ಶುಕ್ರವಾರ, ಮಾರ್ಚ್ 5, 2021
24 °C

ಸ್ವಾವಲಂಬಿ ಜೀವನಕ್ಕೆ ನೆರವಾದ ನರ್ಸರಿ

ಎಚ್‌.ವಿ. ಸುರೇಶ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಸ್ವಾವಲಂಬಿ ಜೀವನಕ್ಕೆ ನೆರವಾದ ನರ್ಸರಿ

ಹೊಳೆನರಸೀಪುರ: ಹತ್ತಾರು ಎಕರೆ ಫಲವತ್ತಾದ ಭೂಮಿ ಹೊಂದಿದ್ದರೂ ಕೆಲಸಗಾರರಿಲ್ಲ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ, ಸಕಾಲಕ್ಕೆ ಮಳೆ ಬರುವುದಿಲ್ಲ, ಭೂಮಿಯಿಂದ ಈಗ ಏನೂ ಪ್ರಯೋಜನವಿಲ್ಲ ಎಂದು ಕೃಷಿಯಿಂದ ಬೇಸತ್ತವರಿಗೆ ಚೇತೋಹಾರಿ ಕಥೆ ಇಲ್ಲಿದೆ.ಹೊಳೆನರಸೀಪುರ ತಾಲ್ಲೂಕಿನ ಕೊಂಗಲಬೀಡು ಗ್ರಾಮದಲ್ಲಿ ನರ್ಸರಿ ಮಾಡಿ ವಿವಿಧ ಬಗೆಯ ಸಸಿಗಳನ್ನು ಬೆಳೆದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾ, ಹತ್ತಾರು ಸಂಸಾರಗಳಿಗೆ ಹೆಮ್ಮೆಯಿಂದ ಬದುಕಲು ದಾರಿಮಾಡಿಕೊಟ್ಟಿರುವ ಕೊಂಗಲಬೀಡು ಗ್ರಾಮದ ಪ್ರಗತಿಪರ ರೈತ ಎಚ್‌.ಆರ್‌. ಚಂದ್ರಪ್ಪ ಅವರ ನರ್ಸರಿಯ ಯಶೋಗಾಥೆ ಇದು.ಚಂದ್ರಪ್ಪ ಅಪ್ಪನಿಂದ ಬಳುವಳಿಯಾಗಿ ಬಂದ ಮುಕ್ಕಾಲು ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಬದುಕು ಕಂಡುಕೊಳ್ಳಲು ಸಾಧ್ಯವಾಗದೆ, ಹಸುಗಳನ್ನು ಕಟ್ಟಿ ಹಾಲು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದರೊಂದಿಗೆ ನಾನು ಮಾಡಿದ ಬೇಸಾಯದಲ್ಲಿ ಯಶಸ್ಸು ಕಾಣದಿರಲು ಕಾರಣ ಏನೆಂದು ಯೋಚಿಸುವಾಗ ಇವರ ಗಮನಕ್ಕೆ ಬಂದದ್ದು ತಮ್ಮ ಬೇಸಾಯಕ್ಕೆ ಉತ್ತಮ ಬೀಜ ಮತ್ತು ಸಸಿ ದೊರೆಯುತ್ತಿಲ್ಲ ಎಂಬ ಅಂಶ. ಇದರಿಂದ ನಾನೇ ಏಕೆ ಉತ್ತಮ ಸಸಿ ಬೆಳೆಸಿ ರೈತರಿಗೆ ಸಹಾಯ ಮಾಡಬಾರದು ಎಂದು ಯೋಚಿಸಿದರು. ಆಗ, ತಡ ಮಾಡದೆ ತಮ್ಮ ಪುತ್ರ ರಾಘವೇಂದ್ರ, ಮೋಹನ್‌ಕುಮಾರ ಅವರೊಂದಿಗೆ ಚರ್ಚಿಸಿ  ಮೂರು ಎಕರೆ ಜಮೀನು ಖರೀದಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದು 1997ರಲ್ಲಿ ನರ್ಸರಿ ಪ್ರಾರಂಭಿಸಿದರು.ಮಾವು– ಬೇವು– ಹೆಬ್ಬೇವು

