ಮಂಗಳವಾರ, ಮಾರ್ಚ್ 9, 2021
31 °C

ಹರಳಯ್ಯನ `ಭಕ್ತಿಪ್ರವಾಸ'

-ಗಾಣಧಾಳು ಶ್ರೀಕಂಠ . Updated:

ಅಕ್ಷರ ಗಾತ್ರ : | |

ಹರಳಯ್ಯನ `ಭಕ್ತಿಪ್ರವಾಸ'

`ಬಸವಣ್ಣನ ಪಾತ್ರ ರಮೇಶ್ ಅವರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ' ಎಂದರು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು. ಕ್ರಾಂತಿಯೋಗಿ ಬಸವಣ್ಣನ ಪೋಷಾಕಿನಲ್ಲಿ ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದ ನಟ ರಮೇಶ್ ಅರವಿಂದ್, ಶರಣರಿಗೆ ನಮಿಸುತ್ತಾ `ಧನ್ಯನಾದೆ' ಎಂದರು.ಚಿತ್ರದುರ್ಗದ ಮುರುಘಾಮಠದಲ್ಲಿ ಇತ್ತೀಚೆಗೆ ನಡೆದ `ಮಹಾಶರಣ ಹರಳಯ್ಯ' ಸಿನಿಮಾದ ಚಿತ್ರೀಕರಣದ ವೇಳೆ ಆಯೋಜಿಸಿದ್ದ ಸುದ್ದಿಗೋಷ್ಠಿ ಇದು.ಚಿತ್ರದ ನಿರ್ದೇಶಕರು ಬಿ.ಎ. ಪುರುಷೋತ್ತಮ್. `ಮಹಾಶರಣ ಹರಳಯ್ಯ' ಚಿತ್ರದಲ್ಲಿನ ಬಸವಣ್ಣನ ಪಾತ್ರಕ್ಕೆ ಕಲಾವಿದರಿಗಾಗಿ ನಡೆಸಿದ ಹುಡುಕಾಟದ ಬಗ್ಗೆ ಅವರು ಮಾತನಾಡಿದರು.`ರಮೇಶ್ ಬಿಟ್ಟರೆ ಬಸವಣ್ಣನ ಪಾತ್ರಕ್ಕೆ ಬೇರೆ ಯಾರೂ ಹೊಂದುವುದಿಲ್ಲ ಎನ್ನುವುದು ಚಿತ್ರತಂಡದ ತೀರ್ಮಾನವಾಗಿತ್ತು. ಅವರ ನಗುಮೊಗ, ಸ್ಪಷ್ಟವಾದ ಡೈಲಾಗ್ ಡೆಲಿವರಿ, ದೇಹದಾರ್ಢ್ಯ ಎಲ್ಲವೂ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಆದರೆ ಕ್ರೇಜಿ ಬಾಯ್, ಲವರ್ ಬಾಯ್, ಹಾಸ್ಯಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದ ಅವರು, ಶರಣರ ಪಾತ್ರವನ್ನು ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನ ಇತ್ತು' ಎಂದು ಹೇಳುವಾಗ ಪುರುಷೋತ್ತಮ್ ಮೊಗದಲ್ಲಿ ಮಂದಹಾಸ.`ಮೂರು ವರ್ಷಗಳಿಂದ ಇಂಥದ್ದೊಂದು ಪಾತ್ರ ಮಾಡಬೇಕೆನಿಸಿತ್ತು. ನಿರ್ದೇಶಕರು ನನ್ನ ಆಸೆ ಈಡೇರಿಸಿದ್ದಾರೆ' ಎಂದರು ನಟ ರಮೇಶ್. `ಬಹುಶಃ ನನ್ನ ಇಡೀ ಸಿನಿಮಾ ವೃತ್ತಿ ಜೀವನದಲ್ಲಿ ಯಾವುದೇ ಪಾತ್ರಕ್ಕೂ ಮಾಡಿರದಷ್ಟು ಹೋಮ್ ವರ್ಕ್ ಮಾಡಿಕೊಂಡಿದ್ದೇನೆ' ಎನ್ನುತ್ತಾ ಪಾತ್ರದ ಸಿದ್ಧತೆ ವಿವರಿಸಿದರು.`ವ್ಯಕ್ತಿತ್ವ ವಿಕಾಸಗೊಳಿಸುವ ಪಾತ್ರ ಇದು. ಪಾತ್ರ ಮಾಡುತ್ತಾ ಮಾಡುತ್ತಾ ನನ್ನ ಚಟುವಟಿಕೆಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಿದ್ದೇನೆ. ಇಷ್ಟಲಿಂಗ ಪೂಜೆಯಂತಹ ಹೊಸ ಹೊಸ ಪ್ರಕ್ರಿಯೆಗಳು ನಿತ್ಯದ ಬದುಕಿನ ಭಾಗವಾಗುತ್ತಿವೆ' ಎಂದು ರಮೇಶ್ ತಮ್ಮ ಮೇಲೆ ಬಸವಣ್ಣನ ಪಾತ್ರ ಬೀರಿರುವ ಪ್ರಭಾವವನ್ನು ಹೇಳಿಕೊಂಡರು.`ಶೂಟಿಂಗ್ ಬಹುತೇಕ ಮುಗಿದಿದೆ. ನೈಜವಾದ ಪರಿಸರ ಬೇಕೆನ್ನುವ ಕಾರಣದಿಂದ ರಾಜ್ಯದ ಪ್ರತಿಷ್ಠಿತ ಮಠಗಳನ್ನು ಆಯ್ದುಕೊಂಡಿದ್ದೇವೆ. ಚಿತ್ರದುರ್ಗದ ಮುರುಘಾಮಠ ಹಾಗೂ ಚಂದವಳ್ಳಿ ತೋಟದಲ್ಲಿ ಹಾಡುಗಳ ಚಿತ್ರೀಕರಣ ಮಾಡುತ್ತಿದ್ದೇವೆ' ಎನ್ನುತ್ತಾ ನಿರ್ದೇಶಕರು ಮತ್ತೆ ಸಿನಿಮಾ ತಯಾರಿಯ ಮಾತಿನತ್ತ ಹೊರಳಿದರು.`ಚಿತ್ರದ ಎಲ್ಲ ಪಾತ್ರಧಾರಿಗಳು ಧಾರ್ಮಿಕ ಸಿನಿಮಾಗಳಲ್ಲಿ ನಟಿಸಿ ಅನುಭವ ಪಡೆದಿರುವವರು. ನಟ ಶ್ರೀಧರ್ ಹರಳಯ್ಯನ ಪಾತ್ರ ಮಾಡುತ್ತಿದ್ದಾರೆ. ರಾಮಕೃಷ್ಣ ಅವರದು ಬಿಜ್ಜಳ ಮಹಾರಾಜನ ಪಾತ್ರ. ಕೊಂಡಿ ಮಂಚಣ್ಣನ ಪಾತ್ರದಲ್ಲಿ ರಮೇಶ್ ಭಟ್ ಇದ್ದಾರೆ. ಶೀಲಾ ಎಂಬ ಕಲಾವಿದೆ ಹರಳಯ್ಯನ ಪತ್ನಿ ಕಲ್ಯಾಣಮ್ಮನ ಪಾತ್ರ ಮಾಡುತ್ತಿದ್ದಾರೆ.

