ಸೋಮವಾರ, ಮಾರ್ಚ್ 1, 2021
31 °C
ಕಸ, ಹಂದಿ ಮುಕ್ತನಗರದ ಕನಸು ಗಗನಕುಸುಮ, ನನೆಗುದಿಗೆ ಬಿದ್ದ ಹಂದಿ ಸ್ಥಳಾಂತರ ಕಾರ್ಯ

ಹಂದಿ ಸಂಹರಿಸುತ್ತೇವೆ ಎಂದವರು ನಾಪತ್ತೆ!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಹಂದಿ ಸಂಹರಿಸುತ್ತೇವೆ ಎಂದವರು ನಾಪತ್ತೆ!

ದಾವಣಗೆರೆ: ನಗರವನ್ನು ಕಸ, ಹಂದಿಮುಕ್ತ ನಗರವನ್ನಾಗಿ ಮಾಡಬೇಕು ಎಂಬ ಜಿಲ್ಲಾಡಳಿತ ಹಾಗೂ ಪಾಲಿಕೆಯ ಕನಸು ಇನ್ನೂ ಸಾಕಾರಗೊಂಡಿಲ್ಲ. ನಗರದ ಪ್ರತಿಷ್ಠಿತ ಬಡಾವಣೆಗಳಿಂದ ಹಿಡಿದು ಕೊಳಚೆ ಪ್ರದೇಶಗಳವರೆಗೂ ಹಂದಿಗಳದ್ದೇ ಸಾಮ್ರಾಜ್ಯ. ಅವುಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಯಾರೂ ಆಲಿಸುತ್ತಿಲ್ಲ; ಅವರದ್ದು ತೀರದ ಗೋಳು...ಹಳೆ ದಾವಣಗೆರೆ ಭಾಗದ ಬಾಷಾನಗರ, ಚೌಕಿಪೇಟೆ, ಮಂಡಿಪೇಟೆ, ಕಾಯಿಪೇಟೆ, ಶಿವಾನಗರ, ದೇವರಾಜ ಅರಸು ಬಡಾವಣೆ, ಆಜಾದ್‌ ನಗರ, ಮಂಡಕ್ಕಿಬಟ್ಟಿ ಲೇಔಟ್‌, ಭಟ್ಟಿಲೇಔಟ್‌, ಬೂದಾಳ್‌, ಬಸವನಗರ, ರೈಲ್ವೆ ಹಳಿಯ ಆಸು–ಪಾಸು, ಶೇಖರಪ್ಪ ನಗರದಲ್ಲಿ ಹಂದಿಗಳ ಸಾಮ್ರಾಜ್ಯವೇ ಇದೆ. ಗಲ್ಲಿಗಲ್ಲಿಗಳಲ್ಲಿ, ರಸ್ತೆರಸ್ತೆಗಳಲ್ಲಿ ಯಾರಿಗೂ ಅಂಜದೆ ಅಳುಕದೆ ಹಂದಿಗಳು ವಿಹರಿಸುತ್ತಿವೆ.ಪ್ರತಿಷ್ಠಿತ ಬಡಾವಣೆಗಳಾದ ವಿದ್ಯಾನಗರ, ಆಂಜನೇಯ ಬಡಾವಣೆ, ಸರಸ್ವತಿ ನಗರ, ಕೆ.ಬಿ.ಬಡಾವಣೆ, ನಿಜಲಿಂಗಪ್ಪ ಲೇಔಟ್‌, ನಿಟುವಳ್ಳಿ, ಪಿ.ಜೆ. ಬಡಾವಣೆ, ಎಂಸಿಸಿ ‘ಎ’ ಮತ್ತು ‘ಬಿ’ ಬ್ಲಾಕ್‌, ಎಸ್‌ಎಸ್‌ ಲೇಔಟ್‌... ಹೀಗೆ ಎಲ್ಲಿಲ್ಲ ಹೇಳಿ ಈ ಹಂದಿಗಳು. ಅವುಗಳೊಂದಿಗೆ ಜನರೂ ’ಸ್ನೇಹಿಮಯಿ’ ಆಗಿದ್ದಾರೆ. ಪುಟ್ಟಮಕ್ಕಳೂ ಅವುಗಳೊಂದಿಗೆ ಆಟವಾಡುತ್ತ ಅಸಹನೀಯವಾಗಿ ಬದುಕುವ ಸ್ಥಿತಿಯಿದೆ. ಪಾಲಿಕೆ ಸದಸ್ಯರೂ ಇದನ್ನು ಕಂಡು ಕಾಣದಂತಿದ್ದಾರೆ! ಶಾಸಕರು ಆ ಬಗ್ಗೆ ಯೋಚಿಸಿಲ್ಲ; ಜಿಲ್ಲಾಡಳಿತವೂ ತಲೆಕೆಡಿಸಿಕೊಂಡಿಲ್ಲ.