ಸೋಮವಾರ, ಮೇ 23, 2022
21 °C

ಹಲಸು ಕಸಿಯ ಪರಿಣತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಗುಣದ ಹಲಸಿನ ತಳಿ ಇದೆ ಎಂಬ ಮಾಹಿತಿ ಸಿಕ್ಕಿದರೆ ಸಾಕು. ಆ ಪ್ರದೇಶ ಯಾವ ಮೂಲೆ, ಕಾಡಿನಲ್ಲಿದ್ದರೂ ಸರಿ. ವೆಚ್ಚದ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿಯೊಬ್ಬರು ಆ ತಳಿಯ ಮರವನ್ನು ಹುಡುಕಿಕೊಂಡು ಹೊರಟೇಬಿಡುತ್ತಾರೆ. ಅದನ್ನು ಪತ್ತೆಹಚ್ಚಿ ಒಂದು ಪುಟ್ಟ ಕಡ್ಡಿ(ಕೊಂಬೆ) ಕತ್ತರಿಸಿ ತರುತ್ತಾರೆ. ಅದನ್ನು ಬೀಜ ನೆಟ್ಟು ಬೆಳೆಸಿದ ಗಿಡಕ್ಕೆ ಕಸಿ ಕಟ್ಟುತ್ತಾರೆ. ಅವರ ಕೈ ಗುಣದ ಬಗ್ಗೆ ಹುಸಿ ಇಲ್ಲ. ಕಸಿ ಯಶಸ್ವಿಯಾಗುತ್ತದೆ.ಕಸಿ ಕಟ್ಟಿದ ಹಲಸಿನ ಸಸಿ ಮರವಾಗಿ ಬೆಳೆದು ಐದಾರು ವರ್ಷಗಳಲ್ಲಿ ಹಣ್ಣು ಕೊಡುತ್ತದೆ. ಹಣ್ಣನ್ನು ತಿನ್ನುವರ ಬಾಯಲ್ಲಿ `ವಾಹ್~ ಎಂಬ ಉದ್ಗಾರ ಹೊರಡುತ್ತದೆ!ವಿಶಿಷ್ಟ ತಳಿಯ ಹಲಸುಗಳನ್ನು ಹುಡುಕಿಕೊಂಡು ಹೋಗಿ ತಂದು ಕಸಿ ಕಟ್ಟುವ ವ್ಯಕ್ತಿಯ ಹೆಸರು ಗುರುರಾಜ ಬಾಳ್ತಿಲ್ಲಾಯ. ಕಾರ್ಕಳದಿಂದ ಉಡುಪಿಗೆ ಹೋಗುವ ದಾರಿಯಲ್ಲಿ `ಮರಾಟಿ ತೋಟ~ ಎಂಬಲ್ಲಿ ಅವರ ಮನೆ ಇದೆ. ಅವರ ಮನೆಯಂಗಳ ತುಂಬಾ ಪಾಲಿಥಿನ್ ಚೀಲಗಳಲ್ಲಿ ಕಸಿ ಕಟ್ಟಿದ ಹಲಸಿನ ಗಿಡಗಳಿವೆ. ನಲವತ್ತರ ಆಸುಪಾಸಿನ ಬಾಳ್ತಿಲ್ಲಾಯರು  ಹಲಸಿನ ಕಸಿ ಕಟ್ಟುವುದರಲ್ಲಿ ಎತ್ತಿದ ಕೈ.`ನೋಡಿ ಇದು ರಾಮಚಂದ್ರ ಹಲಸು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ (ರುಚಿಗಾಗಿ) ಎರಡನೆಯ ಬಹುಮಾನ ಪಡೆದದ್ದು. ಅದು ಮುಳಿಯದ ರುದ್ರಾಕ್ಷಿ ಹಲಸಿನ ಹಬ್ಬದಲ್ಲಿ ಮೊದಲ ಸ್ಥಾನ ಪಡೆದಿತ್ತು. ಇದು ಬೆಂಗಳೂರಿನದು. ಅಲ್ಲಿದೆ ತೂಬುಗೆರೆ ಹಲಸು.... ಹೀಗೆ ಒಂದೊಂದು ಸಾಲಿನಲ್ಲಿ ಓರಣವಾಗಿ ಜೋಡಿಸಿಟ್ಟ ಗಿಡಗಳನ್ನು ತೋರಿಸುತ್ತ ಆಸಕ್ತಿಯಿಂದ ವಿವರಿಸುತ್ತಾರೆ ಬಾಳ್ತಿಲ್ಲಾಯ.ಹಲಸಿನ ಮರ ಇರುವ ಸ್ಥಳಕ್ಕೇ ಹೋಗಿ ತಾವೇ ಮರ ಹತ್ತಿ ಹಣ್ಣು ಕೆಳಗಿಳಿಸಿ ತಿಂದು ರುಚಿ ನೋಡಿದ ಮೇಲೆ ಅದರ ಕಡ್ಡಿ ತಂದು ಕಸಿ ಕಟ್ಟುವುದು ಅವರ ವಿಶೇಷ. ಶೃಂಗೇರಿ, ಚಿಕ್ಕಮಗಳೂರು, ಎನ್.