ಸೋಮವಾರ, ಜೂನ್ 21, 2021
20 °C
ಲೈಂಗಿಕ ದೌರ್ಜನ್ಯ ನಡೆದಿಲ್ಲ: ಯುವತಿ ಸ್ಪಷ್ಟನೆ

ಹಲವು ಯುವತಿಯರಿಗೆ ವಂಚಿಸಿರುವ ಸಿದ್ದಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಯುವತಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಬಂಧಿತನಾಗಿರುವ ಚಾಲಕ ಸಿದ್ದಾರ್ಥ್‌ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಗರದ ವಿವಿಧ ಠಾಣೆಗಳಲ್ಲಿ ಎಂಟಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.‘ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕನಾಗಿದ್ದ ಸಿದ್ದಾರ್ಥ್‌, ಬಸ್‌ನಲ್ಲಿ ಪ್ರಯಾಣ ಮಾಡುವ ಯುವತಿಯರಿಂದ ಟಿಕೆಟ್ ಹಣ ಪಡೆಯದೆ ಅವರೊಂದಿಗೆ ವಿಶ್ವಾಸ ಗಳಿಸುತ್ತಿದ್ದ. ನಂತರ ಅವರಿಗೆ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಚಂದ್ರಾಲೇಔಟ್, ಎಲೆಕ್ಟ್ರಾನಿಕ್‌ಸಿಟಿ, ಮಲ್ಲೇಶ್ವರ, ಬಾಗಲಗುಂಟೆಯ ಯುವತಿಯರು ಹಾಗೂ ಮಹಿಳೆಯರಿಗೆ ಈ ರೀತಿ ವಂಚಿಸಿದ್ದಾನೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಬಿಎಂಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ ನಂಬಿಸಿದ್ದ ಸಿದ್ದಾರ್ಥ್‌, 2012ರ ಮೇ 5ರಂದು ಅವರನ್ನು ವಸತಿ ಗೃಹಕ್ಕೆ ಕರೆದೊಯ್ದು ₨ 80 ಸಾವಿರ ಬೆಲೆಬಾಳುವ ಚಿನ್ನದ ಸರ ಹಾಗೂ ಮೊಬೈಲ್‌ ಕಿತ್ತುಕೊಂಡಿದ್ದ. ಅಲ್ಲದೇ, ಆ ಮಹಿಳೆ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಈ ಹಂತದಲ್ಲಿ ಆತನಿಂದ ತಪ್ಪಿಸಿಕೊಂಡ ಮಹಿಳೆ, ಯಶವಂತಪುರ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.ದೂರಿನ ಅನ್ವಯ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಸಿದ್ದಾರ್ಥ್‌ನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ನಂತರ ಬಿಎಂಟಿಸಿ ಆತನನ್ನು ಎಂಟು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಿತ್ತು.ದೂರು ನೀಡಲು ಹಿಂದೇಟು: ‘ಈ ಹಿಂದೆ ಬನಶಂಕರಿಯ ಎರಡನೇ ಹಂತದಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿದ್ದ ಯುವತಿ, ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ವರ್ಷದ ಹಿಂದೆ ಕೆಲಸ ಬಿಟ್ಟ ಅವರು, ಹುಟ್ಟೂರಿಗೆ ತೆರಳಿ ಬ್ಯಾಂಕ್‌ ಪರೀಕ್ಷೆಗಳ ಸಿದ್ಧತೆಯಲ್ಲಿ ತೊಡಗಿದ್ದರು. ಇದೀಗ ಪುನಃ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮಗಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಭಯಕ್ಕೆ ಯುವತಿಯ ಪೋಷಕರೂ ಸಹ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.ಲೈಂಗಿಕ ದೌರ್ಜನ್ಯ ನಡೆದಿಲ್ಲ: ‘ಬಸ್‌ ಚಾಲಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಿಲ್ಲ. ಆದರೆ, ಪದ್ಮನಾಭನಗರದ ಕಡೆಗೆ ಹೋಗುವುದಿಲ್ಲ ಎಂದು ಜಗಳ ಆರಂಭಿಸಿದ. ಈ ಹಂತದಲ್ಲಿ ನಾನು ಗಾಬರಿಗೊಂಡು ಕಿಟಕಿ ಮೂಲಕ ಜಿಗಿದೆ’ ಎಂದು ಯುವತಿ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ಕೊಟ್ಟಿದ್ದಾಳೆ.‘ಚಾಲಕ ಜಗಳ ತೆಗೆದಾಗ ನಾನೂ ಸಹ ವಾಗ್ವಾದ ನಡೆಸಿದೆ. ಆಗ ಬಸ್‌ನ ಬಾಗಿಲುಗಳನ್ನು ಬಂದ್‌ ಮಾಡಿದ ಆತ, ಮೆಜೆಸ್ಟಿಕ್‌ ಮಾರ್ಗದೆಡೆಗೆ ಹೊರಟ. ವಾಹನ ನಿಲ್ಲಿಸುವಂತೆ ಕೂಗಿದರೂ ಕಿವಿಗೊಡದಿದ್ದಾಗ ಗಾಬರಿಯಾಯಿತು. ಹೀಗಾಗಿ ಚಾಮರಾಜಪೇಟೆಯ ಬಜಾರ್‌ ಸ್ಟ್ರೀಟ್ ಬಳಿ ಕಿಟಕಿ ಮೂಲಕ ಕೆಳಗೆ ಜಿಗಿದೆ’ ಎಂದು ಯುವತಿ ಹೇಳಿದ್ದಾಳೆ.

