ಸೋಮವಾರ, ಮೇ 10, 2021
25 °C

ಹಣಕ್ಕಿಂತ ಗುಣವೇ ಪ್ರಧಾನ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹಣ, ಅಂತಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದನ್ನೇ ಜೀವನದ ಗುರಿ ಎಂದು ಭಾವಿಸದೆ ಗುಣ, ನೀತಿ ಮುಖ್ಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಕರೆ ನೀಡಿದರು.ಹರಪನಹಳ್ಳಿ ತಾಲ್ಲೂಕು ಕಮ್ಮತ್ತಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವ ತತ್ವಗಳು ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಶಕ್ತವಾಗಿವೆ. ಬಸವಣ್ಣ ಸೇರಿದಂತೆ ಇತರೆ ಶರಣರ ವಚನಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಚನ್ನಬಸವ ಶಿವಯೋಗಿಗಳು, ವಚನ ಸಾಹಿತ್ಯದ ಸಾರವನ್ನು ಜನರಿಗೆ ತಲುಪಿಸಲು ನಿರಂತರವಾಗಿ ಶ್ರಮಿಸಿದರು. ಕನ್ನಡ ಸಾಹಿತ್ಯದಂತೆ ಜೈನ ಸಾಹಿತ್ಯದ ಬಗ್ಗೆಯೂ ಆಳವಾದ ಜ್ಞಾನ ಹೊಂದಿದ್ದ ಅವರು ಸತ್ಯ, ಅಹಿಂಸೆಯ ತತ್ವದ ಮಹತ್ವವನ್ನು ಜನರಿಗೆ ತಲುಪಿಸಿದರು ಎಂದು ಶ್ಲಾಘಿಸಿದರು.ಭೂಮಿಯ ಮೇಲೆ ನಾವು ಎಷ್ಟು ದಿನ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ. ಅಂತಹ ಆದರ್ಶದ ಬದುಕು ನಡೆಸಿದ ಕೀರ್ತಿ ಚನ್ನಬಸವ ಶ್ರೀಗಳಿಗೆ ಸಲ್ಲುತ್ತದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರೈತರು ಅಧ್ಯಾತ್ಮದ ಜತೆಗೆ, ಆರ್ಥಿಕ ದೃಢತೆಯತ್ತಲೂ ಗಮನಹರಿಸಬೇಕು. ಮೆಕ್ಕೆಜೋಳದಂತಹ ಏಕರೀತಿಯ ಬೆಳೆಯ ಬದಲು ತೋಟಗಾರಿಕಾ ಬೆಳೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಸರ್ಕಾರ ತೋಟಗಾರಿಕೆಗೆ ಸಾಕಷ್ಟು ಸಬ್ಸಿಡಿ ನೀಡುತ್ತಿದೆ. ರೂ 1,050 ಕೋಟಿ ಅನುದಾನ ನೀಡಿದೆ. ರೈತರು ಇಲಾಖೆಯ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಚಿಕ್ಕಮಗಳೂರು ಬಸವಮಂದಿರದ ಜಯ ಬಸವಾನಂದ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ. ಬಸವನಗೌಡ್ರು, ಮಂಜುಳಾ ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವೀಂದ್ರನಾಥ್ ಮಠಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ಚನ್ನಬಸವಶ್ರೀಗಳ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಗ್ರಾಮದ ಮುಖಂಡ ಕೆ.ಎಸ್. ನಿಂಗಪ್ಪ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವ ಭಜನಾ ಸಂಘದ ಸದಸ್ಯರು ವಚನಗೀತಾ ಗಾಯನ ನಡೆಸಿಕೊಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.