ಮಂಗಳವಾರ, ಜನವರಿ 28, 2020
17 °C

ಹಣಕ್ಕಿಂತ ಸೇವೆ ಹೆಚ್ಚು ಸುಖ: ಶಿವಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಹಣ ಗಳಿಸುವುದಕ್ಕಿಂತ ಹೆಚ್ಚಿನ ಸುಖ ಬಡಜನರ ಸೇವೆ ಮಾಡುವುದರಿಂದ ದೊರೆಯುತ್ತದೆ ಎಂದು ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಎಚ್.ಎಸ್. ಶಿವಶಂಕರ್ ಅವರ ಜನ್ಮದಿನದ ಅಂಗವಾಗಿ ಎಚ್.ಎಸ್. ಶಿವಶಂಕರ್ ಅಭಿಮಾನಿ ಬಳಗ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ಮೇಳದಲ್ಲಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಬಡಜನರಿಗೆ ಆರೋಗ್ಯ ತಪಾಸಣೆ ಹೆಚ್ಚಿನ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಬಡಜನರ ಸೇವೆ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ನನ್ನ ಜನ್ಮದಿನವನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಎಚ್.ಎಸ್. ಶಿವಶಂಕರ್ ಅಭಿಮಾನಿ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.ಕಾಯರ್ಕ್ರಮಕ್ಕೆ ಕೈ ಜೋಡಿಸಿರುವ ರಾಜ್ಯದ ವಿವಿಧ ಆಸ್ಪತ್ರೆಯ ವೈದ್ಯರು ಹಾಗೂ ದಾವಣಗೆರೆ ಜಿಲ್ಲಾ ಔಷಧಿ ಮಾರಾಟಗಾರರ ಸಂಘದವರಿಗೆ ಧನ್ಯವಾದ ಅರ್ಪಿಸಿದರು.ಪಂಚಾಮಸಾಲಿ ಗುರುಪೀಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಜನಪ್ರತಿನಿಧಿಗಳು ಸಮಾಜ ಹಾಗೂ ಬಡವರ ಬಗ್ಗೆ ಈ ರೀತಿಯ ಸೇವಾ ಮನೋಭಾವ ಹೊಂದುವುದು ಅವಶ್ಯಕ. ಆರೋಗ್ಯ ಇಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೂ ಅತ್ಯಗತ್ಯ ಎಂದು ಹೇಳಿದರು.ಬಡಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡುತ್ತಿರುವುದು ನಿಜವಾಗಿ ಶ್ಲಾಘನೀಯ. ಶಾಸಕರ ಅಭಿಮಾನಿಗಳ ಈ ಕಾರ್ಯ ಬೇರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದರು.ಶಿಬಿರದಲ್ಲಿ ಶಾಸಕ ಎಚ್.ಎಸ್. ಶಿವಶಂಕರ್ ರಕ್ತದಾನ ಮಾಡಿದರು. ಆರೋಗ್ಯ ಮೇಳದಲ್ಲಿ 1879 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಎನ್.ಜಿ. ನಾಗನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 108 ಲಿಂಗೇಶ್ವರ ದೇವಸ್ಥಾನದ ಬಸವಲಿಂಗ ಸ್ವಾಮೀಜಿ, ನಗರಸಭೆ ಸದಸ್ಯರಾದ ಎಂ. ನಾಗರಾಜ್, ಪ್ರತಿಭಾ ಕುಲಕರ್ಣಿ, ಡಿ. ಉಜ್ಜೇಶ್, ಪಿ. ವಿರೂಪಾಕ್ಷಿ, ಆರೋಗ್ಯ ರಕ್ಷಾ ಸಮಿತಿಯ ಶೀಲಾ ಕೋಟ್ರೇಶ್, ನಾಗಭೂಷಣ್, ಫಕ್ಕೀರಪ್ಪ, ಜಿ. ನಂಜಪ್ಪ, ತಹಶೀಲ್ದಾರ್ ಗೀತಾ ಜವಳಕರ್, ಪೌರಾಯುಕ್ತ ಎಂ.ಕೆ. ನಲವಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಲ್. ಹನುಮಾನಾಯ್ಕ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)