ಸೋಮವಾರ, ಜೂನ್ 21, 2021
23 °C

ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿಯರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸ್ಯಾಂಕಿ ಕೆರೆಗೆ ಹಾರಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿ­ಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಲಕ್ಕಸಂದ್ರದ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪ್ರಿಯಾಂಕ (15) ಹಾಗೂ ಒಂಬತ್ತನೇ ತರಗತಿಯ ಸೊನಾಲಿ (14) ಆತ್ಮಹತ್ಯೆ ಮಾಡಿಕೊಂಡವರು.ಮಧ್ಯಾಹ್ನ 2.30 ಗಂಟೆಗೆ ಕೆರೆಯಲ್ಲಿ ಶವಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ ಪೊಲೀಸರು, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ.ಪ್ರಿಯಾಂಕ, ಜನಾರ್ದನ್‌ ಮತ್ತು ಭಾಗ್ಯಲಕ್ಷ್ಮೀ ದಂಪತಿಯ ಮಗಳು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ­ಯಾದ ಜನಾರ್ದನ್‌, ಕುಟುಂಬ ಸದಸ್ಯರೊಂದಿಗೆ ಜಯನಗರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಸೊನಾಲಿ, ಕ್ಯಾಬ್‌ ಚಾಲಕ ದಯಾನಂದ ಸಾಗರ್‌ ಮತ್ತು ಪ್ರೇಮಾ ದಂಪತಿಯ ಮಗಳು. ಕುಟುಂಬ ಸದಸ್ಯರು ತಾವರೆಕೆರೆಯ ಬಾಲಾಜಿಲೇ­ಔಟ್‌­ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಶಾಲೆಗೆ ಹೋಗುವುದಾಗಿ ಬೆಳಿಗ್ಗೆ ಮನೆಯಿಂದ ಹೊರಟ ವಿದ್ಯಾರ್ಥಿನಿಯರು, ಸ್ಯಾಂಕಿ ಕೆರೆಗೆ ಬಂದಿದ್ದಾರೆ. ಅವರಿಬ್ಬರು 11 ಗಂಟೆವರೆಗೆ ಸಿಮೆಂಟ್ ಬೆಂಚಿನ ಮೇಲೆ ಕುಳಿತಿದ್ದನ್ನು ಸೆಕ್ಯುರಿಟಿ ಗಾರ್ಡ್ ನೋಡಿದ್ದಾರೆ. ಆ ನಂತರ ಅವರು ಬೆಂಚಿನ ಮೇಲೆ ಬ್ಯಾಗ್‌ಗಳನ್ನು ಇಟ್ಟು ಕೆರೆಗೆ ಜಿಗಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ಮುಖ್ಯ ಶಿಕ್ಷಕಿ ಫಿಲೋಮಿನಾ ಇಮ್ಯಾನ್ಯುಯಲ್ ಮತ್ತು ಮರಿಯಾ ಲೈನಾ ಅವರು ಪ್ರತಿದಿನ ನಮಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರವಾಗಿದ್ದು, ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ ಎಂದು ಬರೆದಿರುವ ಪತ್ರ ಪ್ರಿಯಾಂಕಳ ಬ್ಯಾಗ್‌ನಲ್ಲಿ ಸಿಕ್ಕಿದೆ. ಘಟನೆ ಸಂಬಂಧ ಪೋಷಕರು ದೂರು ಕೊಟ್ಟಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ (ಐಪಿಸಿ 306) ಪ್ರಕರಣ ದಾಖಲಿಸಿಕೊಂಡು ಶಿಕ್ಷಕರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇ­ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.‘ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಮಧ್ಯಾಹ್ನದವರೆಗೆ ತರಗತಿಗಳು ನಡೆದವು. ನಂತರ ಪ್ರಿಯಾಂಕ ಮತ್ತು ಸೊನಾಲಿ ಶಾಲೆ ಆವರಣದಲ್ಲಿ ಹೋಳಿ ಆಡಿದ್ದರು. ಆಗ ಅವರನ್ನು ಕಚೇರಿಗೆ ಕರೆಸಿದ ಶಿಕ್ಷಕರು, ಕಾಲಹರಣ ಮಾಡದೆ ಸರಿಯಾಗಿ ವ್ಯಾಸಂಗ ಮಾಡಿ ಎಂದು ಬುದ್ದಿಮಾತು ಹೇಳಿದ್ದರು. ಅಲ್ಲದೇ, ಮಂಗಳವಾರ ಬರುವಾಗ ಪೋಷಕರನ್ನು ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ಪರೀಕ್ಷಾ ಪ್ರವೇಶ ಪತ್ರ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಈ ಭಯದಿಂದ ತಂಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಪ್ರಿಯಾಂಕಾ ಅಣ್ಣ ಮನು ಆರೋಪಿಸಿದರು.ಕೈಗೆ ಟೈ ಕಟ್ಟಿಕೊಂಡಿದ್ದರು: ‘ಪ್ರಿಯಾಂಕ ಮತ್ತು ಸೊನಾಲಿ ಎರಡು ವರ್ಷಗಳಿಂದ ಸ್ನೇಹಿತೆಯರಾಗಿದ್ದರು. ಸಮವಸ್ತ್ರದಲ್ಲೇ ಕೆರೆ ಬಳಿ ಬಂದಿದ್ದ ಅವರು, ಪರಸ್ಪರ ಕೈಗಳನ್ನು ‘ಟೈ’ ನಿಂದ ಕಟ್ಟಿಕೊಂಡು ನೀರಿಗೆ ಜಿಗಿದಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ

ಮಾನಸಿಕ ಖಿನ್ನತೆಗೆ ಒಳಗಾದ ಮಕ್ಕಳಿಗೆ ಧೈರ್ಯ ತುಂಬುವ ಸಲುವಾಗಿ ಚೈಲ್ಡ್ ರೈಟ್ಸ್ ಟ್ರಸ್ಟ್ ‘ಆತ್ಮಹತ್ಯೆ ವಿರೋಧಿ ಹಾಗೂ ಪುನರ್ವ­ಸತಿ ವೇದಿಕೆ’ (ಆರ್‌ಎಎಸ್‌ಎಫ್) ಎಂಬ ಸಮಾಲೋಚನಾ ಕೇಂದ್ರವನ್ನು ತೆರೆದಿದೆ. ಖಿನ್ನತೆಗೆ ಒಳಗಾಗುವ ಮಕ್ಕಳು ಸಹಾಯ­ವಾಣಿಗೆ (080 22374652) ಕರೆ ಮಾಡಬಹುದು. ಕೇಂದ್ರದ ಸದಸ್ಯರು ಹಾಗೂ ವೈದ್ಯರು ಕೂಡಲೇ ಮಕ್ಕಳ ಮನೆಗಳಿಗೆ ತೆರಳಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ.ಸೋಲು ಒಪ್ಪಿಕೊಳ್ಳದ ಮನಸ್ಸು

‘ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಬದುಕು ಕುರಿತಂತೆ ಪ್ರೀತಿ ಹಾಗೂ ಸ್ಫೂರ್ತಿ ತುಂಬುವುದು ಶಿಕ್ಷಕರು ಹಾಗೂ ಪೋಷಕರ ಕರ್ತವ್ಯ. ಮಕ್ಕಳಿಗೆ ಒಂದು ವಯಸ್ಸಿನ ನಂತರ ನೈತಿಕ ಪ್ರಾಬಲ್ಯ ಬರುತ್ತದೆ. ಅಲ್ಲಿಯವರೆಗೆ ಪೋಷಕರಾಗಲಿ, ಶಿಕ್ಷಕರಾಗಲಿ ಅವರ ಮೇಲೆ ಒತ್ತಡ ಹೇರಬಾರದು. ಮಕ್ಕಳು ತಪ್ಪು ಮಾಡಿದಾಗಲೆಲ್ಲ ಶಿಕ್ಷೆಗೆ ಒಳಪಡಿಸುವುದಕ್ಕೇ ಆದ್ಯತೆ ನೀಡುತ್ತಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ’ ಎಂದು ಮನೋವೈದ್ಯ ಆರ್‌.ಶ್ರೀಧರ್‌ ಅಭಿಪ್ರಾಯಪಟ್ಟರು.‘8, 9 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರೌಢಾವಸ್ಥೆಯಲ್ಲಿರುವ ಮಕ್ಕಳು. ಹೀಗಾಗಿ ಸಣ್ಣ ಪುಟ್ಟ ವಿಚಾರಗಳು, ಗೊಂದಲಗಳು ಅವರ ಮೇಲೆ ಗಾಢ ಪರಿ­ಣಾಮ ಬೀರುತ್ತವೆ. ವಿದ್ಯಾರ್ಥಿಗಳ ವ್ಯಕ್ತಿತ್ವ, ಸೋಲನ್ನು ಒಪ್ಪಿಕೊಳ್ಳದ ಮನೋಭಾವ, ವಾಸ ಮಾಡುವ ಪರಿಸರ, ಪೋಷಕರ ಹಾಗೂ ಸಹಪಾಠಿಗಳ ಪಾತ್ರ ಹಾಗೂ ಮಾಧ್ಯಮಗಳ ಪ್ರಭಾವದಿಂದ ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದರು.ವಿದ್ಯಾರ್ಥಿಗಳಿಗೆ ಸಲಹೆ

‘ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಕಠಿಣವಾಗಿಯೇ ನಿಂದಿಸುತ್ತಾರೆ. ಮಕ್ಕಳ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಹ ಶಿಕ್ಷೆ ನೀಡುತ್ತಿದ್ದಾರೆ. ಆದರೆ, ಅವರು ನೀಡುವ ಶಿಕ್ಷೆ ಒಂದು ಉದ್ದೇಶಕ್ಕಾಗಿಯೇ ಹೊರತು, ವ್ಯಕ್ತಿತ್ವದ ನಿಂದನೆಗಲ್ಲ ಎಂಬುದನ್ನು ವಿದ್ಯಾರ್ಥಿ­ಗಳು ಅರಿಯಬೇಕು. -ಮಕ್ಕಳಿಗೆ ಜೀವನ ನಡೆಸಲು ವಿಧ ವಿಧವಾದ ಅವಕಾಶಗಳಿವೆ ಎಂಬುದನ್ನು ತಿಳಿಯಬೇಕು’ ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.