ಆರ್.ಪುರ, ನಗರ, ರಿಪ್ಪನ್‌ಪೇಟೆ, ಕೊಡಗಿನ ಕುಟ್ಟ, ಬೆಂಗಳೂರಿನ ಲಾಲ್‌ಬಾಗ್, ಕಾಸರಗೋಡು, ತಮಿಳುನಾಡುಗಳ ವಿಶಿಷ್ಟ ತಳಿಯ ಹಲಸುಗಳೆಲ್ಲ ಅವರ ಅಂಗಳದಲ್ಲಿ ಕಸಿ ಕ್ರಿಯೆಗೆ ಒಳಗಾಗಿ ಸಸಿಗಳಾಗಿ ನಾಟಿಗೆ ಸಿದ್ಧವಾಗಿ ನಿಂತಿವೆ. ಅವರು ಕಸಿ ಕಟ್ಟಿದ ಮರಗಳು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಉದ್ದಗಲದ ರೈತರ ತೋಟಗಳಲ್ಲಿ ಫಲ ಕೊಡುತ್ತಿವೆ.ಐವತ್ತು ವಿಶಿಷ್ಟ ತಳಿಯ ಹಲಸಿನ ಕಸಿ ಗಿಡಗಳನ್ನು ತಯಾರಿಸಿರುವ ಬಾಳ್ತಿಲ್ಲಾಯರು ಪ್ರತಿ ವರ್ಷ ನಾಲ್ಕು  ಸಾವಿರಕ್ಕಿಂತ ಅಧಿಕ ಗಿಡಗಳನ್ನು ರೈತರ ಕೈಗೆ ದಾಟಿಸುತ್ತಿದ್ದಾರೆ.

ಬೆಂಗಳೂರಿಗೆ ಈ ವರ್ಷ 2 ಸಾವಿರ ಕಸಿ ಗಿಡಗಳನ್ನು ಕೊಟ್ಟಿದ್ದಾರೆ. ಪಿರಿಯಾಪಟ್ಟಣ, ದಾವಣಗೆರೆ, ಹುಣಸೂರು, ಶೃಂಗೇರಿ, ಮುಂಬೈ-ಹೈದರಾಬಾದ್‌ಗಳ ರೈತರ ತೋಟಗಳಲ್ಲೂ ಅವರ ಕಸಿ ಕಟ್ಟಿದ ಮರಗಳು ಹಣ್ಣು ಕೊಡುತ್ತಿವೆ.ಧರ್ಮಸ್ಥಳದ ಪುದುವೆಟ್ಟು ಗ್ರಾಮದಲ್ಲಿ ಜನಿಸಿದ ಬಾಳ್ತಿಲ್ಲಾಯರು ಪಿಯುಸಿವರೆಗೆ ಓದಿದ್ದಾರೆ.  ಜೀವನೋಪಾಯಕ್ಕೆ ಎಲೆಕ್ಟ್ರಾನಿಕ್ ಕ್ಷೇತ್ರ ಅವಲಂಬಿಸಿದ್ದರೂ ಕಸಿ ಕಟ್ಟುವ ಕೆಲಸದಲ್ಲಿ ಅವರು ಪರಿಣತಿ ಪಡೆದಿದ್ದಾರೆ. ಇಪ್ಪತ್ತು ವರ್ಷಗಳಿಂದ ಅವರು ಕಸಿ ಕಟ್ಟುತ್ತಿದ್ದಾರೆ. ದಿನಕ್ಕೆ 800 ಗೇರು ಗಿಡಗಳಿಗೆ ಕಸಿ ಕಟ್ಟುವ ಸಾಮರ್ಥ್ಯ ಅವರಿಗೆ ಇದೆ.ಈಗಲೂ ದಿನಕ್ಕೆ 400 ಮಾವು, 350 ಹಲಸಿನ ಗಿಡಗಳಿಗೆ ಕಟ್ಟುತ್ತಾರೆ. ಬೇರೆ ಬೇರೆ ತಿಂಗಳಲ್ಲಿ ಫಲ ಕೊಡುವ ಹಲಸಿನ ಮರಗಳ ಕೊಂಬೆಗಳನ್ನು ತಂದು ಒಂದು ಗಿಡಕ್ಕೇ ಕಸಿ ಕಟ್ಟಿ, ಪ್ರತಿ ತಿಂಗಳೂ ಒಂದೊಂದು ಕೊಂಬೆಯಲ್ಲಿ ಹಲಸಿನ ಹಣ್ಣು ಪಡೆಯುವ ಪ್ರಯೋಗ ಮಾಡುತ್ತಿದ್ದಾರೆ. ಹೆಬ್ಬಲಸಿನ ಮೂಲಗಿಡಕ್ಕೆ ಹಲಸು, ದೀವಿಹಲಸಿನ ಕಸಿಯ ಪ್ರಯೋಗ ಮಾಡುತ್ತಿದ್ದಾರೆ. ಅವರು ಕಸಿ ಕಟ್ಟಿದ ಒಂದು ಮಾವಿನ ಮರದಲ್ಲಿ ಮೂರು ಜಾತಿಯ  ಹಣ್ಣು ಪಡೆಯುತ್ತಿದ್ದಾರೆ.