ಶುಕ್ರವಾರ, ಮೇ 14, 2021
32 °C

ಹನುಮಸಾಗರದ ತಿಪ್ಪಣ್ಣ ಅರಸುಆದ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ ಗಾಂಧಿನಗರದಲ್ಲಿರುವ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇನ್ನೇನು ನಾಟಕ ಶುರುವಾಗುತ್ತದೆ ಎನ್ನುವ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಒಬ್ಬ ವ್ಯಕ್ತಿ ಬಂದು ಕುಳಿತುಕೊಳ್ಳುತ್ತಿದ್ದರು. ಶೇವ್ ಮಾಡಿದ ಮುಖ, ಬಿಳಿಬಟ್ಟೆ, ತಿದ್ದಿ ತೀಡಿದ ಕ್ರಾಪು, ಕಂಗೊಳಿಸುವ ಮುಖ. ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಯಾರೋ ಪಾತ್ರಧಾರಿಯೇ ಹೊರಗೆ ಬಂದು ಕುಳಿತಿರಬೇಕು ಎಂದು ಭಾಸವಾಗುತ್ತಿತ್ತು.ಪರಿಚಿತರು, ರಂಗ ಕಲಾವಿದರು ಅಲ್ಲಿಗೆ ಬಂದರೆ ಈ ಶ್ವೇತವಸ್ತ್ರಧಾರಿಗೆ ಉದ್ದಕ್ಕೆ ಕಾಲಿಗೆ ಬೀಳುತ್ತಿದ್ದರು. ಈ ವ್ಯಕ್ತಿಯ ಸುತ್ತ ಒಂದು ಪ್ರಭಾವಳಿಯೇ ಅಲ್ಲಿ ಸೃಷ್ಟಿಯಾಗುತ್ತಿತ್ತು. 1990ರ ದಶಕದಲ್ಲಿ ಗುಬ್ಬಿ ವೀರಣ್ಣ ರಂಗಮಂದಿರ ಶುರುವಾದಾಗಿನಿಂದ ಈಗ್ಗೆ 5-6 ವರ್ಷದವರೆಗಿನ ನಿತ್ಯದ ದೃಶ್ಯ ಇದು. ಅವರೇ ಕನ್ನಡ ವೃತ್ತಿರಂಗಭೂಮಿಯ ಪ್ರಖ್ಯಾತ ನಟ ಎಚ್.ಟಿ.ಅರಸು.`ರಾಜಾ ವಿಕ್ರಮ~ ನಾಟಕದ ದುರ್ಜಯ, `ಚಂದ್ರಹಾಸ~ದ ದುಷ್ಟಬುದ್ಧಿ, `ರಾಮಾಯಣ~ದ ರಾವಣ, `ಹರಿಶ್ಚಂದ್ರ~ ನಾಟಕದ ವಿಶ್ವಾಮಿತ್ರ, `ಸಿಂಧೂರ ಲಕ್ಷ್ಮಣ~ನಾಗಿ ಗರ್ಜಿಸಿದರೆ ಅಕ್ಷರಶಃ ಅಲ್ಲೊಂದು ಪ್ರಭಾವಳಿ ಸೃಷ್ಟಿಯಾಗುತ್ತಿತ್ತು. ಅವರ ಅಭಿನಯದಲ್ಲಿ ಅರ್ಭಟ ಇರುತ್ತಿತ್ತು, ಕಿರುಚಾಟ ಇರಲಿಲ್ಲ.ಗತ್ತು ಗಾಂಭಿರ್ಯ ಇತ್ತು, ಅನವಶ್ಯಕ ರೋಷ ಇರುತ್ತಿರಲಿಲ್ಲ. ನಾಟಕ ನೋಡುತ್ತಿದ್ದ ಪ್ರೇಕ್ಷಕರು ರೋಮಾಂಚಿತರಾಗುತ್ತಿದ್ದರೂ, ಅವರ ಅಭಿನಯದಲ್ಲಿ ಹಿತಮಿತ ಇತ್ತು.