ಇವರ ನರ್ಸರಿಯಲ್ಲಿ ಮಾವು, ಬೇವು, ಹೆಬ್ಬೇವು, ತೆಂಗು, ಸಪೋಟ, ಪರಂಗಿ, ನಿಂಬೆ, ದಾಳಿಂಬೆ, ಕರಿಬೇವು, ಸಿಲ್ವರ್‌ ಓಕ್‌, ಹಲಸು, ನುಗ್ಗೆ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ಎಲ್ಲಾ ಬಗೆಯ ಉತ್ತಮ ಸಸಿಗಳು ದೊರೆಯುತ್ತಿವೆ. ಬೇರೆ ಸಸಿಗಳಿಗೂ ಬೇಡಿಕೆ ಬಂದರೆ, 15 ದಿನದಲ್ಲಿ ಬೆಳೆಸಿಕೊಡುತ್ತಾರೆ. ಇವರ ನರ್ಸರಿಯಲ್ಲಿ ಬೆಳೆಸುತ್ತಿರುವ ಹೆಬ್ಬೇವು ಸಸಿಗಳಿಗೆ ದೇಶದಾದ್ಯಂತ ಬೇಡಿಕೆ ಇದ್ದು, ಗುಜರಾತ್‌, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಬಂದು ಲಾರಿಗಳಲ್ಲಿ ಸಸಿಗಳನ್ನು ಒಯ್ಯುತ್ತಾರೆ. ವರ್ಷಕ್ಕೆ 5 ರಿಂದ 6 ಲಕ್ಷ ಸಸಿಗಳನ್ನು ಮಾರಿ  ನಾಲ್ಕರಿಂದ ಐದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.ಇವರ ನರ್ಸರಿಯಲ್ಲಿ 20ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಇವರೆಲ್ಲರೂ ನಿಶ್ಚಿತ ಆದಾಯ ಮತ್ತು ಶಾಶ್ವತ ಬದುಕು ಕಂಡುಕೊಂಡಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.ಆಗ್ರೋ ನರ್ಸರಿ

ಇತ್ತೀಚೆಗೆ ಇವರು ಆಗ್ರೋ ನರ್ಸರಿ ಪ್ರಾರಂಭಿಸಿದ್ದು, ಅದರಲ್ಲಿ ಟೊಮೆಟೊ, ಮೆಣಸಿನ ಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಸಸಿಗಳನ್ನು ಬೆಳೆಸಿಕೊಡುತ್ತಾರೆ. ಅತಿ ಕಡಿಮೆ ಎತ್ತರಕ್ಕೆ ಬೆಳೆದು ಅತ್ಯುತ್ತಮ ಇಳುವರಿ ಕೊಡುವ ಹಾಗೂ ಮನೆಯ ಮಾಳಿಗೆಯಲ್ಲಿ ಬೆಳೆಸಬಹುದಾದ ಬೋನ್ಸಾಯ್‌ ಸಸಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಚಂದ್ರಪ್ಪ ಅವರ ಪುತ್ರ ರಾಘವೇಂದ್ರ ಹಾಗೂ ಮೋಹನ್‌ಕುಮಾರ್‌ ತೊಡಗಿಸಿಕೊಂಡಿದ್ದಾರೆ. ಹೊಳೆನರಸೀಪುರದಿಂದ ಹಳ್ಳಿಮೈಸೂರಿಗೆ ಹೋಗುವ ಮಾರ್ಗದಲ್ಲಿ ಹೋಗುವಾಗ ಕೊಂಗಲಬೀಡು ಗ್ರಾಮದಲ್ಲಿ ಇವರ ನರ್ಸರಿ ಕಾಣುತ್ತದೆ. ವಿವರಗಳಿಗೆ ದೂ: 94489 96581 ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.