ಭಾನುವಾರ, ಜನವರಿ 19, 2020
26 °C

ಹಂದನಕೆರೆಗೆ ‘ಹೇಮೆ’ ಹರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಬರಗಾಲದಿಂದ ತತ್ತರಿಸಿ ಹೋಗಿ­ರುವ ತಾಲ್ಲೂಕಿನ ಹಂದನಕೆರೆ ಹೋಬಳಿಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿ ರೈತರು ಆಗ್ರಹಿಸಿದರು.ಹಂದನಕೆರೆಯ ಗುರುಗಿರಿ ಸಿದ್ಧೇಶ್ವರ ಮಠದಲ್ಲಿ ಭಾನುವಾರ ಸಭೆ ಸೇರಿದ್ದ ರೈತರು ಹೇಮಾವತಿ ನೀರಿ­ಗಾಗಿ ಹೋರಾಟ ಸಮಿತಿ ರಚಿಸುವ ತೀರ್ಮಾನ ಕೈಗೊಂಡರು.ಹಂದನಕೆರೆ ಸಹಕಾರಿ ಸಂಘದ ಅಧ್ಯಕ್ಷ ಎಚ್.ಸಿ.ಪ್ರಕಾಶ್ ಮಾತನಾಡಿ, ಈಗಾಗಲೇ ಹಂದನಕೆರೆಯಿಂದ ಐದು ಕಿ.ಮೀ. ಅಂತರದಲ್ಲಿ ಹೇಮಾ­ವತಿ ಪೈಪ್‌ಲೈನ್ ಹಾಕಲಾಗಿದೆ. ಅರಸೀ­ಕೆರೆಯ ಕಣಕಟ್ಟೆ, ಹೊಸದುರ್ಗದ ಬಲ್ಲಾಳ­ಸಮುದ್ರಕ್ಕೆ ನೀರು ಒದಗಿಸಲಾಗುತ್ತಿದೆ. ಕೇವಲ ಅಡ್ಡ ಕೊಳವೆ ಜೋಡಿಸುವ ಮೂಲಕ ಹಂದನ­ಕೆರೆಗೆ ಹೇಮಾವತಿ ನೀರು ಒದಗಿಸಿ ಹೋಬಳಿಯ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹು­ದಾಗಿದ್ದರೂ; ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.ಹೊನ್ನವಳ್ಳಿ–ಶಶಿವಾಳ ಮಾರ್ಗವಾಗಿ ಕಣಕಟ್ಟೆ ಕೆರೆಗೆ ನೀರು ಹರಿಸಲು ಹಾಕಿರುವ ಹೇಮಾವತಿ ಕೊಳ­ವೆಗೆ ಅಡ್ಡಲಾಗಿ ಕೆಂಗಲಾಪುರದವರೆಗೆ 3ಕಿಮೀ ಪೈಪ್ ಅಳವಡಿಸಿದರೆ, ಬಲ್ಲಾಳಸಮುದ್ರ ಲೈನ್‌ಗೆ ಅಡ್ಡಲಾಗಿ ಮಾಡಾಳಿನಿಂದ ರಾಮಘಟ್ಟ­ದವರೆಗೆ 5ಕಿಮೀ ಕೊಳವೆ ಅಳವಡಿಸಿದರೆ ಕೆಂಗ್ಲಾಪುರ ತಾಂಡ್ಯ, ಭೀಮಸಮುದ್ರ, ಕಾನಕೆರೆ, ಬಂದ್ರೆಹಳ್ಳಿ, ಸೋರಲಮಾವು, ಲಿಂಗದಹಳ್ಳಿ, ಗೊಲ್ಲರಹಟ್ಟಿ, ಅರೇನಹಳ್ಳಿ, ಹೊನ್ನಶೆಟ್ಟಿಹಳ್ಳಿ, ಸಬ್ಬೇನಹಳ್ಳಿ, ಗುಮಗರಬಾಗಿ, ಗೋಪಾಲಪುರ, ಲಕ್ಷ್ಮೀಪುರ, ಟಿ.