ಬರೀ ಸಭೆ– ಭರವಸೆಯ ಮಾತು: ಹಂದಿ ಹಾವಳಿ, ಹಂದಿ ಕಚ್ಚಿಗಾಯಗೊಳಿಸುವ ದೂರಗಳ ಸರಮಾಲೆಯೇ ಪಾಲಿಕೆಗೆ ಸಲ್ಲಿಕೆಯಾಗಿವೆ. ಆದರೆ, ಪಾಲಿಕೆ ಮಾತ್ರ ಈ ಬಗ್ಗೆ ಗಮನ ಹರಿಸಿಲ್ಲ. ಕಳೆದ ಮೂರು ತಿಂಗಳ ಹಿಂದೆ ಹಂದಿ ಮಾಲೀಕರ ಸಭೆ ಕರೆದು, ನಾಗರಿಕ ಕಣ್ಣೊರೆಸುವ ತಂತ್ರ ಮಾಡಿತು ಪಾಲಿಕೆ. ಹಂದಿ ಮಾಲೀಕರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದ ಪಾಲಿಕೆ ಸದಸ್ಯರು, ಆಯುಕ್ತರು ಜನರ ಸಮಸ್ಯೆಯನ್ನೇ ಮರೆತರು. ದೊಡ್ಡಬಾತಿ ಸಮೀಪ ಹಂದಿ ಸಾಕಾಣಿಕೆ ಶೆಡ್‌ ನಿರ್ಮಿಸಿಕೊಡುತ್ತೇವೆ. ನೀವು ಒಪ್ಪಿಕೊಳ್ಳಿ ಎಂದು ಹೇಳಿ ಸುಮ್ಮನಾಯಿತು.ಪಾಲಿಕೆ ಕಾಯಿದೆ ಅನ್ವಯ ರಸ್ತೆಯಲ್ಲಿ ಹಂದಿಗಳನ್ನು ಬಿಡುವಂತಿಲ್ಲ. ಹಂದಿ ಹಾವಳಿಯಿಂದ ನಗರದ ಅಂದ ಕೆಡುತ್ತಿದೆ. ಇದರಿಂದ ರಸ್ತೆಗೆ ಬಂದ ಹಂದಿಗಳನ್ನು ಸಾಯುಸುತ್ತೇವೆ ಎಂದು ಆಕ್ರೋಶಭರಿತ ಮಾತನ್ನಾಡಿದ್ದ ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ ‘ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಸುಮ್ಮನಿದ್ದಾರೆ ಎಂದು ಜನರೇ ದೂರುತ್ತಿದ್ದಾರೆ.ಉದ್ಯಾನ– ಅದ್ವಾನ: ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲಿ ನಗರದ ನೂರಾರು ಪಾರ್ಕ್‌ಗಳು ಅಭಿವೃದ್ಧಿ ಕಂಡವು. ಉದ್ಯಾನದಲ್ಲಿ ಸಸಿಗಳು ನಳನಳಿಸಲು ಪ್ರಾರಂಭಿಸಿದವು.  ಹುಲ್ಲು ಹಸಿರಾಯಿತು. ಆದರೆ, ಇದೀಗ ಹಂದಿಗಳೇ ಆ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಅತ್ತ ಪೌರ ಕಾರ್ಮಿಕರು ಸಸಿಗಳಿಗೆ ನೀರು ಹಾಯಿಸಿ ಹೊರಗೆ ಕಾಲಿಟ್ಟ ಕೂಡಲೇ ತಂಡೋಪತಂಡವಾಗಿ ಬರುವ ಹಂದಿಗಳು ಅವುಗಳನ್ನು ಕಿತ್ತು ಹಾಕುತ್ತಿವೆ. ಸಸಿಗಳ ಚಿಗುರು ತಿಂದು ಉದ್ಯಾನದಲ್ಲಿ ನಿದ್ರಿಸುತ್ತಿವೆ.ಚರಂಡಿಗೆ ಕಂಟಕ: ಈ ಹಂದಿಗಳು ಬರೀ ಉದ್ಯಾನ ಮಾತ್ರ ಹಾಳು ಮಾಡುತ್ತಿಲ್ಲ. ಬದಲಾಗಿ ಒಳಚರಂಡಿ ವ್ಯವಸ್ಥೆಗೆ ಕಂಟಕವಾಗಿ ಮಾರ್ಪಟ್ಟಿವೆ. ಪಾಲಿಕೆ ಒಳಚರಂಡಿ ದುರಸ್ತಿಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಕ್ಷಣಮಾತ್ರದಲ್ಲಿ ಹಂದಿಗಳು ಅವುಗಳನ್ನು ಹಾಳುಗೆಡವುತ್ತಿವೆ.