ಸೋಮವಾರ, ಆಗಸ್ಟ್ 10, 2020
24 °C

ಹಲಸು ಹಬ್ಬ

ಚಂದ್ರಹಾಸ ಚಾರ್ಮಾಡಿ Updated:

ಅಕ್ಷರ ಗಾತ್ರ : | |

ಹಲಸು ಹಬ್ಬ

ಕರಾವಳಿ ಜಿಲ್ಲೆಗಳು ಹಲಸಿನ ತವರೂರು ಎಂದರೂ ತಪ್ಪಿಲ್ಲ. ಅದಕ್ಕಾಗೇ ಇಲ್ಲಿನ ನೂರಾರು ತಳಿಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ, ಹಲಸಿನ ವೈವಿಧ್ಯ ತಿನಿಸುಗಳನ್ನು ಸವಿಯುವ, ಬೇಡಿಕೆ ಮತ್ತು ವರಮಾನ ತಂದುಕೊಡುವ ಅಪರೂಪದ ಹಲಸಿನ ಹಬ್ಬವನ್ನು ಧರ್ಮಸ್ಥಳದಲ್ಲಿ ಈಚೆಗೆ ಏರ್ಪಡಿಸಲಾಗಿತ್ತು.ಪ್ರತಿ ವರ್ಷ ಮಳೆಗಾಲ ಆರಂಭದೊಂದಿಗೆ ಹಲಸಿನ ಪರಿಮಳ ಮೂಗಿಗೆ ಬಡಿಯುತ್ತದೆ. ಇದು ಸಾರಜನಕ, ಪಿಷ್ಟ, ಖನಿಜಾಂಶ, ಅನ್ನಾಂಗ, ಸಕ್ಕರೆ ಅಂಶಗಳಿಂದ ಸಮೃದ್ಧವಾಗಿದೆ. ಇಷ್ಟೆಲ್ಲ ಆರೋಗ್ಯಕರ ಅಂಶಗಳನ್ನು ಹೊಂದಿದ, ಹಿಂದಿನ ಕಾಲದಲ್ಲಿ ವಿಫುಲವಾಗಿದ್ದು ಇದೀಗ ತೆರೆಮರೆಗೆ ಸರಿಯುತ್ತಿರುವ ಹಲಸಿನ ತಳಿಗಳನ್ನು ಉಳಿಸಿ ಬೆಳೆಸುವತ್ತ ರೈತರನ್ನು ಪ್ರೇರೇಪಿಸುವುದೇ ಈ ಮೇಳದ ಉದ್ದೇಶ.ನೇರ ಸೇವನೆಗೆ, ಅಡುಗೆಗೆ, ಪೀಠೋಪಕರಣ ತಯಾರಿಗೆ, ಗಾಳಿ ತಡೆಗೆ, ನೆರಳಾಗಿ, ಮೇವಾಗಿ ಉಪಯುಕ್ತವಾದ ಹಲಸಿನ ಕಾಯಿ ಮತ್ತು ಹಣ್ಣುಗಳನ್ನು ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಬಳಸುವ, ಹಣ್ಣಿನ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇಲ್ಲಿತ್ತು.ಆದರೆ ಈ ಕಾರ್ಯಕ್ರಮ ಕೇವಲ ಭಾಷಣಗಳಿಗೆ ಸೀಮಿತವಾಗಿರಲಿಲ್ಲ. ಇಲ್ಲಿ 1000 ಹಲಸಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಅದಕ್ಕೆ ಮೌಲ್ಯವರ್ಧನೆ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು.ಅಂತರ‌್ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಹಲಸು ಬೆಳೆಗೆ ನಿರೀಕ್ಷಿತ ಮಾರುಕಟ್ಟೆ ದೊರೆಯದೆ ಪ್ರತಿ ವರ್ಷ ಲೆಕ್ಕಕ್ಕೆ ಸಿಗದಷ್ಟು ಹಣ್ಣು ಹಾಳಾಗುತ್ತಿದೆ. ಇದನ್ನು ಮನಗಂಡ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ, ಬ್ರಹ್ಮಾವರದ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಮಂಗಳೂರಿನ ಕೃಷಿಕ ಸಮಾಜ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಜೊತೆಯಾಗಿ ರಾಜ್ಯಮಟ್ಟದಲ್ಲಿ ಎರಡು ವರ್ಷಗಳಿಂದ ಈ ರೀತಿ ಹಲಸಿನ ಹಬ್ಬ ನಡೆಸುತ್ತಿವೆ.