ಹಳದಿಜ್ವರ ಲಸಿಕೆ ಕೊರತೆ; ಟೆನಿಸ್ ಪ್ರತಿಭೆಗೆ ಚಿಂತೆ!

7

ಹಳದಿಜ್ವರ ಲಸಿಕೆ ಕೊರತೆ; ಟೆನಿಸ್ ಪ್ರತಿಭೆಗೆ ಚಿಂತೆ!

Published:
Updated:
ಹಳದಿಜ್ವರ ಲಸಿಕೆ ಕೊರತೆ; ಟೆನಿಸ್ ಪ್ರತಿಭೆಗೆ ಚಿಂತೆ!

ಮೈಸೂರು: ದೇಶದಲ್ಲಿ `ಹಳದಿ ಜ್ವರ ನಿರೋಧಕ ಲಸಿಕೆ'ಗಳ ಕೊರತೆಯಿಂದಾಗಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಮೈಸೂರಿನ ಧ್ರುತಿ ವೇಣುಗೋಪಾಲ್ ಜಿಂಬಾಬ್ವೆಯಲ್ಲಿ ನಡೆಯಲಿರುವ ಟೂರ್ನಿಗೆ ಹೋಗಲು ಪರದಾಡುವಂತಾಗಿದೆ.ಜುಲೈ 29ರಂದು ಜಿಂಬಾಬ್ವೆಯ ಹರಾರೆಯಲ್ಲಿ ನಡೆಯಲಿರುವ ಐಟಿಎಫ್ ಟೂರ್ನಿಯಲ್ಲಿ ಧ್ರುತಿ ಭಾರತ ತಂಡದ ಪರ ಆಡಬೇಕಿದೆ. ಆಫ್ರಿಕಾ ಖಂಡದ ಯಾವುದೇ ರಾಷ್ಟ್ರಗಳಿಗೆ ತೆರಳಲು ಹಳದಿಜ್ವರ ನಿರೋಧಕ ಲಸಿಕೆ ಪಡೆಯುವುದನ್ನು ಭಾರತ ಸರ್ಕಾರ ಕಡ್ಡಾಯ ಮಾಡಿದೆ. ಆದರೆ ಈ ಲಸಿಕೆಯು ಸದ್ಯಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾತ್ರ ಲಭ್ಯ. ಮುಂಬೈನಲ್ಲಿ ಪ್ರತಿದಿನ 75 ಜನರಿಗೆ ಮಾತ್ರ ಈ ಲಸಿಕೆಗಳನ್ನು ನೀಡಲಾಗುತ್ತಿದೆ.ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹೊರಡುವ ವಿಮಾನದಲ್ಲಿ ಹರಾರೆಗೆ ತೆರಳಲಿರುವ ಅವರು ಗುರುವಾರ ಬೆಳಗಿನ ಜಾವವೇ ಹೋಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸರದಿ ಸಾಲಿನಲ್ಲಿ ನಿಂತು ಲಸಿಕೆಯ ಟೋಕನ್ ಪಡೆಯಬೇಕಾಗಿದೆ. ಒಂದು ವೇಳೆ ಲಸಿಕೆ ಸಿಗದೇ ಹೋದರೆ, ಐಟಿಎಫ್ ಜೂನಿಯರ್ ರ‍್ಯಾಂಕಿಂಗ್‌ನಲ್ಲಿ 304ನೇ ಸ್ಥಾನದಲ್ಲಿರುವ ಧ್ರುತಿಗೆ ಟೂರ್ನಿಯಲ್ಲಿ ಭಾಗವಹಿಸುವುದು ದುಸ್ತರವಾಗಲಿದೆ.`ನಾನು ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು, ನನ್ನ ತಾಯಿ ವನಮಾಲಾ, ತರಬೇತುದಾರ ಸಂದೀಪ್ ಕೀರ್ತನೆ ಮತ್ತು ಇನ್ನೊಬ್ಬ ಆಟಗಾರ್ತಿ ಪುಣೆಯವರೇ ಆದ ಸೃಷ್ಟಿ ದಾಸ್ ಹರಾರೆಗೆ ಹೋಗುತ್ತಿದ್ದೇವೆ. ನಮ್ಮ ನಾಲ್ವರಿಗೂ ತಲಾ ಒಂದು ಲಸಿಕೆ ಬೇಕು. ಅದಕ್ಕಾಗಿ ಬೆಳಗಿನ ಜಾವವೇ ಹೋಗಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ನಮಗೆಲ್ಲರಿಗೂ ಲಸಿಕೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ' ಎಂದು ಧ್ರುತಿ `ಪ್ರಜಾವಾಣಿ'ಗೆ ತಮ್ಮ ದುಗುಡ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಲೆಕ್ಕಪರಿಶೋಧಕರಾಗಿರುವ ವೇಣುಗೋಪಾಲ್ ಅವರ ಪುತ್ರಿ ಧ್ರುತಿ ವಿದ್ಯಾವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು (ವಾಣಿಜ್ಯ) ವಿದ್ಯಾರ್ಥಿನಿ. ಬಾಲ್ಯದಲ್ಲಿಯೇ ಮೈಸೂರು ಟೆನಿಸ್ ಕ್ಲಬ್‌ನಲ್ಲಿ  ತರಬೇತಿ ಪಡೆದ ಅವರು, ಅಪೋಲೊ ಟೈರ್ಸ್‌ ಪ್ರಾಯೋಜಕತ್ವದಲ್ಲಿ ಬೆಂಗಳೂರಿನಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದರು. ಕೆಲವು ತಿಂಗಳಿಂದ ಪುಣೆಯಲ್ಲಿ ಡೆವಿಸ್ ಕಪ್ ಆಟಗಾರ ಸಂದೀಪ್ ಕೀರ್ತನೆಯವರ ಬಳಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ಯುರೋಪ್, ಅಮೆರಿಕ, ಇಂಡೋನೆಷ್ಯಾ. ಮಲೇಷ್ಯಾಗಳಲ್ಲಿ ನಡೆದ ಕೆಲವು ಟೂರ್ನಿಗಳಲ್ಲಿ ಆಡಿದ್ದಾರೆ.`ಹರಾರೆಯಲ್ಲಿ ಸೋಮವಾರದಿಂದ ಆರಂಭವಾಗುವ ಐಟಿಎಫ್ ಟೂರ್ನಿಯ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಧ್ರುತಿ ಭಾಗವಹಿಸುತ್ತಿದ್ದು, ನಾನು ಮೈಸೂರಿನಿಂದ ಬುಧವಾರವೇ ಹೊರಟು ಗುರುವಾರ ಬೆಳಿಗ್ಗೆ ತಲುಪಲಿದ್ದೇನೆ. ಅವಳು ಪುಣೆಯಿಂದ ಬಂದು ಸಾಲಿನಲ್ಲಿ ನಿಲ್ಲಲಿದ್ದಾಳೆ. ಹಳದಿಜ್ವರ ರೋಗನಿರೋಧಕ ಲಸಿಕೆ ಕಡ್ಡಾಯ ಮಾಡಲಾಗಿದ್ದರೂ ದೇಶದಲ್ಲಿ ಎಲ್ಲಿಯೂ ಸಿಗದೇ ಇರುವುದು ವಿಚಿತ್ರ. ಮುಂಬೈನಲ್ಲಿ ಸಿಗುತ್ತದೆ ಎನ್ನುವುದೊಂದೇ ನಮ್ಮ ಭರವಸೆ. ಅದೃಷ್ಟ ಇದ್ದರೆ ನಮಗೂ ಸಿಗುತ್ತದೆ. ಲಸಿಕೆಯನ್ನು ಮುಂಗಡ ಕಾಯ್ದಿರಿಸುವ ಯಾವುದೇ ವ್ಯವಸ್ಥೆಯೂ ಇಲ್ಲ' ಎಂದು ಧ್ರುತಿಯ ತಾಯಿ ವನಮಾಲಾ ಹೇಳಿದರು.`ಚೆನ್ನೈ, ಹೈದರಾಬಾದ್, ಕೊಲ್ಕತ್ತ, ದೆಹಲಿ ಸೇರಿದಂತೆ ಎಲ್ಲ ನಗರಗಳಲ್ಲಿಯೂ ಲಸಿಕೆಗಾಗಿ ಪ್ರಯತ್ನಿಸಿದೆ. ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯನ್ನೂ ಸಂಪರ್ಕಿಸಿದೆ. ಶನಿವಾರ (ಜು. 27) ಫ್ರಾನ್ಸ್‌ನಿಂದ ಭಾರತಕ್ಕೆ ಲಸಿಕೆಗಳ ದಾಸ್ತಾನು ಬರುತ್ತಿದೆ. ಬಂದ ತಕ್ಷಣ ಕೊಡುವುದಾಗಿ ಭರವಸೆ ನೀಡಿದರು. ಆದರೆ ಧ್ರುತಿ ಶುಕ್ರವಾರ ಬೆಳಗಿನ ಜಾವ ಹೊರಟು ಶನಿವಾರ ಅಲ್ಲಿರಬೇಕು. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಲಸಿಕೆಗಾಗಿ ಬೆಳಿಗ್ಗೆ 5 ಗಂಟೆಗೆ ಜನರು ಸಾಲುಗಟ್ಟಿರುತ್ತಾರೆ. ಧ್ರುತಿ ಮತ್ತು ಸಂಗಡಿಗರಿಗೆ ಈ ಲಸಿಕೆ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಶುರುವಾಗಿದೆ' ಎಂದು  ವೇಣುಗೋಪಾಲ್ ತಮ್ಮ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry