ಸೋಮವಾರ, ಮೇ 10, 2021
28 °C

ಹಫೀಜ್‌ಗೆ ಶಿಕ್ಷೆ: ಭಾರತ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಮುಂಬೈ ಮೇಲಿನ ಉಗ್ರರ ದಾಳಿಯನ್ನು ಯೋಜಿಸಿದ ಹಫೀಜ್ ಸಯೀದ್ ಮತ್ತಿತರ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಇಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರಿಗೆ ಮನದಟ್ಟು ಮಾಡಿದರು.ಪ್ರಧಾನಿಯವರ ರೇಸ್ ಕೋರ್ಸ್ ನಿವಾಸದಲ್ಲಿ ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ (ಸುಮಾರು 30ರಿಂದ 40 ನಿಮಿಷ) ನಡೆಸಿದ ಮಾತುಕತೆಯಲ್ಲಿ ಪಾಕ್ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಭಯೋತ್ಪಾದನೆಯೇ ಪ್ರಮುಖವಾಗಿ ಚರ್ಚೆಗೆ ಬಂದಿದೆ. `ದ್ವಿಪಕ್ಷೀಯ ಬಾಂಧವ್ಯಗಳ ಪ್ರಗತಿಯನ್ನು ಅಳೆಯಲು ಮುಂಬೈ ದಾಳಿಕೋರರ ವಿರುದ್ಧ ಪಾಕ್ ಕ್ರಮ ಜರುಗಿಸುವುದು ಅತ್ಯವಶ್ಯ~ ಎಂದು ಸಿಂಗ್ ಸ್ಪಷ್ಟಪಡಿಸಿದರು.`ಭಯೋತ್ಪಾದನೆಯ ಸಮಸ್ಯೆಯನ್ನು ಉಭಯ ನಾಯಕರು ಮುಖ್ಯವಾಗಿ ಚರ್ಚಿಸಿದರು~ ಎಂದು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.`ಮುಂಬೈ ದಾಳಿಕೋರರನ್ನು ಶಿಕ್ಷಿಸುವುದು ಮತ್ತು ಪಾಕ್ ನೆಲದಿಂದ ಭಾರತವನ್ನು ಗುರಿಯಾಗಿಸಿ ನಡೆಸುವ ಚಟುವಟಿಕೆಗಳನ್ನು ತಡೆಯುವುದು ಅತ್ಯವಶ್ಯ~ ಎಂದು  ಸಿಂಗ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜರ್ದಾರಿ, `ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಸರ್ಕಾರಗಳು ಇನ್ನೂ ಹೆಚ್ಚಿನ ಸಮಾಲೋಚನೆ ನಡೆಸುವ ಅಗತ್ಯವಿದೆ~ ಎಂದರು.ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುವ ಅನೇಕ ಸಮಸ್ಯೆಗಳಿಗೆ ಪ್ರಾಯೋಗಿಕ ಮತ್ತು ವ್ಯಾವಹಾರಿಕ ಪರಿಹಾರಗಳನ್ನು ಕಂಡು ಹಿಡಿಯಲು ಎರಡೂ ದೇಶಗಳು ಬಯಸಿರುವುದಾಗಿ ಉಭಯ ಮುಖಂಡರೂ ಒಪ್ಪಿಕೊಂಡರು. ಈ ಸಂಬಂಧ ಉಭಯ ದೇಶಗಳ ಗೃಹ ಕಾರ್ಯದರ್ಶಿಗಳು ಸದ್ಯದಲ್ಲಿಯೇ ಭೇಟಿಯಾಗಿ ಹೆಚ್ಚಿಗೆ ಚರ್ಚಿಸಲು ಇಬ್ಬರೂ ನಾಯಕರು ಸಮ್ಮತಿಸಿದರು.ಸರ್ ಕ್ರೀಕ್, ಸಿಯಾಚಿನ್, ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಮಾಲೋಚಿಸುವ ಅವಶ್ಯಕತೆಯನ್ನು ಜರ್ದಾರಿ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಹಂತಹಂತವಾಗಿ ಮುಂದೆ ಹೆಜ್ಜೆ ಇಡಲು ಉಭಯತ್ರರು ಸಹಮತ ವ್ಯಕ್ತಪಡಿಸಿದರು. ವ್ಯಾಪಾರ ಬಾಂಧವ್ಯವನ್ನು ಬಲಪಡಿಸಲು ಪಾಕ್ ಕೈಗೊಂಡ ಕ್ರಮಗಳನ್ನು ಸಿಂಗ್ ಪ್ರಶಂಸಿಸಿದರು ಎಂದು ಮಥಾಯ್ ವಿವರಿಸಿದರು.

