ಸೋಮವಾರ, ಮೇ 23, 2022
28 °C

ಹರವೆ: ನೀರಿನ ಸಮಸ್ಯೆ ಪರಿಹರಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಅಭಿವೃದ್ಧಿ ವಿಚಾರದಲ್ಲಿ ಹರವೆ ಭಾಗಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗಿದೆ~ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.ತಾಲ್ಲೂಕಿನ ಹರವೆ ಗ್ರಾಮದಲ್ಲಿ ಈಚೆಗೆ ಗುಂಡಲಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕೆರೆಗಳ ಪುನರುಜ್ಜೀವನ ಸಂಬಂಧ ಗುಂಡ್ಲುಪೇಟೆ ಕ್ಷೇತ್ರಕ್ಕೆ 5 ಕೋಟಿ ರೂ ಬಿಡುಗಡೆಯಾಗಿದೆ. ಇದರಲ್ಲಿ 20 ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಹರವೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ 14 ಲಕ್ಷ ರೂ ವೆಚ್ಚದಡಿ ಕುಡಿಯುವ ನೀರಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.ಗುಂಡಲಕೆರೆ ಅಭಿವೃದ್ಧಿಗೆ 25 ಲಕ್ಷ ರೂ ನೀಡಲಾಗಿದೆ. ಹಿರಿಬೇಗೂರು ಕೆರೆ ಅಭಿವೃದ್ಧಿಗೆ 20 ಲಕ್ಷ ರೂ ಬಿಡುಗಡೆಯಾಗಿದೆ. ಗುಂಡಲಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನದಡಿ ಕೆರೆ ಏರಿ ಅಭಿವೃದ್ಧಿಗೆ 2.76 ಲಕ್ಷ ರೂ, ಹೂಳು ತೆಗೆಯಲು 11.54 ಲಕ್ಷ ರೂ, ನೀರು ಸಂಗ್ರಹಿಸುವ ಮಾರ್ಗಗಳ ಅಭಿವೃದ್ಧಿಗೆ 9.43 ಲಕ್ಷ ರೂ ವಿನಿಯೋಗಿಸಬೇಕಿದೆ. ಉಳಿದ ಹಣದಲ್ಲಿ ಜಾನುವಾರುಗಳು ಇಳಿಯುವ ಹಂತದ ನಿರ್ಮಾಣ ಮಾಡಬೇಕು. ಮಳೆಗಾಲದಲ್ಲಿ ಕೆರೆಯ ಅಂತರ್ಜಲಮಟ್ಟ ನೋಡಿಕೊಂಡು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.ಗ್ರಾಮದ ಜೂನಿಯರ್ ಕಾಲೇಜಿಗೆ ಹೆಚ್ಚುವರಿ ಕೊಠಡಿ ನಿರ್ಮಿಸಿಕೊಡಲಾಗಿದೆ. ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ವಸತಿನಿಲಯ ಸ್ಥಾಪಿಸಲಾಗಿದೆ. ಎರಡು ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂ ಮಂಜೂರಾಗಿದೆ ಎಂದರು.1 ಕೋಟಿ ರೂ ವೆಚ್ಚದಡಿ ಹರವೆ-ಸಾಗಡೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹರವೆ, ತಮ್ಮಡಹಳ್ಳಿ, ಲಕ್ಕೂರು ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಲಾಗಿದೆ. ಮುಕ್ಕಡಹಳ್ಳಿ-ಹರವೆ ರಸ್ತೆಯನ್ನು 45 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಜಿ.ಪಂ. ಸದಸ್ಯೆ ಸರಸಮ್ಮ, ಗ್ರಾ.ಪಂ. ಅಧ್ಯಕ್ಷ ಶಿವಕುಮಾರಸ್ವಾಮಿ, ಜಗದೀಶ್, ಲಕ್ಷ್ಮಣರಾವ್, ಗುರುಸಿದ್ದೇಗೌಡ, ರಂಗಸ್ವಾಮಿ, ಮಲ್ಲಣ್ಣ ಇತರರು ಹಾಜರಿದ್ದರು.ಇದಕ್ಕೂ ಮೊದಲು ತಾಲ್ಲೂಕಿನ ಕಲ್ಪುರ ಗ್ರಾಮದಲ್ಲಿ ಶಾಸಕರ ಅನುದಾನದ 4.5 ಲಕ್ಷ ವೆಚ್ಚದಡಿ ನಿರ್ಮಿಸುವ ಬಸವ ಭವನ ನಿರ್ಮಾಣ ಕಾಮಗಾರಿಗೆ ಮಹದೇಪ್ರಸಾದ್ ಗುದ್ದಲಿಪೂಜೆ ನೆರವೇರಿಸಿದರು. ಕಲ್ಪುರ ಮಠದ ಮಹದೇವ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷ ಶಿವಕುಮಾರಸ್ವಾಮಿ ಇತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.