ಬಾಳ್ತಿಲ್ಲಾಯರು ಹಲಸು ಮಾತ್ರವಲ್ಲದೆ ನಿಂಬೆ, ಕಪ್ಪು ಬಣ್ಣದ ಪೇರಳೆ, ನೇರಳೆ ಮೆಣಸು, ಹತ್ತು ಬಗೆಯ ಮಾವು, ವರ್ಷವಿಡೀ ಹಣ್ಣು ಕೊಡುವ ನಿಂಬೆ, ನುಗ್ಗೆ, ಬಟರ್‌ಫ್ರೂಟ್, ಸಿಹಿ ಹುಣಸೆ,  ಕರಿಬೇವು, ನೆಲ್ಲಿ, ಅಲಂಕಾರಿಕ ಕಿತ್ತಳೆ, ರುಂಬ್ಟಾನ್ ಹಣ್ಣಿನ ಗಿಡಗಳಿಗೆ ಕಸಿ ಕಟ್ಟುತ್ತಾರೆ. ಕಾಡುಹಿಪ್ಪಲಿ ಗಿಡಕ್ಕೆ ಕಸಿ ಕಟ್ಟಿದ ವೀಳ್ಯದೆಲೆ, ಕಾಳುಮೆಣಸು, ಸಿಪ್ಪೆಸಹಿತ ತಿನ್ನಬಹುದಾದ ಕಿತ್ತಳೆ, ಸೇಬಿನ ಬಣ್ಣದ ಸೀಬೆ, ಲೂವಿ,ಮಿಲ್ಕೀ ಹಣ್ಣುಗಳು ಹಾಗೂ ಬ್ಯಾಂಕಾಕ್‌ನ ರೆಡ್ ಆಪಲ್ ಸೇರಿದಂತೆ  45 ಬಗೆಯ ಗುಲಾಬಿಗಳು, 15 ಬಗೆಯ ದಾಸವಾಳಗಳು, ಸೇವಂತಿಗೆ ಇತ್ಯಾದಿ ರೈತರು ಕಂಡು, ಕೇಳಿ ಅರಿಯದ ವೈವಿಧ್ಯಮಯ ಗಿಡಗಳನ್ನು ಬಾಳ್ತಿಲ್ಲಾಯರು  ಬೆಳೆಸಿದ್ದಾರೆ.ಕಸಿ ಕಟ್ಟಿ ಗಿಡಗಳನ್ನು ಬೆಳೆಸಲು ಪಾಲಿಥಿನ್ ಚೀಲಗಳು ಬೇಕು. ಚೀಲಗಳಿಗೆ ತುಂಬಿಸಲು ಸೆಗಣಿ ಗೊಬ್ಬರ, ಮಣ್ಣು ಬೇಕು. ಗಿಡಗಳನ್ನು ನಿರ್ದಿಷ್ಟ ಉಷ್ಣಾಂಶದ ವಾತಾವರಣದಲ್ಲಿ ಬೆಳೆಸಲು ಹಸಿರು ಮನೆ ಇದೆ. ಇವೆಲ್ಲಕ್ಕೂ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಕಸಿ ಗಿಡಗಳ ಮಾರಾಟದಿಂದ ಅವರಿಗೆ ಭಾರೀ ಲಾಭವೇನೂ ಇಲ್ಲ. ಆದರೆ ತೋಟಗಾರರಿಗೆ ಗುಣಮಟ್ಟದ ಹಣ್ಣಿನ ಗಿಡಗಳನ್ನು ನೀಡಿದ ತೃಪ್ತಿ ಅವರಿಗಿದೆ.ಗುಣಮಟ್ಟದ ಹಲಸಿನ ತಳಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಾಳ್ತಿಲ್ಲಾಯರು ರೈತರಿಗೆ ಹೇಳುವ ಕಿವಿ ಮಾತೆಂದರೆ `ವಿಶಿಷ್ಟ ತಳಿಯ ಹಲಸಿನ ಮರ ಎಲ್ಲೇ ಇರಲಿ, ನೀವೇ ಅದರ ತಳಿ ಸಂವರ್ಧಿಸಿ. ಬೀಜದಿಂದ ತಳಿ ಸಂವರ್ಧನೆ ಆಗುವುದಿಲ್ಲ. ಹಲಸಿನ ಮರಗಳನ್ನು ಕಡಿಯಬೇಡಿ. ಕಡಿಯುವ ಮೊದಲು ಅದರ ಕೊಂಬೆಗಳಿಗೆ ಕಸಿ ಕಟ್ಟ ಆ ತಳಿಯನ್ನು ಉಳಿಸಿ. ಹೆಚ್ಚಿನ ಸಲಹೆ ಬೇಕಿದ್ದರೆ  ನನ್ನನ್ನೂ ಸಂಪರ್ಕಿಸಿ ಎನ್ನುತ್ತಾರೆ. ಅವರ ಮೊಬೈಲ್ ನಂಬರ್: 9731734688.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.