ಗುರುವಾರ , ಮೇ 13, 2021
17 °C

ಹಂದಿಜ್ವರ: ನಿರ್ಲಕ್ಷ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಾಗರಿಕರು ಮತ್ತೆ ಸಾಂಕ್ರಾಮಿಕ ರೋಗಗಳ ಭೀತಿ    ಎದುರಿಸುತ್ತಿದ್ದಾರೆ. ಹಂದಿ ಜ್ವರ (ಎಚ್1ಎನ್1) ಹಾಗೂ ವಾಂತಿ ಭೇದಿಯ ಪ್ರಕರಣಗಳು ವರದಿಯಾಗಿವೆ. ಹಂದಿಜ್ವರಕ್ಕೆ ಐವರು ಮೃತಪಟ್ಟಿದ್ದಾರೆ. ಎಂಬತ್ತಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

 

ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಇಬ್ಬರು ರೋಗಿಗಳು ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಹಂದಿ ಜ್ವರ ತೀವ್ರವಾಗಿ ಹರಡುವ ಸಾಂಕ್ರಾಮಿಕ ರೋಗ. ಇದು ಹರಡದಂತೆ ನಿಯಂತ್ರಿಸುವ ಕ್ರಮಗಳ ಬಗ್ಗೆ ಮಹಾನಗರ ಪಾಲಿಕೆ ಆಡಳಿತ ಹೆಚ್ಚಿನ ಗಮನ ಕೊಡಬೇಕು.

 

ಹೊರ ರಾಜ್ಯ, ದೇಶಗಳಿಂದ ಬರುವ ಸೋಂಕುಪೀಡಿತರು ರೋಗ ಹರಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕು ಪೀಡಿತರು ಹಾಗೂ ಮೃತರ ಬಗ್ಗೆ ಖಚಿತ ಮಾಹಿತಿಗಳು ಸಿಗುತ್ತಿಲ್ಲ ಎನ್ನುವುದು ನಗರಪಾಲಿಕೆ ಆರೋಗ್ಯಾಧಿಕಾರಿಗಳ ಅಳಲು.ರೋಗ ಪೀಡಿತರ ಸಂಖ್ಯೆ ಎಷ್ಟೆಂಬುದು ಖಚಿತವಾದರೆ ಅದರ ತೀವ್ರತೆಯನ್ನು ಅಂದಾಜು ಮಾಡಿ ನಿಯಂತ್ರಣ ಕ್ರಮಗಳ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತದೆ. ಹಂದಿ ಜ್ವರ ಪೀಡಿತರು ವಾಸ ಮಾಡುವ ಪ್ರದೇಶದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು. ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದು ಪಾಲಿಕೆಯ ಕರ್ತವ್ಯವೇ ಆದರೂ ಜನರು ಸಹಕರಿಸದಿದ್ದರೆ ನಿಯಂತ್ರಣ ಸಾಧ್ಯವಾಗದು.ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ಸೋಂಕು ಪೀಡಿತರ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ಸಿಗುತ್ತಿಲ್ಲ. ಪಾಲಿಕೆ ಸಿಬ್ಬಂದಿಯೇ ಆಸ್ಪತ್ರೆಗೆ ಹೋಗಿ ಮಾಹಿತಿ ಸಂಗ್ರಹಿಸಲು ಆಸ್ಪತ್ರೆ ಆಡಳಿತಗಳು ಅವಕಾಶ ಕೊಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಸಾಂಕ್ರಾಮಿಕ ರೋಗಗಳ ವಿಷಯದಲ್ಲಿ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಪ್ರತಿಷ್ಠೆಯನ್ನು ಬದಿಗಿಟ್ಟು ಪಾಲಿಕೆಗೆ ಮಾಹಿತಿ ವಿನಿಮಯದ  ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು.1918ರಲ್ಲಿ ವಿಶ್ವದ ಐವತ್ತು ಕೋಟಿ ಜನರು ಹಂದಿ ಜ್ವರಕ್ಕೆ ಬಲಿಯಾಗಿದ್ದರು. 1976 ಮತ್ತು 2007ರಲ್ಲಿ ಭಾರತದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿತ್ತು. ಹೆಚ್ಚಿನ ಸಂಶೋಧನೆಗಳು ನಡೆದಿದ್ದರೂ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಹಂದಿ ಜ್ವರದ ಸಾವುಗಳು ಸಂಭವಿಸುತ್ತಿವೆ.ರೋಗ ಹರಡುವ ವೈರಾಣುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ವ್ಯಾಪಕ ನೈರ್ಮಲ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸರ್ಕಾರ ಮತ್ತು ಪಾಲಿಕೆ ಗಮನ ಕೊಡಬೇಕು. ರೋಗ ಪೀಡಿತರಿಗೆ ಉತ್ತಮ ಔಷಧ ಹಾಗೂ ವೈದ್ಯೋಪಚಾರ ಸಿಗುವಂತೆ ನೋಡಿಕೊಳ್ಳಬೇಕು.

 

ನಗರದಲ್ಲಿ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ತಿಂಡಿ ಪದಾರ್ಥಗಳು, ಕತ್ತರಿಸಿದ ಕಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಈಗ ಬೇಸಿಗೆ. ನಗರದಲ್ಲಿ ಕುಡಿಯುವ ನೀರಿನ ಕೊರತೆ ಇದೆ.

 

ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯ ಆಗುತ್ತಿರುವುದರಿಂದ ಜನರು ಕೈಗೆ ಸಿಕ್ಕಿದ ನೀರನ್ನು ಬಳಸುವ ಸಾಧ್ಯತೆ ಇದೆ. ಜನ ಸಾಮಾನ್ಯರಿಗೆ ಸೋಂಕು ರೋಗಗಳ ಬಗ್ಗೆ ತಿಳುವಳಿಕೆ ನೀಡುವ ಜಾಗೃತಿ ಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.