ಭಾನುವಾರ, ಮಾರ್ಚ್ 7, 2021
31 °C
ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ: ಎನ್. ಶಂಕ್ರಪ್ಪ

ಹಗರಣಗಳಿಂದ ತುಂಬಿರುವ ರಾಜ್ಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಣಗಳಿಂದ ತುಂಬಿರುವ ರಾಜ್ಯ ಸರ್ಕಾರ

ಯಾದಗಿರಿ: ರಾಜ್ಯ ಸರ್ಕಾರ ಮೂರು ವರ್ಷದಲ್ಲಿ ಶೂನ್ಯ ಸಾಧನೆ ಮಾಡಿದೆ. ಪಕ್ಷದ ಒಳಜಗಳ, ಆರೋಪ ಪ್ರತ್ಯಾರೋಪಗಳ ಮೂಲಕ ಜನರನ್ನು ಮರೆತಿರುವ ಸರ್ಕಾರ ಕೋಮಾ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ಎನ್.ಶಂಕ್ರಪ್ಪ  ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳ ಮೇಲಿನ ಹಿಡಿತ ಕಳೆದುಕೊಂಡಿರುವ ಜನಪ್ರತಿನಿಧಿಗಳ ಆಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜನರ ಸಮಸ್ಯೆ ನೀಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.ಬರಗಾಲದಿಂದ ಕಂಗಾಲಾದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ ಮಾಡಬೇಕಾದ ಸರ್ಕಾರ ಕುಂಟು ನೆಪ ಹೇಳುತ್ತಾ, ಪರೋಕ್ಷವಾಗಿ ರೈತರ ಸಾವಿಗೆ ಕಾರಣವಾಗಿದೆ.ರೈತರ ಸರಣಿ ಸಾವು ಮತ್ತು ಅಧಿಕಾರಿಗಳ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರ ನಡೆಸಲು ಆಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು. ಸರ್ಕಾರದ ದುರಾಡಳಿತದಿಂದ ಜನರು ಬೇಸರಗೊಂಡಿದ್ದು, ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದಾರೆ.  ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150ಸ್ಥಾನವನ್ನು ಗೆಲ್ಲಲಿದ್ದು, ಯಾದಗಿರಿ ಜಿಲ್ಲೆಯಲ್ಲಿರುವ ನಾಲ್ಕು ಸ್ಥಾನವನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಮತ್ತು ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪ  ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದರು.ಶಾಸಕ ಗುರು ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಅಭಿವೃದ್ಧಿಗಾಗಿ ₹40 ಸಾವಿರ ಕೋಟಿ ಸಾಲ ಮಾಡಿದರೆ, ಕಾಂಗ್ರೆಸ್ ಸರ್ಕಾರ ಕೇವಲ ಮೂರು ವರ್ಷದಲ್ಲಿ ₹75 ಸಾವಿರ ಕೋಟಿ ಸಾಲ ಮಾಡಿದೆ.ಆದರೆ, ಒಂದು ಕಡೆಯೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಕೆಳ ಹಂತದಿಂದ ಮೇಲಿನವರೆಗೂ ಎಲ್ಲರೂ ಹಣವನ್ನು ನುಂಗುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನರು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಲ್ಲಿ ತರಲಿದ್ದಾರೆ ಎಂದರು.ಮಾಜಿ ಸಚಿವ ರಾಜುಗೌಡ ಮಾತನಾಡಿ, ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ  ಬಂದೇ ಬರುತ್ತದೆ ಎಂದು  ಭವಿಷ್ಯ ನುಡಿದರು.ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡಿದರೆ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ಮಿಷನ್ 150 ಗುರಿ ತಲುಪಲು ಸಾಧ್ಯ ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ, ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ, ವೆಂಕಟ ರೆಡ್ಡಿ ಮುದ್ನಾಳ, ವೇಣು ಮಾಧವನಾಯಕ, ಸಾಯಿಬಣ್ಣ ಬೋರಬಂಡಾ, ಡಾ.ಶರಣ ಭೂಪಾಲ ರೆಡ್ಡಿ ನಾಯ್ಕಲ್, ಚನ್ನಾರೆಡ್ಡಿ ಮದರಕಲ್, ಹಣಮಂತ ಇಟಗಿ, ಅಮಾತೆಪ್ಪ ಕಂದಕೂರ  ಶರಣಗೌಡ ಬಾಡಿಯಾಳ, ಭೀಮರಾಯ ಮೇಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.