ಶುಕ್ರವಾರ, ಮೇ 14, 2021
30 °C

ಸ್ವಪ್ರತಿಷ್ಠೆಗೆ ಅಪಸ್ವರ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವರಿಗೆ ತಮ್ಮ ವಾದಗಳನ್ನು ಜೀವಂತಗೊಳಿಸುತ್ತಲೆ ಸಾಮಾಜಿಕ ಪ್ರತಿಷ್ಠೆ ಗಳಿಸುವ ಹಪಹಪಿ. ಮತ್ತೆ ಕೆಲವರು ತಮ್ಮ ವಿ-ವಾದಗಳಿಂದ (ವಿಕೃತವಾದ) ರಾತ್ರೋರಾತ್ರಿ ಜನಪ್ರಿಯರಾಗುತ್ತಾರೆ. ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರು ಎರಡನೆಯ ಗುಂಪಿಗೆ ಸೇರಿದವರೆ ಎಂಬ ಅನುಮಾನ ಹುಟ್ಟುತ್ತಿದೆ. ಡಾ. ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿಗೆ ಅನರ್ಹರೆಂದು ಶ್ರೀಯುತರೆ ತೀರ್ಮಾನಿಸಿದಂತೆ ಇದೆ (ಪ್ರ.ವಾ. ಸೆ.20) ಅರ್ಹತೆಯ ವಿಷಯಕ್ಕೆ ಬಂದಾಗ, ಕಂಬಾರರಿಗಿಂತ ಹಿಂದಿನ ಈರ್ವರ ಅರ್ಹತೆಯೇ ಪ್ರಶ್ನಾರ್ಹ. ಜ್ಞಾನಪೀಠದೊಡನೆ, `ಸಿರಿಸಂಪಿಗೆ~ಯ ಕಥಾವಸ್ತುವನ್ನೂ ಹೈಜಾಕ್ ಮಾಡಿ ಪರೋಕ್ಷವಾಗಿ ಘ್ನಾನಪೀಠ ಪ್ರಶಸ್ತಿಯನ್ನು ಎದೆಗವಚಿಗೊಂಡ ಮಹಾಮಹಿಮರು ಈ ಈರ್ವರಲ್ಲಿ ಒಬ್ಬರು. ಕೃತಿಚೌರ್ಯದ ಆಪಾದನೆ ಮಾಡಿ ಕಂಬಾರರು ಶ್ರೀಯುತರನ್ನು ಕೋರ್ಟಿಗೆ ಎಳೆಯಲಿಲ್ಲ.  ಅದೇ ಅವರ ದೊಡ್ಡತನ. ಇಷ್ಟಕ್ಕೂ ಪ್ರಶಸ್ತಿಯ ಮಾನದಂಡ ಯಾವುದು? ನಾನು ತಿಳಿದಂತೆ ಗುಣಾತ್ಮಕವಾಗಿಯೂ, ಗಾತ್ರಾತ್ಮಕವಾಗಿಯೂ ಕೃತಿ ರಚನೆ ಮಾಡುವುದಷ್ಟೆ ಅಲ್ಲ. `ಜಾನಪದಕ್ಕೆ ನವ್ಯದ ಮೆರುಗನ್ನೂ, ನವ್ಯಕ್ಕೆ ಜಾನಪದದ ಘಾಟನ್ನೂ ತಂದ ಒಂದು ವಿಶಿಷ್ಟ ಅಭೂತಪೂರ್ವ ಪ್ರಯೋಗವೂ ಪ್ರಶಸ್ತಿಗೆ ಮಾನದಂಡವಾಗಬಹುದು (ಮಾತ್ಸೆತುಂಗ). ನಾಟಕದಲ್ಲಿ ಗೇಯತೆಯ ಗುಣವನ್ನು ಜಾನಪದದ ನೆಲೆಗಟ್ಟಿನ ಮೇಲೆ ಮೆರೆಸಿದವರು ಕಂಬಾರರು (ಸಂಗ್ಯಾ ಬಾಳ್ಯಾ, ಜೋಕುಮಾರಸ್ವಾಮಿ, ಜೈಸಿದನಾಯ್ಕ).ನಾಡಿಗೆ ಶುಭ ಹಾರೈಸುವವರು, ನಮ್ಮಲ್ಲೊಬ್ಬರು ಪ್ರಶಸ್ತಿಗೆ ಭಾಜನರಾದಾಗ ಸಂಭ್ರಮಿಸಬೇಕು, ಅಪಸ್ವರವೆತ್ತಿ ಸ್ವಪ್ರತಿಷ್ಠೆ ಮೆರೆಸಬಾರದು. ಡಾ. ಎಸ್.ಎಲ್. ಭೈರಪ್ಪ ಅದ್ವಿತೀಯ ಕಾದಂಬರಿಕಾರರೆಂಬುದರಲ್ಲಿ ಎರಡು ಮಾತಿಲ್ಲ. ಲಾಬಿಗಳ ನಡುವೆಯೂ ಭೈರಪ್ಪನವರಿಗೆ ಪ್ರಶಸ್ತಿ ಸಿಗುವ ಸಂಕಲ್ಪ ದೈವಕ್ಕಿದ್ದರೆ, ತಡೆಯುವ ಕುನ್ನಿಗಳಿಗೆ ಕವಡೆಕಾಸಿನ ಕಿಮ್ಮತ್ತೂ ಇರಲಾರದು. ಆ ದಿನಗಳೂ ಬಂದಾವು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.