ಪಾತ್ರವನ್ನು ಯಥಾಚಿತವಾಗಿ ಕಡೆದಿಡುತ್ತಿದ್ದ ಅವರ ಅಭಿನಯ ವೈಖರಿಯೇ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತಿತ್ತು.ದಾವಣಗೆರೆಯ ಜಯಲಕ್ಷ್ಮಿ ನಾಟ್ಯ ಸಂಘ, ಏಣಗಿ ಬಾಳಪ್ಪನವರ ಕಲಾವೈಭವ, ಗೋಕಾಕ ಬಸವಣ್ಣೆಪ್ಪನವರ ಶಾರದಾ ಸಂಗೀತ ನಾಟ್ಯ ಮಂಡಳಿಗಳಲ್ಲಿ ಕೊಂಡಿ ಮಂಚಣ್ಣ, ಬಿಜ್ಜಳ, ಭಕ್ತಕುಂಬಾರ, ಅರ್ಜುನ ಪಾತ್ರಗಳಲ್ಲಿ ಹೆಸರು ಮಾಡಿದ್ದರೂ, ಅವರನ್ನು ಮನೆ ಮಾತಾಗಿಸಿದ್ದು ಹಳೇ ಮೈಸೂರು ಭಾಗದ ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್ಸ್‌, ಶ್ರೀಕಂಠೇಶ್ವರ ನಾಟಕ ಮಂಡಳಿಗಳು. ಅರಸು ಎಂಬ ಅಡ್ಡಹೆಸರು ಇರುವುದರಿಂದ ಅವರನ್ನು ಎಲ್ಲರೂ ಮೈಸೂರಿನವರು ಅಥವಾ ಆ ಭಾಗದವರೆಂದೇ ತಿಳಿದಿದ್ದಾರೆ.ನಾಟಕದಲ್ಲಿ ಅರಸ, ರಾಕ್ಷಸ, ಚಕ್ರವರ್ತಿ ಎಲ್ಲವೂ ಆದರೂ, ನಿಜ ಜೀವನದಲ್ಲಿ ಅವರು ಅರಸರಲ್ಲ. ಅವರ ಹೆಸರು ತಿಪ್ಪಣ್ಣ. ನಟನಾಗಿ ಹೆಸರು ಮಾಡಿದ ಮೇಲೆ ತಿಪ್ಪರಾಜ್ ಎಂದು ಕರೆಯುವ ಪ್ರತೀತಿಬೆಳೆದಿರಬೇಕು.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನಮಸಾಗರದ ಯಮುನಪ್ಪ- ನಾಗರತ್ನಮ್ಮ ಬಡ ನೇಕಾರ ದಂಪತಿಗೆ ಜನಿಸಿದ ತಿಪ್ಪಣ್ಣಗೆ ಬಾಲ್ಯದಿಂದಲೇ ನಾಟಕದ ವ್ಯಾಮೋಹ. 7ನೇ ವಯಸ್ಸಿನಲ್ಲಿ ಪ್ರಹ್ಲಾದನಾಗಿ ಅಭಿನಯಿಸಿ, 14ನೇ ವಯಸ್ಸಿಗೆ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚಿದರು. ಪ್ರೇಕ್ಷಕರು ಬೇಷ್ ಅಂದ ತಕ್ಷಣ ಪ್ರತಿಷ್ಠಿತ ನಾಟಕ ಕಂಪನಿ ಬಾಗಿಲು ತಟ್ಟಿದರು. ತಮ್ಮ ಅಭಿನಯ ಸಾಮರ್ಥ್ಯದಿಂದ ಬಹುಬೇಗ ರಂಗದ ಮೇಲಿನ ನಾಯಕ, ಖಳನಾಯಕನಾಗಿ ಮಿಂಚಿದರು. ಒಮ್ಮೆ ಗೋಕಾಕ ಕಂಪೆನಿಯ ನಾಟಕ ನೋಡಲು ಹೋದ ಚಿತ್ರ ನಿರ್ದೇಶಕ ಶಂಕರಸಿಂಗ್ ತಿಪ್ಪಣ್ಣನವರ ಶರೀರ- ಶಾರೀರಕ್ಕೆ ಮನಸೋತು `ಮಂಗಳ ಸೂತ್ರ~ ಸಿನಿಮಾದ ನಾಯಕನ ಪಾತ್ರಕ್ಕೆ ಆಹ್ವಾನ ನೀಡಿದರು.