ಅಂಕೋಲಾ: ಭಾರತದ ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸೇರಿದ ಸಾವಿರಾರು ತೊರೆಗಳಲ್ಲಿ ಇಲ್ಲಿನ ಚಳವಳಿಗಾರರು ನಡೆಸಿದ ಅಪೂರ್ವ ಸಾಹಸದ ಕತೆಗಳು ಚಿರಸ್ಮರಣೀಯವಾಗಿವೆ.

ಗಾಂಧೀಜಿಯವರು ದೇಶದ ವಿಮೋಚನೆಯ ದೀಕ್ಷೆ ತೊಟ್ಟು ಬರುವ ವೇಳೆಗೆ ಹಿಂದಿನ ಪ್ರಮುಖ ರಾಷ್ಟ್ರೀಯ ನಾಯಕರು ನಿರ್ಗಮಿಸಿದ್ದರು. ಸ್ವಾತಂತ್ರ್ಯ ಚಳವಳಿಯು ಕೇವಲ ಮಹಾನಗರಗಳನ್ನು ಕೇಂದ್ರೀಕರಿಸಿ ನಡೆಯದೇ ಹಳ್ಳಿ ಹಳ್ಳಿಗಳಿಂದ ಸ್ವಾತಂತ್ರ್ಯದ ಬೇಡಿಕೆ ಅನುರಣಿಸಬೇಕು ಎಂದು ಘೋಷಿಸಿದ ಗಾಂಧೀಜಿಯವರ ಕರೆಗೆ ಓಗೊಟ್ಟವರಲ್ಲಿ ಅಂಕೋಲೆಯ ಜನರು ಪ್ರಮುಖರಾಗಿದ್ದಾರೆ.

ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಜಯರಾಮಾಚಾರ್ಯ ಮುಂತಾದವರು ಈ ಭಾಗದಲ್ಲಿ ಸಂಚರಿಸಿ ಹೋರಾಟದ ರೂಪುರೇಷೆಗಳನ್ನು ಪ್ರಚುರಪಡಿಸಿದರು. ಅಸಹಕಾರ ಚಳವಳಿ, ಕರಬಂಧಿ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹಗಳಲ್ಲಿ ಅಂಕೋಲಾ ನಿರ್ಣಾಯಕ ಪಾತ್ರ ವಹಿಸಿತು. ಕರನಿರಾಕರಣೆ ಮಾಡುವ ಮೂಲಕ ತಮ್ಮ ಭೂಮಿ ಕಾಣಿಗಳನ್ನು ಕಳೆದುಕೊಂಡ ಇಲ್ಲಿನ ರೈತಾಪಿ ಜನರ ಸಂಕಷ್ಟಗಳನ್ನು ಸರ್ದಾರ ವಲ್ಲಭಾಯಿ ಪಟೇಲ್ ಗಮನಿಸಿದರು. ಕರಬಂಧಿ ಚಳವಳಿಯ ಸರ್ವಾಧಿಕಾರಿಯಾಗಿ ಹೋರಾಡಿದ ಬಾಸಗೋಡದ ರಾಮ ನಾಯಕರು ತಮ್ಮ ಗ್ರಾಮದಲ್ಲಿಯೇ ಸೇವಾದಳದ ತರಬೇತಿ ಶಿಬಿರವನ್ನು ನಡೆಸಿ ಸ್ವಾತಂತ್ರ್ಯ ಚಳವಳಿಯ ಪ್ರಾಥಮಿಕ ಪಾಠಗಳನ್ನು ನಾ.ಸು. ಹರ್ಡೀಕರ, ಗಂಗಾಧರರಾವ್ ದೇಶಪಾಂಡೆ, ಮುದವೀಡು ಕೃಷ್ಣರಾವ್ ಮುಂತಾದ ಮಹನೀಯರಿಂದ ಇಲ್ಲಿನ ಹೋರಾಟಗಾರರಿಗೆ ಹೇಳಿಸಿಕೊಟ್ಟರು. ತಾಲ್ಲೂಕಿನ ನಾಡವ ಸಮುದಾಯದವರು ಸಾಮೂಹಿಕವಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಈ ಭಾಗದಲ್ಲಿ ಸಂಚರಿಸಿ ಹೋರಾಟದ ಕಹಳೆಯನ್ನು ಊದಿದ ಕೃಷ್ಣಾಬಾಯಿ ಪಂಜೀಕರ, ಉಮಾಬಾಯಿ ಕುಂದಾಪುರ ಮಹಿಳೆಯರನ್ನು ಕೂಡ ಚಳವಳಿಗೆ ಅಣಿಗೊಳಿಸಿದರು.

