ಶುಕ್ರವಾರ, ಮೇ 7, 2021
26 °C

ಹಣದ ಹರಿವಿದ್ದಲ್ಲಿ ಪೈಪೋಟಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತು ಮಹಾನ್ ದಾರ್ಶನಿಕ, ಇಂಜಿನಿಯರ್, ರಾಜ್ಯನೀತಿಜ್ಞ ದಿವಾನ್ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಭೆಯ ಕೂಸು. ಮಹಾಕವಿಗಳಾದ ಪಂಪ, ರನ್ನ, ಲಕ್ಷ್ಮೀಶ, ಮೊದಲಾದವರಿಂದ ಸಂಪನ್ನವಾದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ  ಅಭಿವೃದ್ಧಿಗಾಗಿ ಒಂದು ಸಂಸ್ಥೆಯ ಸ್ಥಾಪನೆಯ ಅಗತ್ಯವನ್ನು ಅವರು ಮನಗಂಡರು.

 

ಬರಿಯ ಪಂಡಿತರೆನಿಸಿದ್ದು, ಕೇವಲ ಕೆಲವರಾಗಿದ್ದ ಕನ್ನಡ ಸಾಹಿತ್ಯದ ಸವಿಯನ್ನು ಹರಡಿ ಎಲ್ಲದರಾಗಿಸುವ ಅಗತ್ಯವನ್ನು ವಿಶ್ವೇಶ್ವರಯ್ಯನವರು ಗುರುತಿಸಿದರು. ಆದ್ದರಿಂದ ಕನ್ನಡಿಗರ ಮನ ಮತ್ತು ಬುದ್ಧಿಗಳನ್ನು ಭಾಷಾ ಸಾಹಿತ್ಯ, ಸಂಗೀತ, ಜಾನಪದಗಳ ಕಡೆ ಒಲವನ್ನು ಚೋದಿಸಲು ಮತ್ತು ಇವನ್ನು ಬೆಳೆಸುವ ಮತ್ತು ಉಳಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯನವರು ಪರಿಷತ್ತನ್ನು ಮುನ್ನಡೆಸಿದರು.

 