ಎಂದಿನಂತೆ ಈ ಸಲವೂ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ತಂಡದ ಸದಸ್ಯರು ಮತ್ತು ಬೇರೆ ಬೇರೆ ಜಿಲ್ಲೆಯ ಹಲಸುಪ್ರಿಯರು ತಯಾರಿಸಿದ ಪಾಯಸ, ಹಪ್ಪಳ, ದೋಸೆ, ಹಲಸಿನ ಕಾಯಿ ಹಾಗೂ ಹಣ್ಣಿನ ತೊಳೆಯ ಜ್ಯೂಸ್, ಜಾಮ್, ಕೇಕ್, ಮಿಕ್ಸರ್, ಅಪ್ಪ, ಕಡುಬು, ಸೋಂಟೆ, ಬೀಜದಿಂದ ತಯಾರಿಸಿದ ಚಕ್ಕುಲಿ, ಹಣ್ಣಿನ ಅಪರೂಪದ ಖಾದ್ಯಗಳನ್ನು ಒಂದೆಡೆ ಸವಿಯುವ ಅವಕಾಶ ಹಬ್ಬದಲ್ಲಿತ್ತು.ಚಂದ್ರ ಹಲಸು, ಕೆಂಪು ನಾಮದ ಹಲಸು, ಬಂಗಾರದ ಹಲಸು, ಶಿವರಾತ್ರಿ ಹಲಸು, ರುದ್ರಾಕ್ಷಿ ಹಲಸು, ರಾಜ ಹಲಸು, ಗಂಲೆಸ್ ಹಲಸು, ಬಂಗಾರದ ಹಲಸು, ಏಕಾದಶಿ ಚಂದ್ರ ಹಲಸು, ಹಳದಿ ರುದ್ರಾಕ್ಷಿ ಹಲಸು, ಗುಂಡನೇ ಹಲಸು, ಕೋತಿ ಹಲಸು, ತುಳುವ ಹಲಸು, ಅಜ್ಜರಕಲ್ಲು ಹಲಸು, ತುಪ್ಪ ಹಲಸು ಮುಂತಾದ ಹಣ್ಣುಗಳ ರುಚಿ ನೋಡಿ ಜನ ಖುಷಿಪಟ್ಟರು.ಉತ್ತರ ಕನ್ನಡ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯುವ ಅಪರೂಪದ ಹಲಸಿನ ತಳಿಗಳು ವಿಶೇಷ ಗಮನ ಸೆಳೆದುವು.ಕೃಷಿ ವಿವಿ ಈಗಾಗಲೇ ಹಲಸಿನ ಅಭಿವೃದ್ಧಿ, ಮೌಲ್ಯವರ್ಧನೆಗಾಗಿ 6 ಕೋಟಿ ರೂಪಾಯಿ ವೆಚ್ಚದ ಯೋಜನೆ ಹಾಕಿಕೊಂಡಿದೆ. ಅದು ಕಾರ್ಯಗತವಾಗಿ ಹಲಸಿಗೆ ರಾಜಮರ್ಯಾದೆ ಬಂದರೆ ಸಾಕು. ಹಲಸು ಕಡಿದು ರಬ್ಬರ್ ನೆಡುತ್ತಿರುವ ನಮ್ಮ ಹಳ್ಳಿ ಮಂದಿ ಮತ್ತೆ ಹಲಸು ಬೆಳೆಯುವ ಆಲೋಚನೆ ಮಾಡಬಹುದು.ಹಣ್ಣನ್ನು ವಿದೇಶಕ್ಕೆ ರಫ್ತು ಮಾಡುವ ಚಿಂತನೆಯೊಂದಿಗೆ ರಾಜ್ಯದ ನಗರಗಳಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಹೆಚ್ಚು ಬಳಕೆಯಾದರೆ ಹಲಸು ಮತ್ತೆ ಘಮಘಮಿಸುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಾಗಿದೆ.ಬಹುಪಯೋಗಿ ಹಲಸನ್ನು ಮುಂದಿನ ಪೀಳಿಗೆಗೂ ಉಳಿಸುವತ್ತ ನಾವೆಲ್ಲರೂ ಕೈ ಜೋಡಿಸಿದರೆ ಇಂಥ ಹಲಸಿನ ಹಬ್ಬಗಳಿಗೊಂದು ಅರ್ಥ ಬಂದಂತಾಗುತ್ತದೆ. ಮಾಹಿತಿಗೆ: 94802 48072.ವಿಶ್ವದ ಅತಿ ದೊಡ್ಡ ಹಣ್ಣು ಎಂಬ ಹೆಗ್ಗಳಿಕೆ ಹಲಸಿಗಿದೆ. ವಿಶ್ವದಲ್ಲಿ ಹಲಸು ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೆಯ ಸ್ಥಾನ. ನಮ್ಮಲ್ಲಿ 1.02 ಲಕ್ಷ ಹೆಕ್ಟೇರ್‌ನಲ್ಲಿ ವರ್ಷಕ್ಕೆ ಸುಮಾರು 14.36 ಲಕ್ಷ ಟನ್ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ 11,333 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಲಸು ಮರಗಳಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.