ಬುಧವಾರ, ಜುಲೈ 28, 2021
23 °C

ಹರದನಹಳ್ಳಿ ಯೋಧ ಸಾವು: ಮಡುಗಟ್ಟಿದ ದುಃಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರದನಹಳ್ಳಿ ಯೋಧ ಸಾವು: ಮಡುಗಟ್ಟಿದ ದುಃಖ

ಹೊಳೆನರಸೀಪುರ: ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಗಡಿ ರಕ್ಷಣೆ ಕಾರ್ಯದಲ್ಲಿ ನಿರತನಾಗಿದ್ದ ತಾಲ್ಲೂಕಿನ ಹರದನಹಳ್ಳಿಯ ಯೋಧ ಎಚ್.ಟಿ. ಕಾಂತರಾಜು ವೈರಿಗಳ ಸಂಚಿಗೆ ಬಲಿಯಾಗಿ ವೀರ ಮರಣವನ್ನಿಪ್ಪಿದ್ದಾರೆ.ಗಡಿ ರಕ್ಷಣಾ ಪಡೆಯಲ್ಲಿ ಯೋಧನಾಗಿದ್ದ ಹರದನಹಳ್ಳಿಯ ನಿವೃತ್ತ ಶಿಕ್ಷಕ ತಮ್ಮಣ್ಣಗೌಡ ಮತ್ತು ಶಾಂತಮ್ಮ ದಂಪತಿ ಪುತ್ರ ಕಾಂತರಾಜು ಭಾನುವಾರ ಬೆಳಗಿನಜಾವ ಗಡಿ ರಕ್ಷಣೆಯಲ್ಲಿರುವಾಗ ವೈರಿಗಳು ಹಿಂದಿನಿಂದ ಎರಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಯೋಧನ ಪಾರ್ಥಿವ ಶರೀರವನ್ನು ಕೊಲ್ಕತ್ತಾದಿಂದ ವಿಮಾನದಲ್ಲಿ ಬೆಂಗಳೂರಿಗೆ ತಂದು ನಾಳೆ ಹರದನಹಳ್ಳಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಪಿಯುಸಿ ವರೆಗಿನ ವ್ಯಾಸಂಗವನ್ನು ಹಾಸನದ ಕೃಷ್ಣ ಕಾಲೇಜಿನಲ್ಲಿ  ಮುಗಿಸಿ ಕಾಂತರಾಜು, ನಂತರ ಕೈಗಾರಿಕಾ ತರಬೇತಿ ಸಂಸ್ಥೆಗೆ ಸೇರಿದರಾದರೂ ಉತ್ತೀರ್ಣರಾಗಿರಲಿಲ್ಲ. ಬಳಿಕ ಮನೆಯವರ ವಿರೋಧದ ಹೊರತಾಗಿಯೂ 1985 ರಲ್ಲಿ ಗಡಿರಕ್ಷಣಾ ಪಡೆಗೆ ಯೋಧನಾಗಿ ಸೇರಿದ್ದರು. ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಕಾಂತರಾಜು  ಭಾಗವಹಿಸಿದ್ದರು.ಇದುವರೆಗೆ ದೇಶ ರಕ್ಷಣೆಯಲ್ಲಿ ತೊಡಗಿದ್ದ ಕಾಂತರಾಜು ಭಾನುವಾರ ನಸುಕಿನ 2.30 ರ ಸಮಯದಲ್ಲಿ ಭಾರತ ಬಾಂಗ್ಲಾ ಗಡಿಯ ಭೀಮ್‌ಪುರ್ ಸಮೀಪ ವೈರಿಗಳಿಂದ ಹತ್ಯೆಗೀಡಾಗಿದ್ದಾರೆ. ಬಾಂಗ್ಲಾದೇಶದ ಬಂಡುಕೋರರು ಈ ಕೃತ್ಯ ಎಸಗಿರ ಬಹುದೆಂದು ಸೇನಾಧಿಕಾರಿಗಳು ಅನು ಮಾನಿಸಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ಬಂದಿದೆ.ನಿವೃತ್ತ ಶಿಕ್ಷಕ ತಮ್ಮಣ್ಣಗೌಡರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಕಾಂತರಾಜು ಮೊದಲ ಮಗ. ಹೇಮಾವತಿ ಇವರ ಪತ್ನಿ. ಕಾಂತರಾಜು ಪುತ್ರಿ ಜಾಹ್ನವಿಗೆ ಇನ್ನೂ 6 ವರ್ಷ. ಕಾಂತರಾಜು ಅವರ ಸಾವು ಕುಟುಂಬವರ್ಗದವರಿಗಷ್ಟೇ ಅಲ್ಲದೆ. ಗ್ರಾಮಸ್ಥರೆಲ್ಲರಿಗೆ ತೀವ್ರ ದುಃಖ ತರಿಸಿದೆ. ‘ಕಾಂತಾರಾಜು ಸೇವಾ ಅವಧಿ ಇನ್ನೊಂದು ತಿಂಗಳಲ್ಲಿ ಮುಕ್ತಾಯ ವಾಗುತ್ತಿತ್ತು. ಗ್ರಾಮಕ್ಕೆ ಆಗಮಿಸಿ ಇಲ್ಲಿಯೇ ನೆಲೆಸುವ ಭರವಸೆ ನೀಡಿದ್ದ, ಆದರೆ ಈಗ ನಮ್ಮನ್ನು ಬಿಟ್ಟು ಅಗಲಿದ್ದಾನೆ’ ಎಂದು ತಂದೆ ತಮ್ಮಣ್ಣಗೌಡ ನೋವಿನಿಂದ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.