ಅನಂತರದ ವರ್ಷಗಳಲ್ಲಿ ಸಾಹಿತ್ಯ ಮತ್ತು ಲಲಿತಕಲೆಗಳ ಮೇಲಣ ಪ್ರೀತಿಗೆ ಹೆಸರಾದ ಮೈಸೂರು ಅರಸರ ಪ್ರೋತ್ಸಾಹವನ್ನು ಅದು ಪಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1929 ರಿಂದ 1940 ವರೆಗೆ ಪರಿಷತ್ತಿನ ಅಧ್ಯಕ್ಷರಾಗಿದ್ದರು.ಅನಂತರ ಅವರ ತಮ್ಮ ಕಂಠೀರವ ನರಸರಾಜ ಒಡೆಯರ್ ಅವರೂ, ಆಮೇಲೆ ಅವರ ಮಗ ಜಯಚಾಮರಾಜ ಒಡೆಯರ್ ಅವರೂ ಉತ್ತರಾಧಿಕಾರಿಯಾದರು. ಈಗ ಪರಿಷತ್ತು ಅದರ ಶ್ರೇಷ್ಠ ದಾತೃವಾದ ಕೃಷ್ಣರಾಜ ಒಡೆಯರ್ ಹೆಸರಿನ ಸಭಾಂಗಣ `ಶ್ರಿ ಕೃಷ್ಣರಾಜ ಪರಿಷನ್ಮಂದಿರ~ವನ್ನು ಹೊಂದಿದೆ.~`ಮೈಸೂರಿನ ರಾಜವಂಶದಿಂದ ಪೋಷಣೆ ಪಡೆದ ಪರಿಷತ್ತಿಗೆ ನಂತರದ ವರ್ಷಗಳಲ್ಲಿ ಕರ್ನಾಟಕದಲ್ಲಿ ಮನೆಮಾತಾಗಿರುವ ಕನ್ನಡ ಸಾಹಿತ್ಯದ ದಿಗ್ಗಜಗಳು ಪರಿಷತ್ತಿನ ಉಪಾಧ್ಯಕ್ಷರು ಅಥವಾ ಅಧ್ಯಕ್ಷರು ಆಗಿದ್ದರು. ಸಮ್ಮೇಳನಾಧ್ಯಕ್ಷರಾಗಿ ಜನಸಾಮಾನ್ಯರಲ್ಲಿ ಸಾಹಿತ್ಯಪ್ರೇಮವನ್ನು ಬೆಳೆಸಿದರು. ಅಂಥ ಕೆಲವರನ್ನು ನೆನೆಸಿಕೊಳ್ಳಬೇಕಾದರೆ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರೊ. ಬಿ.ಎಂ. ಶ್ರಿಕಂಠಯ್ಯ, ಪ್ರೊ. ತೀ.ನಂ. ಶ್ರಿಕಂಠಯ್ಯ, ಉತ್ತಂಗಿ ಚೆನ್ನಪ್ಪ, ಡಾ. ದ.ರಾ. ಬೇಂದ್ರೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ. ಕೆ.ವಿ. ಪುಟ್ಟಪ್ಪ ಮತ್ತು ಜಿ.ವೆಂಕಟಸುಬ್ಬಯ್ಯ ಮೊದಲಾದವರು.~`60ರ ದಶಕದವರೆಗೆ ಪರಿಷತ್ತು ಹೆಚ್ಚಿನ ಆರ್ಥಿಕ ನೆರವು ಅಥವಾ ಅನುದಾನವನ್ನು ಪಡೆದ ಸಂಸ್ಥೆಯಾಗಿರಲಿಲ್ಲ. ಇಂಥ ಪ್ರತಿಬಂಧವಿದ್ದರೂ ಪರಿಷತ್ತು ಸಾಹಿತ್ಯ ಕೃತಿಗಳನ್ನು ಹೊರತಂದು ಕನ್ನಡದ ಅಧ್ಯಯನವನ್ನು ಜನಪ್ರಿಯಗೊಳಿಸಲು ಸಾಹಿತ್ಯ ಕಮ್ಮಟಗಳನ್ನು, ಸಮ್ಮೇಳನಗಳನ್ನು ನಡೆಸಿ, ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದೆ.~`1956 ರಲ್ಲಿ ರಾಜ್ಯ ಪುನರ್ವಿಂಗಡನೆಯಾದ ನಂತರ ಪರಿಷತ್ತು ಸರ್ಕಾರದ ಗಮನವನ್ನು ಸೆಳೆದಂತೆ ಕಾಣುತ್ತದೆ. ಕೆ. ಹನುಮಂತಯ್ಯನವರಿಂದ ಹಿಡಿದು ನಂತರದ ಎಲ್ಲ ಮುಖ್ಯಮಂತ್ರಿಗಳು ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿಗಾಗಿ ಪರಿಷತ್ತು ಕೈಗೊಂಡ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಆಸಕ್ತಿ ತಳೆದಿದ್ದಾರೆ. ಅವರು ಹೆಚ್ಚಿನ ಹಣವನ್ನು ಅದಕ್ಕೆ ದೊರಕಿಸಿದರು.