ಗುರುವಾರ , ಜನವರಿ 30, 2020
19 °C

ಹರಪನಹಳ್ಳಿ ಬೆಳಗದ ಹೈಮಾಸ್ಟ್‌

ಪ್ರಜಾವಾಣಿ ವಾರ್ತೆ/ –ಮಂಜುನಾಥ ಯಲ್ಲಾಪುರದ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪಗಳು ನಿರ್ವಹಣೆ ಕೊರತೆ ಹಾಗೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷವಾದರೂ ದುರಸ್ತಿ ಕಂಡಿಲ್ಲ.ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ 2009ರಲ್ಲಿ ಮಂಜೂರಾದ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಒಂಬತ್ತು ಪ್ರಮುಖ ಜನವಸತಿ ಪ್ರದೇಶದ ವೃತ್ತಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲು ಯೋಜನೆ ರೂಪಿಸಿದ ಪುರಸಭೆ 2010ರಲ್ಲಿ ಕಾಮಗಾರಿ ಅಳವಡಿಕೆಗೆ ಮುಂದಾಯಿತು. ಉದ್ದೇಶಿತ ಯೋಜನೆಯ ಕಾಮಗಾರಿ ಅನುಷ್ಠಾನಕ್ಕಾಗಿ ಬೆಂಗಳೂರು ಮೂಲದ ‘ಸಪ್ತಗಿರಿ ಎಂಟರ್‌್ ಪ್ರೈಸಸ್‌ ಕಂಪೆನಿಗೆ’ ಎಸ್‌ಆರ್‌  ದರಕ್ಕಿಂತ ಶೇ 8ರಷ್ಟು ಹೆಚ್ಚುವರಿ ಹಣ ಪಾವತಿಗೆ ಸಮ್ಮತಿ ನೀಡಿ ಗುತ್ತಿಗೆ ನೀಡಲಾಗಿತ್ತು.ಜನದಟ್ಟಣೆಯ ಬಡಾವಣೆಗಳಲ್ಲಿನ ಬೀದಿ ದೀಪಗಳು  ಬೆಳಗುವ ಮೂಲಕ ಪಟ್ಟಣದ ಸೌಂದರ್ಯ ವೃದ್ಧಿಸುವ ಹಿನ್ನೆಲೆಯಲ್ಲಿ ಅಗಸನಕಟ್ಟೆ, ಚಿಕ್ಕೇರಿಗುಂಡಿ, ಇಜಾರಿ ಸಿರಸಪ್ಪ ಬಡಾವಣೆ, ತೆಲುಗರ ಓಣಿ ಬಡಾವಣೆಗಳಲ್ಲಿ 12.5ಮೀಟರ್ ಎತ್ತರ ಕಂಬ ಹಾಗೂ ಹಿರೆಕೆರೆ ವೃತ್ತ, ಹಳೇ ಬಸ್‌ನಿಲ್ದಾಣ, ವಾಲ್ಮೀಕಿನಗರದ ಹಾಲಸ್ವಾಮಿ ಮಠದ ಹತ್ತಿರ, ಪಿಎಲ್‌ಡಿ ಬ್ಯಾಂಕ್‌ ವೃತ್ತ ಹಾಗೂ ಗೋವೇರಹಳ್ಳಿ ವೃತ್ತದಲ್ಲಿ 16ಮೀಟರ್‌ ಎತ್ತರದ ಕಂಬ ಅಳವಡಿಕೆ ಹಾಗೂ ಪ್ರತಿ ಕಂಬದಲ್ಲಿಯೂ ತಲಾ 6 ಹೈಮಾಸ್ಟ್‌ ದೀಪ ಅಳವಡಿಸಲು ಸೂಚಿಸಲಾಗಿತ್ತು. ಇದರ ಜತೆಯಲ್ಲಿಯೇ ತಾಲ್ಲೂಕು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕ್ರೀಡೆಗಳಿಗೆ ಹಾಗೂ ಸಂಜೆ– ಮುಂಜಾನೆಯ ವಾಯು ವಿಹಾರಾರ್ಥಿಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ತಾಲ್ಲೂಕು ಕ್ರೀಡಾಂಗಣದಲ್ಲಿ 2 ಹಾಗೂ ಕನಕ ವೃತ್ತದಲ್ಲಿ 1ಹೈಮಾಸ್ಟ್‌ ದೀಪ ಸೇರಿದಂತೆ ಒಟ್ಟಾರೆ ಪಟ್ಟಣದ 12ಕಡೆಗಳಲ್ಲಿ ₨ 55ಲಕ್ಷ  ವೆಚ್ಚದಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿತ್ತು.ಆದರೆ, ಹೈಮಾಸ್ಟ್‌ ದೀಪಗಳು ಕೆಲ ದಿನ ಮಾತ್ರ ಉರಿದು, ಇದ್ದಕ್ಕಿಂದ್ದಂತೆ ಕಣ್ಣು ಮುಚ್ಚಿಕೊಂಡವು. ಸ್ಟೇಡಿಯಂ ಒಳಭಾಗದ ಒಂದು ದೀಪ ಹೊರತುಪಡಿಸಿದರೆ, ಉಳಿದಂತೆ 11 ದೀಪ ಒಂದೂವರೆ ವರ್ಷದಿಂದ ಬೆಳಕು ನೀಡದೆ ಕಂಬದಲ್ಲಿ ನೇತಾಡುತ್ತಿವೆ. ಅರ್ಧ ಕೋಟಿಯಷ್ಟು ಹಣ ವೆಚ್ಚಮಾಡಿ ಅಳವಡಿಸಲಾದ ದೀಪಗಳ ದುರಸ್ತಿಗೆ ಪುರಸಭೆ ಅಧಿಕಾರಿಗಳು ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ. ಸಾರ್ವಜನಿಕ ಹಣ ಹೇಗೆ ವ್ಯರ್ಥವಾಗಿ ಹೋಗುತ್ತದೆ ಎನ್ನುವುದಕ್ಕೆ  ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸುತ್ತಾರೆ ಪಟ್ಟಣದ  ಮಂಜುನಾಥ, ಕೆ.ಉಚ್ಚೆಂಗಪ್ಪ.

ಹೈಮಾಸ್ಟ್‌ ದೀಪಗಳ ದುರಸ್ತಿ ಪಡಿಸಿ ಕನಿಷ್ಠ ಬೆಳಕಿನ ವ್ಯವಸ್ಥೆ ಮಾಡದ ಪುರಸಭೆ ಅಧಿಕಾರಿಗಳನ್ನು ಪಟ್ಟಣದ ನಿವಾಸಿಗಳು ನಿತ್ಯವೂ ಶಪಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)