ಸೋಮವಾರ, ಮೇ 23, 2022
28 °C

ಸ್ವರಸನ್ನಿಧಿಯಲ್ಲಿ ಕುಹುಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯನದ ಸ್ವರ ಮಾಧುರ್ಯಕ್ಕೆ, ಇಂಪಾದ ದನಿಯ ಮೋಡಿಗೆ ಮರುಳಾಗದವರು ಯಾರೂ ಇಲ್ಲ. ಅಂಥ ಮಾಧುರ್ಯ, ಇಂಪಿನ ಕಂಠ ಸಿರಿ ಹೊಂದಿದ್ದಾರೆ ಡಾ. ಶಮಿತಾ ಮಲ್ನಾಡ್.ಕನ್ನಡಚಿತ್ರ ಗೀತೆ ಹಾಗೂ ಭಾವಗೀತೆಯ ಗಾಯನದಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಹುಟ್ಟಿದ್ದು, ಬೆಳೆದದ್ದು ಸಾಂಸ್ಕೃತಿಕ, ಸಂಗೀತ ವಾತಾವರಣದ ಮಲೆನಾಡ ಮಡಿಲಿನ ತೀರ್ಥಹಳ್ಳಿಯಲ್ಲಿ. ತಂದೆ ಪ್ರೊ. ಯು. ವಿ. ರಾಮಚಂದ್ರ, ತಾಯಿ ಹೆಚ್. ಜಿ. ಸುಗುಣ.ಪಂಡಿತ್ ಶೇಷಾದ್ರಿ ಗವಾಯಿ ಅವರ ಶಿಷ್ಯೆಯಾಗಿ ಸಂಗೀತಾಭ್ಯಾಸ. ನಂತರ ಹಾಡಲು ಪ್ರಾರಂಭಿಸಿದ್ದು 1996 ರಲ್ಲಿ  `ಕಣಿವೆ ಕಬ್ಬಲಿ~  ಭಕ್ತಿಗೀತೆಯ ದ್ವನಿಸುರುಳಿಯಿಂದ. ಅಲ್ಲಿಂದ ಅವರದು ನಿರಂತರ ಸಂಗೀತ ಯಜ್ಞ. `ಮಿಲನೋತ್ಸವ~ ಸೀಡಿಯಲ್ಲಿ ಪ್ರೊ. ನಿಸಾರ್ ಅಹಮದ್ ಅವರ ಕವನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ವಿಶೇಷ ಎಂದರೆ ಅವರು ಓದಿದ್ದು ವೈದ್ಯಕೀಯ.  ಗುರುಕಿರಣ್ ಸಂಗೀತ ನಿರ್ದೇಶನದ  `ನಿನಗಾಗಿ~  ಚಿತ್ರದ ಮೂಲಕ ಕನ್ನಡ ಚಲನಚಿತ್ರ ಗಾಯನ ಕ್ಷೇತ್ರಕ್ಕೆ ಕಾಲಿಟ್ಟು ನೂರಾರು ಚಿತ್ರಗಳಲ್ಲಿ ಹಾಡಿದ್ದಾರೆ. ಹಂಸಲೇಖ, ಹರಿಕೃಷ್ಣ.  ಮನೋಮೂರ್ತಿ, ರಾಜೇಶ್ ಕೃಷ್ಣ, ಸಾಧು ಕೋಕಿಲ, ಕಲ್ಯಾಣ್, ವಿ.ಮನೋಹರ್, ಆರ್ ಪಿ ಪಟ್ನಾಯಕ್, ಅರ್ಜುನ್, ಸಂದೀಪ್ ಚೌಟ, ಕಾರ್ತಿಕ್ ರಾಜಾ, ಎಲ್ ಎನ್ ಶಾಸ್ತ್ರಿ, ವಲಿಶಾ ಸಂದೀಪ್ ಸೇರಿ ಕನ್ನಡದ ಇತ್ತೀಚಿನ ಬಹುತೇಕ ಎಲ್ಲ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ಹಾಡಿದ್ದಾರೆ.