ಪೊಲೀಸರು ಸಿದ್ದಾರ್ಥ್‌ನನ್ನು ವಿಚಾರಣೆ ನಡೆಸಿದಾಗ, ‘ಬನಶಂಕರಿ ಬಸ್‌ ನಿಲ್ದಾಣ ಕೊನೆಯ ನಿಲ್ದಾಣವಾಗಿದ್ದರಿಂದ ಎಲ್ಲ ಪ್ರಯಾಣಿಕರು ಇಳಿದರು.  ಆದರೆ, ಯುವತಿ ಮಾತ್ರ ಪದ್ಮನಾಭನಗರಕ್ಕೆ ಹೋಗಬೇಕೆಂದು ಪಟ್ಟು ಹಿಡಿದಳು.ಆಕೆಯೇ ಜಗಳ ಆರಂಭಿಸಿ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ನಿಂದಿಸಿದಳು. ಹೀಗಾಗಿ ಸಿಟ್ಟಿನಿಂದ ಬಾಗಿಲು ಬಂದ್‌ ಮಾಡಿದೆ. ಲೈಂಗಿಕ ದೌರ್ಜನ್ಯ ನನ್ನ ಉದ್ದೇಶವಾಗಿರಲಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾನೆ. ಇಬ್ಬರ ಹೇಳಿಕೆಗಳನ್ನೂ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‘ಯುವತಿ ದೂರು ನೀಡಲು ನಿರಾಕರಿಸಿದ್ದಾಳೆ. ಆದರೆ, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆ ಯತ್ನ (ಐಪಿಸಿ 307), ಅಕ್ರಮ ಬಂಧನ (ಐಪಿಸಿ 341,342) ಹಾಗೂ ಹಲ್ಲೆ ನಡೆಸಿ ಮಹಿಳೆ ಗೌರವಕ್ಕೆ ಧಕ್ಕೆ (ಐಪಿಸಿ 354) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸಿದ್ದಾರ್ಥ್‌ನನ್ನು ಬಂಧಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್‌. ಎಸ್‌.ರೇವಣ್ಣ ತಿಳಿಸಿದರು.ಕ್ಯಾಮೆರಾ ಅಳವಡಿಕೆ

‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈಗಾಗಲೇ 500 ಬಸ್‌ಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ’ ಎಂದು  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

‘ನಗರದಲ್ಲಿ 6,500 ಬಿಎಂಟಿಸಿ ಬಸ್‌ಗಳಿದ್ದು, ಅವುಗಳಲ್ಲಿ 70 ಬಸ್‌ಗಳನ್ನು ರಾತ್ರಿ ಪಾಳಿಯ ಸೇವೆಗೆ ಬಳಸಿಕೊಳ್ಳ­ಲಾಗುತ್ತಿದೆ. ಆ ಬಸ್‌ಗಳು ಮೆಜೆಸ್ಟಿಕ್‌, ನಗರ ರೈಲು ನಿಲ್ದಾಣ, ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ’ ಎಂದರು.ಕಮಿಷನರ್‌ಗೆ ದೂರು

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮಹಿಳಾ ಘಟಕದ ಸದಸ್ಯರು ಭಾನು­ವಾರ ಸಂಜೆ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಅವರನ್ನು ಭೇಟಿ ಮಾಡಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.‘ಆರೋಪಿ ಚಾಲಕ ಈ ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದ. ಆದರೂ ಬಿಎಂಟಿಸಿ ಅಧಿಕಾರಿಗಳು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಪುನಃ ಆತನಿಗೆ ಸೇವೆಗೆ ಅವಕಾಶ ಮಾಡಿಕೊಟ್ಟಿ­ರುವುದು ಖಂಡನಾರ್ಹ’ ಎಂದು ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್‌ ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.