ಸೋಮವಾರ, ಮಾರ್ಚ್ 1, 2021
29 °C
ಗ್ರಾಮ ಸಂಚಾರ

ಹಳಗೋಟೆ: ಸಮಸ್ಯೆಗಳ ಕೋಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಗೋಟೆ: ಸಮಸ್ಯೆಗಳ ಕೋಟೆ

ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆಯು ಕುಡಿಯುವ ನೀರು, ರಸ್ತೆ ಮತ್ತು ಸಾರಿಗೆ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿವೆ. ಬಹುಮುಖ್ಯ ಸಮಸ್ಯೆ ಎಂದರೆ, ಕುಡಿಯುವ ನೀರಿನ ಸಮಸ್ಯೆ . ಗ್ರಾಮವನ್ನು ಪ್ರತಿನಿಧಿಸಿರುವ ಹೆಬ್ಬಾಲೆ ಪಂಚಾಯಿತಿ ಸದಸ್ಯರೊಬ್ಬರು ಊರಿನಲ್ಲಿ ವಾಸವಿದ್ದರೂ ಅವರ ಬೀದಿಯಲ್ಲೇ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ. ಇದು ನಮ್ಮ ವಿಪರ್ಯಾಸ ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮದ ಜಯಂತಿ ಬೀದಿಯಲ್ಲಿರುವ ಕಿರುನೀರು ಸರಬರಾಜು ತೊಟ್ಟಿಗಳಿಗೆ ಪೂರೈಕೆಯಾಗುತ್ತಿದ್ದ  ನೀರಿನಲ್ಲಿ ತೊಂದರೆಯಾಗಿ ಬವಣೆ ಪಡುವಂತಾಗಿದೆ. ಎರಡು ತೊಟ್ಟಿಗಳ ವಾಲ್‌ಗಳು ಮುರಿದು ಹೋಗಿ ಒಂದು ತಿಂಗಳು ಕಳೆದರೂ ಅದನ್ನು ಸರಿಪಡಿಸಿಲ್ಲ. ಕುಡಿಯುವ ನೀರನ್ನು ಪೂರೈಸದಿರುವ ಪಂಚಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಊರಿನ ಯಾವುದೇ ಚರಂಡಿಗಳು ಸ್ವಚ್ಛತೆ ಕಂಡಿಲ್ಲ. ಎಷ್ಟೋ ಬೀದಿಗಳಲ್ಲಿ ಚರಂಡಿಯಿಲ್ಲದೆ ಮಳೆಗಾಲದಲ್ಲಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಇದರಿಂದಾಗಿ ಇಲ್ಲಿನ ವಾಸಿಗಳು ನೆಮ್ಮದಿ ಕಳೆದುಕೊಂಡಿದ್ದಾರೆ. ಊರಿನ ಮುಖ್ಯರಸ್ತೆ ಬದಿಯಲ್ಲೇ ಬೇಲಿ ಬೃಹದಾಕಾರವಾಗಿ ಬೆಳೆದಿದೆ.ಸೇತುವೆ ಶಿಥಿಲ: ಇನ್ನು ಹೆಬ್ಬಾಲೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹಳೇಗೋಟೆಗೆ ತಲುಪಬೇಕಾದರೆ ಹಾರಂಗಿ ಎಡದಂಡೆಯ ಮುಖ್ಯ ಕಾಲುವೆಯನ್ನು ದಾಟಬೇಕು. ಸುಮಾರು 35 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಈ ಸೇತುವೆ ಬಹುತೇಕ ಶಿಥಿಲಗೊಂಡಿದ್ದು ಆಗಲೋ, ಈಗಲೋ ಮುರಿದು ಬೀಳುವ ಸ್ಥಿತಿ ತಲುಪಿದೆ.ಸೇತುವೆಯ ಮೇಲೆ ತಡೆಗೋಡೆಗಾಗಿ ಹಾಕಿದ್ದ ಕಂಬಿಗಳು ಒಂದು ಮೂಲೆಯಲ್ಲಿ ಮುರಿದು ಬಿದ್ದು ಅಪಾಯದ ಕರೆಗಂಟೆಯನ್ನು ಬಾರಿಸುತ್ತಿವೆ.ಆದರೂ, ಹಳಗೋಟೆ ಸೇರಿದಂತೆ ಆರನೇ ಹೊಸಕೋಟೆ, ಚಿನ್ನನಹಳ್ಳಿ, ದೊಡ್ಡಳುವಾರ, ಚಿಕ್ಕಳುವಾರ ಗ್ರಾಮಗಳ ನೂರಾರು ಜನರು ಇದೇ ಸೇತುವೆ ಮೇಲೆ ಇಂದಿಗೂ ಸಂಚರಿಸುತ್ತಿದ್ದಾರೆ.ಹೋಬಳಿ ಕೇಂದ್ರದಿಂದ 15 ಕಿಲೋಮೀಟರ್ ದೂರದಲ್ಲಿರುವ ಹಳಗೋಟೆಗೆ ಇಂದಿಗೂ ಬಸ್‌ ಸೌಲಭ್ಯವಿಲ್ಲ.  ಹಳಗೋಟೆಯ 150 ಕುಟುಂಬ ಗಳಿಂದ ಹೆಬ್ಬಾಲೆ, ಕೂಡಿಗೆ ಮತ್ತು ಕುಶಾಲನಗರದ ಶಾಲಾ ಕಾಲೇಜುಗಳಿಗೆ ತೆರಳುವ ಹತ್ತಾರು ವಿದ್ಯಾರ್ಥಿಗಳು ಆಟೊಗಳನ್ನೇ ಆಶ್ರಯಿಸಬೇಕಾಗಿದೆ.ಇಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಇಲ್ಲ. ಈ ಭಾಗದ ಮೂರು ನಾಲ್ಕು ಗ್ರಾಮಗಳ ಜನರೆಲ್ಲರೂ ಹೆಬ್ಬಾಲೆ ಆಸ್ಪತ್ರೆಗೆ ತೆರಳಬೇಕು. ಈ ಎಲ್ಲಾ ಸಂದರ್ಭಗಳಲ್ಲಿ ಆಟೊಗಳಿಗೆ ನೂರಾರು ರೂಪಾಯಿಗಳನ್ನು ಕೊಟ್ಟು ಆಸ್ಪತ್ರೆಗೆ ತೆರಳಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.