ತಾಂಡ್ಯ, ನಿರುವಗಲ್, ಗೂಬೆಹಳ್ಳಿ, ಯರೇಕಟ್ಟೆ, ಪುರದಕಟ್ಟೆ, ಹಳ್ಳಿ ತಿಮ್ಲಾಪುರ, ತೆಕ್ಕಲಪಾಳ್ಯ, ಕೆಂಗ್ಲಾಪುರ... ಸೇರಿದಂತೆ ಹಲವು ಹಳ್ಳಿಗಳ ನೀರಿನ ದಾಹ ಶಾಶ್ವತವಾಗಿ ತಣಿಯುತ್ತದೆ. ಅಲ್ಲದೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ.ಸಿದ್ಧಯ್ಯ ವಿವರಿಸಿದರು.ಈಗಾಗಲೇ 20 ಕೊಳವೆಬಾವಿ ಕೊರೆಸಿದ್ದು 1500 ಅಡಿ ಆಳಕ್ಕೆ ಇಳಿಸಿದ್ದೇನೆ. ಆದರೂ ನೀರು ಸಿಕ್ಕಿಲ್ಲ.18 ಬೋರ್ ಫೇಲ್ ಆಗಿವೆ. ಕೇವಲ 2 ಮಾತ್ರ ಓಡುತ್ತಿವೆ ಎಂದು ಹಳ್ಳಿತಿಮ್ಲಾಪುರದ ಬಸವೇಗೌಡ ಅಂತರ್ಜಲದ ದುಃಸ್ಥಿತಿ ವಿವರಿಸಿದರು.ಈ ಹಂಗಾಮಿನಲ್ಲೇ ನೂರಕ್ಕೂ ಹೆಚ್ಚು ಬೋರ್‌ ಕೊರೆಸಿದ್ದು ಶೇ.90 ಭಾಗ ನೀರು ಸಿಕ್ಕಿಲ್ಲ. ಗ್ರಾ.ಪಂ.ನಿಂದ ಹಂದನಕೆರೆಯಲ್ಲಿ 20, ಕೆಂಗ್ಲಾಪುರ 10, ಹಳ್ಳಿ ತಿಮ್ಲಾಪುರದಲ್ಲಿ, ರಾಮಘಟ್ಟದಲ್ಲಿ ತಲಾ 6, ಪುರದಕಟ್ಟೆಯಲ್ಲಿ 4 ಕೊಳವೆಬಾವಿ ಕೊರೆಸಲಾಗಿದೆ ಎಂದು  ರಾಮಲಿಂಗನಪಾಳ್ಯದ ಸೋಮಣ್ಣ ಹೇಳಿದರು.ಹಸಿರು ಸೇನೆ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್ ಹಂತ ಹಂತವಾಗಿ ಹೋರಾಟ ರೂಪಿಸುವುದಾಗಿ ತಿಳಿಸಿದರು. ರೈತರು ಸ್ವಂತ ಖರ್ಚಿನಲ್ಲಿ ಸರ್ವೆ ಮಾಡಿಸುವ, ಹೋರಾಟ ಸಮಿತಿ ರಚಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಂಡರು.ಜನಪ್ರತಿನಿಧಿಗಳು ಸಭೆಗೆ ಹಾಜರಾಗದಿದ್ದುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ರೈತ ಸಂಘದ ಮಲ್ಲಿಕಾರ್ಜುನಯ್ಯ, ಚಂದ್ರಣ್ಣ, ಗ್ರಾ.ಪಂ.ಸದಸ್ಯ ಕಂಠಪ್ಪ, ಮಾಜಿ ಸದಸ್ಯರಾದ ಎಚ್.ವಿ.ಸಿದ್ಧಯ್ಯ, ಅನಂತರಾಮಯ್ಯ, ಆರ್.ಶೇಖರಯ್ಯ, ಪ್ರಕಾಶ್, ರೈತ ಮುಖಂಡರಾದ ಎಚ್.ಆರ್.ಉಗ್ರಪ್ಪ, ಎನ್.ಹನುಮಂತಯ್ಯ, ರಮೇಶ್, ಎಚ್.ಆರ್.ಮಂಜುನಾಥ್, ಎಚ್.ಆರ್.ರೇವಣ್ಣ, ಲಕ್ಕಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)