ಎಂ.ಪಿ. ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ಬೊಮ್ಮಯ್ಯ ನಾಯಕ ಮುಂತಾದವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಉಪ್ಪಿನ ಸತ್ಯಾಗ್ರಹವು ದೇಶದ ಗಮನವನ್ನು ಸೆಳೆಯಿತು.
1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ ಕಾಂಗ್ರೆಸ್ ಸಮಿತಿಯು ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲು ಅಂಕೋಲೆಯೇ ಸೂಕ್ತ ಎಂದು ನಿರ್ಧರಿಸಿದ್ದರಿಂದ ಜಲಿಯನ್ವಾಲಾ ಭಾಗ್ ಹತ್ಯಾಕಾಂಡದ ದಿನವಾದ ಏಪ್ರಿಲ್ 13ನೇ ತಾರೀಖಿನಂದು ಭಾರಿ ಮೆರವಣಿಗೆಯೊಂದಿಗೆ ಹೋರಾಟಗಾರರು ಉಪ್ಪು ತಯಾರಿಸಿ ಮಾರಾಟ ಮಾಡುವ ಮೂಲಕ ಸವಿನಯ ಕಾನೂನು ಭಂಗ ಚಳವಳಿಯನ್ನು ಯಶಸ್ವಿಗೊಳಿಸಿದರು. ಆನಂದಿಬಾಯಿ ದತ್ತು ನಾರ್ವೇಕರ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಪೊಲೀಸರನ್ನು ಲೆಕ್ಕಿಸದೇ ಕಡಲ ಕಿನಾರೆಯ ಕಡೆಗೆ ಜಯಘೋಷಗಳೊಂದಿಗೆ ಹೊರಟಿತು. ಈ ಹೋರಾಟದ ನಾಯಕತ್ವ ವಹಿಸಬೇಕಾಗಿದ್ದ ನಾ.ಸು. ಹರ್ಡೀಕರ ಅವರಿಗೆ ಅಂಕೋಲೆ ತಲುಪಲು ಸಾಧ್ಯವಾಗದ್ದರಿಂದ ಹೊನ್ನಾವರದ ಎಂ.ಪಿ. ನಾಡಕರ್ಣಿ ಮೆರವಣಿಗೆಯ ನೇತೃತ್ವ ವಹಿಸಿದ್ದರು. ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಸ್ವಾಮಿ ವಿದ್ಯಾನಂದರು ಬ್ರಿಟಿಷರು ಭಾರತೀಯರ ಮೇಲೆ ಹೇರಿರುವ ಅನ್ಯಾಯದ ಕಾನೂನುಗಳನ್ನು ಶಾಂತಿಯಿಂದ ಉಲ್ಲಂಘಿಸಿ ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದ್ದರು.

ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಿದ ಉಪ್ಪಿನ ಸತ್ಯಾಗ್ರಹದಲ್ಲಿ ವಂದಿಗೆ, ಶೆಟಗೇರಿ, ಹೊಸ್ಕೇರಿ, ಸೂರ್ವೆ, ಬಾವಿಕೇರಿ, ಹಿಚ್ಕಡ, ಕಣಗೀಲ ಮುಂತಾದ ಗ್ರಾಮಗಳ ನೂರಾರು ಹೋರಾಟಗಾರರು ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತರು. ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಅಂಕೋಲೆಯ ಕೀರ್ತಿ ದೇಶಾದ್ಯಂತ ಹರಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.