ಶುಕ್ರವಾರ, ಮೇ 7, 2021
20 °C

ಹದಗೆಟ್ಟ ನಗರರಸ್ತೆ, ಅರರೇ ಏನೀ ಅವ್ಯವಸ್ಥೆ!

ಎಂ.ಜೆ. ಶ್ರೀನಿವಾಸ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಿತ್ಯ ಸಾವಿರಾರು ವಾಹನ, ಲಕ್ಷಾಂತರ ಸಾರ್ವಜನಿಕರು ಓಡಾಡುವ ನಗರದ ರಸ್ತೆಗಳು ಹೇಗಿರಬೇಕು ನೀವೇ ಹೇಳಿ...? ಇಲ್ಲಿನ ರಸ್ತೆ ಸಹವಾಸವೇ ಬೇಡ ಎಂಬಂತ ಸ್ಥಿತಿ ಚಾಲಕರಲ್ಲಿ ನಿರ್ಮಾಣವಾಗಿದೆ. ನಗರಕ್ಕೆ ಹೋಲಿಸಿದರೆ ಹಳ್ಳಿ ರಸ್ತೆಗಳೇ ಎಷ್ಟೋ ವಾಸಿ ಎನ್ನುವಂತಾಗಿದೆ.ಇಲ್ಲಿನ ಚುನಾಯಿತ ಜನ ಪ್ರತಿನಿಧಿಗಳ ಬೇಜವಾಬ್ದಾರಿ, ಆಡಳಿತ ಯಂತ್ರಕ್ಕೆ ಹಿಡಿದ ಜಿಡ್ಡಿನ ಜಾಡ್ಯ, ಇಲಾಖೆ, ಅಧಿಕಾರಿಗಳ ನಿಸ್ಸೀಮ ನಿರ್ಲಕ್ಷ್ಯೆ ತಿಳಿಯಬೇಕಾದರೆ ಒಮ್ಮೆ ಗಂಗಾವತಿ ನಗರದ ರಸ್ತೆಗಳಲ್ಲಿ ಸಂಚರಿಸಿ ದರ್ಶನ ಮಾಡಬೇಕು.ತಮ್ಮ `ವ್ಯಾಪ್ತಿಗೆ ಮೀರಿದ್ದು~ ಎಂದು ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಕೈಚೆಲ್ಲಿ ಕುಳಿತಿವೆ.  ಪರಿಣಾಮ ನಗರದ ಬಹುತೇಕ ಪ್ರಮುಖ ವೃತ್ತದ ರಸ್ತೆಗಳು ಕನಿಷ್ಟ ನಿರ್ವಹಣೆಗೂ ದಿಕ್ಕಿಲ್ಲದೆ ಅಧ್ವಾನದ ಸ್ಥಿತಿ ತಲುಪಿವೆ. ಜನರಿಗೆ ನರಕ ನೆನಪಿಸುವಂತಿವೆ.ಎಂಪಿ, ಎಂಎಲ್‌ಎ ಜಾಣ ಮೌನ:ನಗರ ವಾಸಿಗಳಾದ ಸಂಸದ ಎಸ್. ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಇನ್ನಿತರ ಚುನಾಯಿತ ಪ್ರತಿನಿಧಿಗಳು ನಿತ್ಯವೂ ನಗರದ ಈ ಆಳೆತ್ತರದ ಗುಂಡಿ ರಸ್ತೆಯಲ್ಲಿ ಓಡಾಡುತ್ತಿದ್ದರೂ ಸಮಸ್ಯೆ ಮಾತ್ರ ಈ ಮಹಾನೀಯರ ಗಮನಕ್ಕೆ ಬಾರದಂತೆ ಕಾಣುತ್ತದೆ.`ಎ.ಸಿ ಕಾರು ಬಿಟ್ಟು ಜನರಂತೆ ಸಾರಿಗೆ ಸಂಸ್ಥೆಯ ಅಥವಾ ದ್ವಿಚಕ್ರ ವಾಹನದಲ್ಲಿ ಒಮ್ಮೆಯಾದರೂ ನಗರ ಪ್ರದಕ್ಷಣೆ ಹಾಕಿದರೆ ನಿಜ ಸ್ಥಿತಿ ಎಮ್ಮೆಲ್ಲೆ, ಎಂಪಿಗಳ ಅರಿವಿಗೆ ಬರುತ್ತದೆ~ ಎಂದು ಆರ‌್ಹಾಳದ ಸಿದ್ದೇಶ್ವರ, ವಿದ್ಯಾನಗರ ನಾಗೇಶ್ವರರಾವ್ ಚುನಾಯಿತರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.ಇವು ರಸ್ತೆಗಳೇನಾ?: ಜುಲೈನಗರದಿಂದ ರಿಲಾಯನ್ಸ್ ಬಂಕ್ ವರೆಗಿನ ರಾಯಚೂರು ರಸ್ತೆ, ಇದೇ ವೃತ್ತದಿಂದ ಭಗತ್ ಸಿಂಗ್‌ನಗರದ ತಿರುವುನವರೆಗಿನ ಕಂಪ್ಲಿ ರಸ್ತೆ, ಜೆಎಸ್‌ಎಸ್ ಕಾಲೇಜು ಮುಂಭಾಗದಿಂದ ಹಳ್ಳದವರೆಗಿನ ಬೈಪಾಸ್ ರಸ್ತೆಯ ಅವಶೇಷಗಳೆ ಕಳೆದು ಹೋಗಿವೆ. ಜುಲೈನಗರದ ಗಾಂಧಿ ವೃತ್ತಕ್ಕೆ ಅಥವಾ ನಗರದ ಒಳ ಭಾಗಕ್ಕೆ ಸಂಪರ್ಕ ಕಲ್ಪಿಸುವ (ಹೊಟೇಲ್ ರಿವೇರಾ ಬಳಿ) ಎರಡು ಭಾಗದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ದುರ್ಗಮ್ಮ ಹಳ್ಳ, ಶಿವೆ ಚಿತ್ರಮಂದಿರದ ತಿರುವಿನ ಬಳಿಯ ರಸ್ತೆ ಹದಗೆಟ್ಟಿದೆ. 