ಪ್ರಮುಖ ಗಾಯಕರುಗಳಾದ ಡಾ. ರಾಜ್, ಎಸ್‌ಪಿಬಿ,  ಉದಿತ್ ನಾರಾಯಣ್, ಹರಿಹರನ್, ಶಂಕರ್ ಮಹದೇವನ್, ಕುನಾಲ್ ಗಾಂಜಾವಾಲಾ, ರಾಜೇಶ್‌ಕೃಷ್ಣ ಜೊತೆಯಲ್ಲಿ ಸಹಗಾಯಕಿ.ಕಾವ್ಯ ಗಂಗಾ, ನಾಡಶ್ರೀ, ಮಯೂರ, ಸೂಪರ್ ಸ್ಟಾರ್, ಮಲೆನಾಡ ಕೋಗಿಲೆ, ಸ್ವರ ಮಂದಾರ, ಕೆಂಪೇಗೌಡ ಸ್ಮಾರಕ, ಜೂನಿಯರ್ ಎಲ್ ಆರ್ ಈಶ್ವರಿ, ಸುವರ್ಣ ಟಿ ವಿ ಫಿಲಂ, ಫಿಲಂಫೇರ್ ಹಾಗೂ ಸೌತ್ ಸ್ಕೋಪ್ ಮತ್ತಿತರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಈ ಪ್ರಶಸ್ತಿ, ಸನ್ಮಾನಗಳೆಲ್ಲ ಅವರನ್ನು ಮತ್ತಷ್ಟು ಪಕ್ವಗೊಳಿಸಿವೆ. ಅವರೀಗ ಬರೀ ಗಾಯಕಿಯಾಗಿ ಉಳಿಯದೆ ತಮ್ಮ ಗಾಯನದ ಅನುಭವ, ಪಾಂಡಿತ್ಯವನ್ನು ಕಲಿಯುವ ಆಸಕ್ತರಿಗಾಗಿ ಕಲಿಸಲು  ಸ್ವರ ಸನ್ನಿಧಿ ಟ್ರಸ್ಟ್  ಸ್ಥಾಪಿಸಿದ್ದಾರೆ.ಮಕ್ಕಳಿಗೆ, ಯುವಜನರಿಗೆ ಹಾಡು, ನೃತ್ಯ, ಸಾಹಿತ್ಯ ಮತ್ತು ಸಂಗೀತದ ಜ್ಞಾನ ಹಂಚುತ್ತಿದ್ದಾರೆ. ಮಕ್ಕಳಿಗಾಗಿ ಆಗಾಗ ವೈದ್ಯಕೀಯ ಮತ್ತು ದಂತ ವೈದ್ಯ ಶಿಬಿರ ನಡೆಸುತ್ತಿದ್ದಾರೆ. ಸಂಗೀತ ಶಿಕ್ಷಣ ನೀಡುವ ಮೂಲಕವೂ ಸಮಾಜ ಸೇವೆ ಮಾಡಬಹುದು, ಸಂಗೀತ ಕೇಳುವುದರಿಂದ, ಕಲಿಯುವುದರಿಂದ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ ಎನ್ನುವುದು ಅವರ ಖಚಿತ ಅಭಿಪ್ರಾಯ.ಹಿನ್ನೆಲೆ ಗಾಯಕಿ, ನಿರೂಪಕಿಯಾಗಿ ಹತ್ತು ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಇವರ ಅಭಿರುಚಿಗಳೂ ಇನ್ನೂ ಅನೇಕ. ಕವಿತೆ ರಚನೆ, ಚಿತ್ರಕಲೆ, ಸಿರಾಮಿಕ್ ಕಲೆ, ನೃತ್ಯ, ಸಂಗೀತ ಸಂಯೋಜನೆ, ಛಾಯಾಗ್ರಹಣ ಹೀಗೆ ಹಲವಾರು  ಸೃಜನಾತ್ಮಕ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.