಡಿತಗೊಳಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಜಮಾ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಪ್ಪಣೆ ಕೊಡಿಸಿದ್ದಾರೆ.ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ವಹಣೆ (ಎಚ್.ಆರ್.ಎಂ.ಎಸ್.) ವ್ಯವಸ್ಥೆಯಡಿ ಈಗಾಗಲೇ ಶಿಕ್ಷಕರ ಸೇವಾ ವಿವರಗಳು ಲಭ್ಯವಿವೆ. ಶಿಕ್ಷಕರಿಗೆ ಅಗತ್ಯವೇ ಇಲ್ಲದ  ‘ಸ್ಮಾರ್ಟ್ ಕಾರ್ಡ್’ ವಿತರಣೆಯ ಹೊಣೆ ‘ಹೊತ್ತುಕೊಂಡಿರುವ’ ಸಂಘಟನೆ ಯಾವ ‘ಗುರಿ’ ಸಾಧಿಸಲು ಹೊರಟಿದೆಯೋ, ಶಿಕ್ಷಕರಿಗೇ ಗೊತ್ತಿಲ್ಲ!  ಸ್ಮಾರ್ಟ್ ಕಾರ್ಡ್ ಕುರಿತು ಬಹುತೇಕ ಶಿಕ್ಷರಿಗೆ ಮಾಹಿತಿ ಇಲ್ಲ. ಆದರೆ, ಜನವರಿ ತಿಂಗಳಿನ ವೇತನದಲ್ಲಿ ಹಣ ಕಡಿತಗೊಳಿಸಲು ಒಪ್ಪಿಗೆ ಸೂಚಿಸುವ ಪತ್ರಗಳು ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳನ್ನು ತಲುಪಿವೆ.ಈ ಯೋಜನೆಯ ಅನುಷ್ಠಾನದ ಹಂತಗಳಲ್ಲಿ ಹಣ ದುರುಪಯೋಗವಾಗಬಹುದು ಮತ್ತು ಅಡಿಟ್ ಮಾಡಿಸಲು ಸಮಸ್ಯೆಯಾಗಬಹುದು ಎಂಬುದನ್ನು ಶಿಕ್ಷಣ ಇಲಾಖೆಯೇ ಆದೇಶಪತ್ರದಲ್ಲಿ ಉಲ್ಲೇಖಿಸಿದೆ. ಈ ಕಾರಣಕ್ಕಾಗಿಯೇ ಸ್ಮಾರ್ಟ್ ಕಾರ್ಡ್ ಪಡೆಯಬಯಸುವ ಆಸಕ್ತ ಶಿಕ್ಷಕರ ವೇತನದಲ್ಲಿ ಮಾತ್ರ ಹಣ ಕಡಿತಗೊಳಿಸಬೇಕು ಎಂಬ ಸ್ಪಷ್ಟ ನಿರ್ದೇಶನವಿದೆ. ಅಲ್ಲದೆ ಈ ಕುರಿತು ಶಿಕ್ಷಕರಿಗೆ ಯಾವುದೇ ರೀತಿಯ ಒತ್ತಡ ಹೇರಬಾರದೆಂದು ಹೇಳಲಾಗಿದ್ದರೂ ಸಂಘದ ಕೆಲವು ಪದಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ,  ಒತ್ತಾಯಪೂರ್ವಕವಾಗಿ ‘ಒಪ್ಪಿಗೆ ಪತ್ರ’ಗಳನ್ನು ವಿತರಿಸುತ್ತಿದ್ದಾರೆ. ಕೆಲವು ಶಿಕ್ಷಕರ ನಕಲಿ ಸಹಿಗಳನ್ನು ಒಳಗೊಂಡಿರುವ ಒಪ್ಪಿಗೆ ಪತ್ರಗಳೂ ಪತ್ತೆಯಾಗಿವೆ.ಸರ್ಕಾರದ ಆರ್ಥಿಕ ಇಲಾಖೆಯ ಆದೇಶವಿಲ್ಲದ ಈ ಯೋಜನೆಯಿಂದ ಶಿಕ್ಷಕಕರಿಗೆ ಯಾವ ಪ್ರಯೋಜನವೂ ಇಲ್ಲ ಎಂಬುದು ಶಿಕ್ಷಕರ ಅಭಿಮತ. ಇಲಾಖೆಯ ನಿರ್ಧಾರವಲ್ಲದ ಈ ಯೋಜನೆ ಕೇವಲ ಸರ್ಕಾರಿ ಶಿಕ್ಷಕರಿಗೆ ಮಾತ್ರ ಏಕೆ ಎಂಬುದಕ್ಕೆ ಸಂಘದ ಬಳಿ ಉತ್ತರವಿಲ್ಲ. ಸ್ಮಾರ್ಟ್ ಕಾರ್ಡ್ ತಯಾರಿಸಲು ಶಿಕ್ಷಕರ ಸೇವಾ ಪುಸ್ತಕ ಹಾಗೂ ಖಾಸಗಿ ವಿವರಗಳನ್ನು ಖಾಸಗಿ ಸಂಘಕ್ಕೆ ನೀಡಬೇಕಾಗಿದ್ದು, ಇದು ಸರ್ಕಾರಿ ನೌಕರರ ಸೇವಾ ನಿಯಮದ ಉಲ್ಲಂಘನೆಯಾಗುತ್ತದೆ.‘ಗ್ರಾಮೀಣ ಪ್ರದೇಶದ ಶಿಕ್ಷಕರ ಎಷ್ಟು ಸಮಸ್ಯೆಗಳಿಗೆ ಸಂಘ ಸ್ಪಂದಿಸಿದೆ? ಆರ್ಥಿಕ ಸಂಕಷ್ಟದಲ್ಲಿ ಬದುಕು ನಡೆಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾರ್ಟ್ ಕಾರ್ಡ್ ಪಡೆಯುವುದು, ಪ್ರತಿ ವರ್ಷ ಅದರ ನವೀಕರಣಕ್ಕಾಗಿ ಹಣ ನೀಡುವುದು ಹೊರೆಯಾಗಿ ಪರಿಣಮಿಸುತ್ತದೆ. ಶಿಕ್ಷಕರಿಗೆ ಸಂಘಟನೆ ಬೇಕು. ಆದರೆ ಅದು ಕೇವಲ ಕೆಲವರ ಹಿತ ಕಾಯಲು ಅಲ್ಲ. ಸರ್ಕಾರ ನಮಗೆ ನೀಡಿರುವುದು ಪಾಠ ಬೋಧನೆ ಮಾಡುವ ಕೆಲಸ. ಮೊದಲು ಕರ್ತವ್ಯ, ನಂತರ ಸಂಘಟನೆ. ಆದರೆ, ಕೆಲವರು ಇದಕ್ಕೆ ವ್ಯತಿರಿಕ್ತವಾಗಿರುವುದು ವಿಷಾದನೀಯ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಶಿವಾನಂದ ನಾಗೂರ. ಸಂಘಟನೆಯ ಹೆಸರಿನಲ್ಲಿ ‘ಸ್ಮಾರ್ಟ್ ಕಾರ್ಡ್’ನಂತಹ ವ್ಯವಹಾರಕ್ಕಿಳಿದಿರುವ  ಕೆಲವು ಶಿಕ್ಷಕರಿಗೆ ಇಲಾಖೆ ಮಣೆ ಹಾಕದೇ ಶಿಕ್ಷಕರ ಹಿತ ಕಾಯಲು ಮುಂದಾಗಬೇಕು ಎಂಬುದು ಹಲವು ಶಿಕ್ಷಕರ ಆಶಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.