ಸಿಬಿಎಸ್‌ವೃತ್ತದ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿ ಎರಡನೇ ಗೇಟ್‌ನಿಂದ ಅಶ್ವಮೇಧ ಬಾರ್ ವರೆಗೆ ಹಾಗೂ ಇತ್ತೀಚೆಗೆ ಒಳಚರಂಡಿ ಕಾಮಗಾರಿಗೆ ಅಗೆದು ನಾಮಕಾವಸ್ಥೆ ಮುಚ್ಚಿರುವ ವಿವಿಧ ಭಾಗದ ರಸ್ತೆ ಅಸಲಿಗೆ ಇವು ರಸ್ತೆಗಳೇನಾ? ಎಂಬ ಅನುಮಾನ ಹುಟ್ಟಿಸುತ್ತಿವೆ.ನಿರ್ವಹಣೆ ನೆಪ: `ವರ್ಷಕ್ಕೆರಡು ಬಾರಿ ಪಿ.ಡಬ್ಲೂ.ಡಿ ಕಾಟಾಚಾರದ ನಿರ್ವಹಣೆಗಾಗಿ `ಪ್ಯಾಚಿಂಗ್~ ಮಾಡುತ್ತದೆ. ಕೇವಲ 15 ದಿನಕ್ಕೆ ರಸ್ತೆ ಮತ್ತೆ ಯಥಾಸ್ಥಿತಿಗೆ ಬರುತ್ತಿದೆ. ಆದರೆ ಶಾಶ್ವತ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ~ ಎಂಬುವುದು ಬೈಪಾಸ್ ವಾಸಿ ದಿನೇಶರ ದೂರು.ಆಸ್ತಮಾ: ಜುಲೈನಗರ ವೃತ್ತದಲ್ಲಿ ಸಂಜೆ ಆರರ ನಂತರ ವಾಹನಗಳಿಗೆ ಜನ ಕಾಯುತ್ತ ನಿಂರತೆ ಕಥೆ ಮುಗಿಯಿತು. ಅರ್ಧಗಂಟೆಯಲ್ಲಿ ಬಟ್ಟೆಗಳಿಗೆ ಮಣ್ಣು ಮೆತ್ತಿಕೊಂಡಷ್ಟು ಕೊಳೆಯಾಗುತ್ತವೆ. ವೃತ್ತದ ಸುತ್ತಲ್ಲಿನ ಬಹುತೇಕ ವ್ಯಾಪಾರಿಗಳು ಧೂಳಿನಿಂದ ಅಸ್ತಮಕ್ಕೀಡಾಗಿದ್ದಾರೆ. ಮೂರು ವರ್ಷದಿಂದ: ಕುಡತಿನಿ-ಲಿಂಗಸಗೂರು ರಸ್ತೆ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಮಂಜೂರಾತಿ ದೊರೆತಿದೆ ಎಂದು ಗಂಗಾವತಿಗೆ ಬಂದಾಗಲೊಮ್ಮೆ ಪಿ.ಡಬ್ಲೂ.ಡಿ ಸಚಿವ ಸಿ.ಎಂ. ಉದಾಸಿ ಹೇಳಿದ್ದಾರೆ. ಆದರೆ ಕಳೆದ ಮೂರು ವರ್ಷದಿಂದ ಕಾಮಗಾರಿಗೆ ಚಾಲನೆ ಮಾತ್ರ ಸಿಕ್ಕಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.