ಚರಂಡಿಗೆ ಬಟ್ಟೆ, ಹಳಸಿದ ಅನ್ನ, ಸಾಂಬಾರು ಪದಾರ್ಥ ಸುರಿಯವ ಕಾರಣ ಹಂದಿಗಳಿಗೆ ಚರಂಡಿ ಆವಾಸ ಸ್ಥಾನವಾಗಿದೆ. ಚರಂಡಿ ಯಲ್ಲಿಯೇ ನಿದ್ರಿಸುವ ಹಂದಿಗಳು ಊರು ಹಾಳು ಮಾಡುತ್ತಿವೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಜೋರು ಮಳೆ ಬಂದರೆ ಚರಂಡಿ ನೀರು ಮನೆಗೆ ನುಗ್ಗುವ ಸ್ಥಿತಿಯಿದೆ. ಆದ್ದರಿಂದ ಮೊದಲು ಹಂದಿ ಮುಕ್ತ ನಗರ ಮಾಡಿ ಎಂಬ ಕೂಗು ಮತ್ತಷ್ಟು ಪ್ರಬಲವಾಗಿದೆ.ಜಿಲ್ಲಾಡಳಿತವೂ ಮೌನ: ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಸಹ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಹಂದಿ ಸ್ಥಳಾಂತರ ಮಾಡುವ ಮಾತುಗಳ ನ್ನಾಡು ತ್ತಿದ್ದರು. ವಾರದಲ್ಲಿ ಒಂದು ದಿವಸ ನಗರದ ಸ್ವಚ್ಛತೆಗೆ ಜಿಲ್ಲಾಡಳಿತವೇ ಆಗಮಿಸಲಿದೆ ಎಂದು ಹೇಳಿದ್ದರು.ಇದೀಗ ನಗರ ಪ್ರತಿ ರಸ್ತೆಯಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯ, ಛತ್ರಗಳ ತ್ಯಾಜ್ಯ, ದೂಳು, ಹೋಟೆಲ್‌, ಅಂಗಡಿಗಳ ಕಸವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರೂ ದಾವಣಗೆರೆಯ ಜಡತ್ವ ಆಡಳಿತಕ್ಕೆ ಒಗ್ಗಿಕೊಂಡರೇ? ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸುತ್ತಾರೆ ದಾವಣಗೆರೆಯ ಶ್ರೀಕಾಂತ್‌.ಚುನಾವಣೆ ತಂದ ಆದಾಯ

ದಾವಣಗೆರೆಯ ಹಂದಿಗಳಿಗೆ ಬೇಡಿಕೆ ಇರುವುದೇ ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ.ಮೊದಲ ಹಂತದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ದಾವಣಗೆರೆಯಿಂದ ಟನ್‌ಗಳಲೇ ಹಂದಿಗಳು ಈ ಜಿಲ್ಲೆಗೆ ಸಾಗಣೆ ಆಗಿದೆ ಎಂದು ಮಾಲೀಕರೇ ಒಪ್ಪಿಕೊಳ್ಳುತ್ತಾರೆ. ಚುನಾವಣೆಯ ಬಾಡೂಟಕ್ಕೆ ಫಾರಂ ಹಂದಿಗಳು ಖಾಲಿಯಾದ ಬಳಿಕ ದಾವಣಗೆರೆಯ ಓಡಾಡುವ ಹಂದಿಗಳಿಗೆ ಬೇಡಿಕೆ ಬಂದಿತ್ತು. ಇದರಿಂದ ಮಾಲೀಕರು ಹಣ ಗಳಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.