ಸೋಮವಾರ, ಸೆಪ್ಟೆಂಬರ್ 20, 2021
23 °C

ಹಣದುಬ್ಬರ: ಆರ್‌ಬಿಐ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣದುಬ್ಬರ: ಆರ್‌ಬಿಐ ಸಲಹೆ

ಮುಂಬೈ (ಪಿಟಿಐ): `ಹಣದುಬ್ಬರ ನಿರ್ಧರಿಸಲು ಸದ್ಯ ಜಾರಿಯಲ್ಲಿರುವ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ವ್ಯವಸ್ಥೆಯು ಸಮರ್ಪಕವಾಗಿಲ್ಲ. ಇದರ ಬದಲಿಗೆ ಉತ್ಪಾದಕರ ದರ ಸೂಚ್ಯಂಕ (ಪಿಪಿಐ) ಮೂಲಕ ಸರಕು ಮತ್ತು ಸೇವೆಗಳ  ನೈಜ ಬೆಲೆ ಏರಿಳಿತ ನಿರ್ಧರಿಸಬಹುದು~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ.

ಈಗಿರುವ `ಡಬ್ಲ್ಯುಪಿಐ~ ವ್ಯವಸ್ಥೆ ತೆಗೆದುಹಾಕಿ, ಇನ್ನಷ್ಟು ವೈಜ್ಞಾನಿಕವಾದ `ಪಿಪಿಐ~ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಪ್ರಸ್ತಾವವನ್ನು ಸುಬ್ಬರಾವ್ ಮಂಗಳವಾರ ಇಲ್ಲಿ ನಡೆದ ಆರನೇ ಅಂಕಿ ಅಂಶ ಸಮ್ಮೇಳನದಲ್ಲಿ ಮುಂದಿಟ್ಟಿದ್ದಾರೆ.

`ಡಬ್ಲ್ಯುಪಿಐ~ ಹಳೆಯ ವ್ಯವಸ್ಥೆ ಮತ್ತು ಇದು ಗ್ರಾಹಕ ಮತ್ತು ಉತ್ಪಾದಕ ಸೂಚ್ಯಂಕದ ಮಿಶ್ರ ರೂಪ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆ ನಿಖರವಾಗಿ ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

`ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ `ಡಬ್ಲ್ಯುಪಿಐ~ನಲ್ಲಿ ಪ್ರಮುಖ ಪಾಲುದಾರರು. ಆದರೆ, ಸರ್ಕಾರ ನೀಡುವ ಸಬ್ಸಿಡಿ, ಅಬಕಾರಿ ತೆರಿಗೆ, ವಿತರಣೆ ವೆಚ್ಚಗಳಿಂದ ಮಾರಾಟಗಾರ ಮತ್ತು ಖರೀದಿದಾರ  ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಈ ನಿಟ್ಟಿನಲ್ಲಿ ಹೊಸ `ಉತ್ಪಾದಕ ದರ ಸೂಚ್ಯಂಕ (ಪಿಪಿಐ) ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ ಎಂದು  ಹೇಳಿದ್ದಾರೆ.

`ಮುಖ್ಯವಾಗಿ ಆಹಾರ ಪದಾರ್ಥಗಳು, ಇಂಧನ ಮತ್ತು ತೈಲ ಬೆಲೆ ಆಧರಿಸಿ ಒಟ್ಟಾರೆ ಹಣದುಬ್ಬರ ನಿರ್ಧರಿಸಲಾಗುತ್ತದೆ. ಆದರೆ, ಮಾರುಕಟ್ಟೆ ಬೆಲೆಗೂ ಈ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂದಿರುವ ಸುಬ್ಬರಾವ್, `ಡಬ್ಲ್ಯುಪಿಐ~ಗೆ ಹೋಲಿಸಿದರೆ `ಪಿಪಿಐ~ ಉತ್ತಮ ವ್ಯವಸ್ಥೆ. ಇದರ ಮೂಲಕ ಮುಖ್ಯವಾಗಿ ಸೇವೆಗಳ ಬೆಲೆ ಏರಿಳಿತ ನಿರ್ಧರಿಸಬಹುದು ಎಂದು ಹೇಳಿದ್ದಾರೆ.

`ಜಿಡಿಪಿ~ ಇನ್ನಷ್ಟು ಕುಸಿತ

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಮತ್ತೊಮ್ಮೆ 2008ರ ಮಟ್ಟವಾದ ಶೇ 7.5ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಸುಬ್ಬರಾವ್ ಹೇಳಿದ್ದಾರೆ. ಕಳೆದ ಹಣಕಾಸು ವರ್ಷದ (2011-12) ನಾಲ್ಕನೇಯ ತ್ರೈಮಾಸಿಕ ಅವಧಿಯಲ್ಲಿ `ಜಿಡಿಪಿ~ 9 ವರ್ಷಗಳ ಹಿಂದಿನ ಮಟ್ಟವಾದ ಶೇ 6.7ಕ್ಕೆ ಕುಸಿತ ಕಂಡಿತ್ತು. 

ಬಡ್ಡಿ ದರ ಕಾರಣವಲ್ಲ

`ಜಿಡಿಪಿ~ ಕುಸಿಯಲು ಅಲ್ಪಾವಧಿ ಬಡ್ಡಿ ದರ ಏರಿಕೆ ಮಾತ್ರ ಕಾರಣವಲ್ಲ ಎಂದು ಸುಬ್ಬರಾವ್  ಹೇಳಿದ್ದಾರೆ.  ಜುಲೈ 31ರಂದು `ಆರ್‌ಬಿಐ~ ಮೊದಲ ತ್ರೈಮಾಸಿಕ ಹಣಕಾಸು ಪರಾಮರ್ಷೆ ಪ್ರಕಟಿಸಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಡ್ಡಿದರ ಮತ್ತು ಹೂಡಿಕೆ  ಚಟುವಟಿಕೆಗಳ ನಡುವೆ ಇರುವ ಸಂಬಂಧದ ಕುರಿತು ಪರಿಶೀಲನೆ ನಡೆಸುವಂತೆ ಆರ್ಥಿಕ ಅಧ್ಯಯನ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.