ಡಿಂಗ್ರಿ ನಾಗರಾಜ್ ಮಗ ಡಿಂಗ್ರಿ ರಾಜ್, ಉದಯ್ ಕುಮಾರ್ ಪುತ್ರ ವಿಜಯ್, ಹರಳಯ್ಯನ ಮಕ್ಕಳ ಪಾತ್ರ ಮಾಡುತ್ತಿದ್ದಾರೆ. ಎ. ದೇವರಾಜ್, ವೆಂಕಟೇಶ್, ರವಿಚಂದ್ರ ಈ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ' ಎಂದು ಚಿತ್ರತಂಡದ ಪರಿಚಯ ಮಾಡಿಕೊಟ್ಟರು ನಿರ್ದೇಶಕರು.`ಶರಣರ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಹರಳಯ್ಯ ಸಿನಿಮಾ ಮೂಡಿಬರಬೇಕು' ಎಂದರು ಧಾರವಾಡ ಜಿಲ್ಲೆಯ ಗರಗದ ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ. ಈ ಚಿತ್ರದ ಹಿಂದಿನ ಪ್ರೇರಕ ಶಕ್ತಿಯಾಗಿರುವ ಸ್ವಾಮೀಜಿ, ಚಿತ್ರೀಕರಣಕ್ಕೆ ಬೇಕಾದ ಸ್ಥಳಗಳನ್ನು ಸೂಚಿಸಿದ್ದಾರಂತೆ.`ಮಾನವತಾವಾದಿಗಳ ಸಿನಿಮಾ ಎಲ್ಲ ಕಾಲಕ್ಕೂ ಪ್ರಸ್ತುತ. ಈ ಸಿನಿಮಾ ಗೆಲ್ಲಬೇಕು' ಎಂದು ಸ್ವಾಮೀಜಿ  ಹಾರೈಸಿದರು. ಅಂದಹಾಗೆ, ಚಿತ್ರದ ಬಜೆಟ್ ಎರಡೂವರೆ ಕೋಟಿ ರೂಪಾಯಿ ದಾಟುತ್ತದಂತೆ.

-ಗಾಣಧಾಳು ಶ್ರೀಕಂಠ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.