ಆದವಾನಿ ಲಕ್ಷ್ಮಿದೇವಿ ಚಿತ್ರದ ನಾಯಕಿ. ಆಗ ಕಂಪನಿಯಲ್ಲಿದ್ದ ಗೆಳೆಯರೊಬ್ಬರು, ಮೈಸೂರು ಭಾಗಕ್ಕೆ ಹೋದರೆ ತಿಪ್ಪಣ್ಣ ಎಂಬ ಹೆಸರು ಬೇಡ. ಅರಸು ಎಂದು ಮಾಡಿಕೋ ಎಂದರಂತೆ. ಆಗ ಹನುಮಸಾಗರದ ತಿಪ್ಪಣ್ಣ ಎಚ್.ಟಿ.ಅರಸು ಆದರು. ಮುಂದೆ ಅದೇ ಹೆಸರು ಅವರಿಗೆ ಶಾಶ್ವತವಾಯಿತು. ಧರ್ಮಸ್ಥಳ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಚಿನ್ನದ ಗೊಂಬೆ ಮುಂತಾದ ನಾಲ್ಕಾರು ಚಿತ್ರಗಳಲ್ಲಿ ಮುಖ್ಯಪಾತ್ರ, ರಾಜಕುಮಾರ್ ಜತೆಗೆ ಕೆಲವು ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರೂ, ಅರಸರಾಗಿ ಮೆರೆದದ್ದು ಮಾತ್ರ ಮೈಸೂರು ಭಾಗದ ಪ್ರಖ್ಯಾತ ನಾಟಕ ಕಂಪೆನಿಗಳಲ್ಲಿ.18 ವರ್ಷಕ್ಕೆ ಅವರಿಗೆ ಹೇಮಾವತಿ ಎಂಬುವರೊಂದಿಗೆ ವಿವಾಹವಾಗಿತ್ತು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಊರಲ್ಲೇ ವಾಸವಾಗಿದ್ದರು. ನಾಟಕ ರಂಗದಲ್ಲಿ ತಾರಾಪತ್ನಿಯೂ ಇದ್ದರು. ಆದರೆ ಅಭಿನಯದಿಂದ ನಿವೃತ್ತಿ ಪಡೆದ ನಂತರ ಎರಡೂ ದಶಕಗಳಿಗೂ ಹೆಚ್ಚುಕಾಲ ಬೆಂಗಳೂರಿನ ಸೋಮೇಶ್ವರ ಖಾನಾವಳಿ ಹಾಗೂ ವಸತಿಗೃಹದಲ್ಲಿ ಒಂಟಿಯಾಗಿ ಕಾಲ ಕಳೆದರು. ಆದರೂ ಮೇರು ನಟನ ಠೀವಿ ಮಾತ್ರ ಕಳೆಗುಂದಿರಲಿಲ್ಲ. ಆಗಲೇ ಅವರು ನಿತ್ಯ ಗುಬ್ಬಿವೀರಣ್ಣ ರಂಗಮಂದಿರಕ್ಕೆ ಬರುತ್ತಿದ್ದರು. ಸ್ವಲ್ಪ ಹೊತ್ತು ನಾಟಕ ನೋಡುತ್ತಿದ್ದರು. ಕಲಾವಿದರಿಗೆ ಸಲಹೆ ನೀಡುತ್ತಿದ್ದರು. ಮರಳಿ ಗೂಡು ಸೇರಿಕೊಳ್ಳುತ್ತಿದ್ದರು. ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಬಹಳ ಹಿಂದೆಯೇ ಸಂದಿದ್ದರೂ, ಗುಬ್ಬಿ ವೀರಣ್ಣ ಪ್ರಶಸ್ತಿ ಸ್ವಲ್ಪ ತಡವಾಗಿಯೇ (2008) ಬಂತು. 5-6 ವರ್ಷಗಳ ಹಿಂದೆಯಷ್ಟೇ ಅವರ ಮಕ್ಕಳು, ಸಹೋದರ ಸಂಬಂಧಿಗಳು ಅವರ ಮನವೊಲಿಸಿ ಊರಿಗೆ ಕರೆದೊಯ್ದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.