~`ಎಪ್ಪತ್ತರ ದಶಕದಲ್ಲಿ ಬೆಂಗಳೂರು ನಗರಸಭೆಯ ಮೇಯರ್ ಆಗಿದ್ದ ಜಿ. ನಾರಾಯಣ ಪರಿಷತ್ತಿನ ಅಧ್ಯಕ್ಷರಾದರು. ಅವರ ನೇತೃತ್ವ ಪರಿಷತ್ತಿಗೆ ವೈವಿಧ್ಯತೆ ಹಾಗೂ ಸಫಲತೆಯನ್ನು ಒದಗಿಸಿತು. ಪರಿಷತ್ತು ಸಾಹಿತ್ಯಿಕ ನಡೆಯಲ್ಲಿ ದಾಪುಗಾಲು ಹಾಕಿತು. ಜಿ. ನಾರಾಯಣ ಸರ್ಕಾರವನ್ನು ಪುಸಲಾಯಿಸಿ ಅತಿ ಹೆಚ್ಚಿನ ಧನಸಹಾಯ ಪಡೆದು ಸರ್ಕಾರ ಅದರ ಪ್ರಗತಿಯಲ್ಲಿ ಪಾಲುದಾರನಾಗುವಂತೆ ಮಾಡಿದರು.ಪರಿಣಾಮವಾಗಿ ಪರಿಷತ್ತು ಕನ್ನಡ-ಕನ್ನಡ ನಿಘಂಟಿನ ಏಳು ಸಂಪುಟಗಳನ್ನು ಹೊರತರುವ ಮಹಾಕಾರ್ಯವೂ ಸೇರಿದಂತೆ ಅನೇಕ ಸಾಹಿತ್ಯ ಚಟುವಟಿಕೆಯ ಜೇನುಗೂಡಾಯಿತು. ಜಿ. ನಾರಾಯಣ ಕಟ್ಟುನಿಟ್ಟಿನ ಹಾಗೂ ಸರಳ ವ್ಯಕ್ತಿಯಾಗಿದ್ದು ಪರಿಷತ್ತಿನ ಗೌರವ ಅಧ್ಯಕ್ಷರಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ಪರಿಷತ್ತಿನ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದರು...~- ಇದು 80ರ ದಶಕದಲ್ಲಿ ಪರಿಷತ್ತಿನ ಹಣಕಾಸು ವ್ಯವಹಾರದಲ್ಲಿ ಅಕ್ರಮಗಳು ನಡೆದಿರುವುದನ್ನು ವಿಚಾರಣೆ ಮಾಡಲು ಸರ್ಕಾರ ನೇಮಿಸಿದ ಪಿ.ಕೆ.ಶ್ಯಾಮಸುಂದರ ಆಯೋಗದ ವರದಿಯಲ್ಲಿ ದಾಖಲಾದ ಕನ್ನಡ ಸಾಹಿತ್ಯ ಪರಿಷತ್ತಿನ ಪಕ್ಷಿನೋಟ.ಪರಿಷತ್ತಿನಲ್ಲಿ ಅಧಿಕಾರ ದುರುಪಯೋಗ, ನಿಧಿಯ ದುರ್ವಿನಿಯೋಗ ನಡೆದದ್ದನ್ನು ಈ ಆಯೋಗ ಬಹಿರಂಗಪಡಿಸಿದರೂ ಸರ್ಕಾರ ನಂತರದ ವರ್ಷಗಳಿಂದ ಪರಿಷತ್ತಿಗೆ ಹಣಕಾಸಿನ ನೆರವನ್ನು ನಿಲ್ಲಿಸಲಿಲ್ಲ. ಬದಲಾಗಿ ಹೆಚ್ಚಿಸಿತು.ಇದೀಗ ಪರಿಷತ್ತಿಗೆ ಕೋಟಿಗಳ ಲೆಕ್ಕದಲ್ಲಿ ಸರ್ಕಾರದ ಅನುದಾನ ಸಿಗುತ್ತಿದೆ. ಪರಿಷತ್ತಿನ ಸಿಬ್ಬಂದಿ ಸರ್ಕಾರದ ಅನುದಾನ ಸಂಹಿತೆಗೆ ಒಳಪಟ್ಟಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಹಣ ಬಿಡುಗಡೆ ಆಗುತ್ತದೆ. ಪರಿಷತ್ತಿನ ಯೋಜನೆಗಳಿಗೆ ಪ್ರತ್ಯೇಕವಾಗಿ ಅನುದಾನವಲ್ಲದೆ, ಸಾಹಿತ್ಯ ಸಮ್ಮೇಳನ ನಡೆಸುವುದಕ್ಕಾಗಿಯೇ ವಿಶೇಷ ನೆರವು ಸಿಗುತ್ತಿದೆ.

 

ಸರ್ಕಾರಿ ನೌಕರರು ಕೂಡ ಸಾಹಿತ್ಯ ಸಮ್ಮೇಳನಕ್ಕಾಗಿ ಒಂದು ದಿನದ ವೇತನವನ್ನು ನೀಡುವ ಪರಿಪಾಠವೂ ಆರಂಭವಾಗಿದೆ. ಅಂದರೆ ಪರಿಷತ್ತಿಗೆ ಹಣಕಾಸಿನ ಕೊರತೆ ಇಲ್ಲ. ಹಣ ಇರುವ ಕಾರಣದಿಂದಲೇ ಪರಿಷತ್ತಿನ ಚುನಾವಣೆಗೆ ಪೈಪೋಟಿ ತೀವ್ರವಾಗುತ್ತಿದೆಯೇ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.