ಮಂಗಳವಾರ, ಜೂನ್ 22, 2021
23 °C

ಹಕ್ಕು ಬಳಸಿಕೊಳ್ಳಲು ಗ್ರಾಹಕರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಪ್ರತಿಪಾದಿಸಿದರು.ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಮತ್ತು ಕಾನೂನು ಮಾಪನಾಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ವರ್ಷದಲ್ಲಿ ಎರಡು ಬಾರಿ ಗ್ರಾಹಕರ ದಿನ ಆಚರಿಸುವ ಮೂಲಕ ಗ್ರಾಹಕರ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರಲ್ಲಿ ಅರಿವು ಮೂಡುತ್ತಿರುವುದರಿಂದ ಗ್ರಾಹಕರ ವೇದಿಕೆಗೆ ದೂರುಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.ಗ್ರಾಹಕರು ಉತ್ತಮ ವಸ್ತುಗಳನ್ನು ಪಡೆಯಬೇಕು. ಯಾವುದೇ ರೀತಿಯ ತೊಂದರೆಗಳಾದರೆ ಪರಿಹಾರ ಪಡೆಯಲು ಅಗತ್ಯವಾದ ದಾಖಲೆಗಳ ಸಮೇತ ಗ್ರಾಹಕರ ವೇದಿಕೆಗೆ ದೂರು ನೀಡುವ ಮೂಲಕ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದರು.ಪಡಿತರ ಚೀಟಿ ಪಡೆಯಲು ಸರ್ಕಾರ ಆನ್‌ಲೈನ್ ಪದ್ಧತಿ ಜಾರಿಗೊಳಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಪಡಿತರ ಚೀಟಿ ಪಡೆಯಬಹುದು. ಇತ್ತೀಚೆಗೆ ಜಾರಿಗೆ ಬಂದಿರುವ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ ಅಡಿಯಲ್ಲಿ ನಾಗರಿಕರು ತಮ್ಮ ಸಮಸ್ಯೆಯನ್ನು ಪರಿಹಾರ ಪಡೆದುಕೊಳ್ಳುತ್ತಿದ್ದಾರೆ. ಈ ಕಾಯ್ದೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಮಾತ್ರ ಸದ್ಯ ಜಾರಿಯಾಗಿದ್ದು, ಏಪ್ರಿಲ್ ಎರಡರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಿದರು.ಗ್ರಾಹಕರ ವೇದಿಕೆ ಅಧ್ಯಕ್ಷ ವಿ.ಎಚ್. ರಾಮಚಂದ್ರಪ್ಪ ಮಾತನಾಡಿ, ಸರ್ಕಾರ ಗ್ರಾಹಕರ ಹಕ್ಕುಗಳ ಬಗ್ಗೆ ರೂಪಿಸಿರುವ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ಇತ್ತೀಚೆಗೆ ಶಾಲಾ ಮತ್ತು ಕಾಲೇಜುಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಸ್ಥಾಪಿಸಿದ್ದರಿಂದ ಗ್ರಾಹಕರ ವೇದಿಕೆಗೆ ದೂರುಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯ ಸದಸ್ಯರಾದ ಎಚ್. ರಾಮಸ್ವಾಮಿ ಮತ್ತು ಸೌಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಮಂಟೇಸ್ವಾಮಿ ಸ್ವಾಗತಿಸಿದರು.ಸಾವಿತ್ರಮ್ಮ ಪ್ರಾರ್ಥಿಸಿದರು. ಕಾನೂನು ಮಾಪನಾಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕುಮಾರ್ ವಂದಿಸಿದರು.

 

 ಹಾಲು ಮಾರಾಟಗಾರರಿಗೆ ಎಚ್ಚರಿಕೆ

ಹೆಚ್ಚಿನ ದರಕ್ಕೆ ಹಾಲು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ವೀರೇಂದ್ರ ಕುಮಾರ್ ತಿಳಿಸಿದರು.ಹಾಲಿನ ದರವನ್ನು ಮುದ್ರಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ಹೆಚ್ಚಿನ ದರಕ್ಕೆ ಹಾಲು ಮಾರಾಟ ಮಾಡಿದರೆ ಅಂಗಡಿಯ ಮೇಲೆ ದಂಡ ಹಾಕಲಾಗುವುದು ಮತ್ತು ಕೆಎಂಎಫ್‌ಗೆ ದೂರು ನೀಡಿ ಪರವಾನಿಗೆ ರದ್ದು ಮಾಡಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.ಈ ಮೊದಲು ವರ್ತಕರು ವಸ್ತುಗಳನ್ನು ತೂಕದಲ್ಲಿ ನೀಡುತ್ತಿದ್ದರು. ಆದರೆ, ಈಗ ಬಹುತೇಕ ವಸ್ತುಗಳು ಪ್ಯಾಕೆಟ್‌ನಲ್ಲಿ ಮಾರಾಟವಾಗುತ್ತಿವೆ. ಈ ಪ್ಯಾಕೆಟ್‌ಗಳಲ್ಲಿ ವ್ಯತ್ಯಾಸ ಕಂಡುಬಂದರೆ ಗ್ರಾಹಕರು ಇಲಾಖೆಗೆ ದೂರು ನೀಡಬಹುದು.ಗ್ರಾಹಕರು ದೂರುಗಳನ್ನು ಲಿಖಿತವಾಗಿ ಅಥವಾ ದೂರವಾಣಿಯ ಮೂಲಕ ಸಲ್ಲಿಸಬಹುದಾಗಿದೆ. ಹೆಸರನ್ನು ಸಹ ಗೌಪ್ಯವಾಗಿ ಇಡಲಾಗುವುದು. ಗ್ರಾಹಕರು ಕಾಯ್ದೆಯ ಪ್ರಯೋಜನ ಪಡೆಯುವಂತೆ ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.