 

ಮಾತುಕತೆಗೆ ತೃಪ್ತಿ: ಮಾತುಕತೆಯ ನಂತರ ಮಾಧ್ಯಮಗಳಿಗೆ ಜಂಟಿ ಹೇಳಿಕೆ ನೀಡಿದ ಇಬ್ಬರೂ ನಾಯಕರು, ತಮ್ಮ ಈ ಭೇಟಿಯಿಂದ ಫಲಪ್ರದ ಫಲಿತಾಂಶ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಚರ್ಚೆಯಾದ ವಿಷಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.`ಎರಡೂ ದೇಶಗಳ ಸಂಬಂಧಗಳ ಮೇಲೆ ಪರಿಣಾಮ ಬೀರುವ ಹಲವು ವಿಚಾರಗಳ ಬಗ್ಗೆ ನಾವಿಬ್ಬರೂ ರಚನಾತ್ಮಕ ಮತ್ತು ಸ್ನೇಹಪೂರ್ವಕ ಅಭಿಪ್ರಾಯ ವಿನಿಮಯ ಮಾಡ್ದ್ದಿದೇವೆ~ ಎಂದು ಹೇಳಿದ ಸಿಂಗ್, ಈ ನಿಟ್ಟಿನಲ್ಲಿ `ಎಲ್ಲ ಸಮಸ್ಯೆಗಳಿಗೆ ಪ್ರಾಯೋಗಿಕ ಮತ್ತು ವ್ಯಾವಹಾರಿಕ ಪರಿಹಾರ ಹುಡುಕಲು ಬಯಸಿರುವ ಸಂದೇಶವನ್ನು ನೀಡುತ್ತಿದ್ದೇವೆ~ ಎಂದರು.“ನಾವು ಬಹಳ ಫಲಪ್ರದ ದ್ವಿಪಕ್ಷೀಯ ಸಮಾಲೋಚನೆ ನಡೆಸಿದೆವು” ಎಂದು ತಿಳಿಸಿದ ಜರ್ದಾರಿ, ಶೀಘ್ರವೇ ಪಾಕ್‌ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, `ಪರಸ್ಪರ ಅನುಕೂಲಕರವಾದ ದಿನದಂದು ಪಾಕ್‌ಗೆ ಭೇಟಿ ನೀಡಲು ನನಗೆ ತುಂಬಾ ಸಂತಸವಾಗುತ್ತದೆ~ ಎಂದು ನುಡಿದರು.ಪುತ್ರ ಬಿಲಾವಲ್ ಭುಟ್ಟೊ ಜರ್ದಾರಿ ಅವರನ್ನೊಳಗೊಂಡ ನಿಯೋಗದೊಂದಿಗೆ ಮಧ್ಯಾಹ್ನ 12.10ಕ್ಕೆ ಇಲ್ಲಿನ ಪಾಲಂ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜರ್ದಾರಿ, ನೇರವಾಗಿ ಪ್ರಧಾನಿಯವರ ಅಧಿಕೃತ ರೇಸ್ ಕೋರ್ಸ್ ರಸ್ತೆ ನಿವಾಸಕ್ಕೆ ತೆರಳಿದರು. ಪಾಕ್ ಅಧ್ಯಕ್ಷರನ್ನು ಹಾರ್ದಿಕವಾಗಿ ಬರಮಾಡಿಕೊಂಡ ಪ್ರಧಾನಿ, ನಂತರ ಅತಿಥಿಗಳ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು.  ತಮ್ಮದು ಖಾಸಗಿ ಭೇಟಿಯಾದರೂ, ಔತಣಕೂಟ ಮತ್ತು ಮಾತುಕತೆಗೆ ಆಹ್ವಾನಿಸಿದ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಜರ್ದಾರಿ, ಪಾಕ್ ಪರವಾಗಿ ಭಾರತೀಯರಿಗೆ `ನಮಸ್ಕಾರ~ ತಿಳಿಸಿದರು. ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕ್ ಉತ್ತಮ ಬಾಂಧವ್ಯ ಹೊಂದಲು ಇನ್ನೂ ಹೆಚ್ಚಿನ ಮಾತುಕತೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು. ಜರ್ದಾರಿ ಭೇಟಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರಿ ಬಂದೋಬಸ್ತ್  ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.