ರಾಮನಗರ: ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೆಚ್ಚು ಕಡಿಮೆ ಆದರಂತೂ ಪ್ರಾಣಕ್ಕೇ ಕುತ್ತು. ನಾಗರಿಕ ಪ್ರಜ್ಞೆ ಮೆರೆಯಬೇಕಾದ ಇಲ್ಲಿನ ಜನರಿಗಂತೂ ಆತುರವೋ ಆತುರ. ಒಟ್ಟಿನಲ್ಲಿ ಪ್ರಾಣಕ್ಕೆ ಸಂಚಕಾರ ಬರಬಹುದು ಎಂದು ಗೊತ್ತಿದ್ದರೂ ಅದನ್ನು ಲೆಕ್ಕಿಸದ ಜನರು...

- ಇದು ಇಲ್ಲಿ ಕಂಡು ಬರುವ ನಿತ್ಯ ದರ್ಶನ. ಮುಂದೆ ಅಪಾಯ ಇದೆ ಎಂದು ಗೊತ್ತಿದ್ದರೂ ಕೆಲವರು ಧೈರ್ಯ ಮಾಡಿ ಮುನ್ನುಗ್ಗುತ್ತಲೇ ಇರುತ್ತಾರೆ. ಅಂತಹವರನ್ನು ತಡೆಯುವ ಸಾಹಸಕ್ಕೆ ಅಲ್ಲಿರುವ ನಾಗರಿಕರಾಗಲಿ ಅಥವಾ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಯಾಗಲಿ ಮುಂದಾಗುವುದೇ ಇಲ್ಲ.

ಬಿಡದಿ ಹೋಬಳಿಯ ಕೆಂಪನಹಳ್ಳಿ ರೈಲ್ವೆ ಗೇಟ್ ಬಳಿ ಇಂತಹ ದೃಶ್ಯ ಪ್ರತಿ 30 ನಿಮಿಷಕ್ಕೊಮ್ಮೆ ಕಂಡು ಬರುತ್ತದೆ. ರೈಲ್ವೆ ಗೇಟ್ ಮುಚ್ಚಿದ್ದರೂ ಲೆಕ್ಕಿಸದೆ ಜನರು ಗೇಟ್ ನುಸುಳಿಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರು ಕೂಡ ಇಲ್ಲಿನ ಕಳ್ಳ ಮಾರ್ಗದ ಮೂಲಕ ರೈಲ್ವೆ ಹಳಿ ದಾಟಿ ಸಾಹಸ ಮೆರೆಯುತ್ತಿದ್ದಾರೆ. ರೈಲ್ವೆ ಗೇಟ್ ಬಳಿ ಐದು ನಿಮಿಷ ಕಾಯಲು ಕೂಡ ಕೆಲವರಿಗೆ ಸಮಯ ಇಲ್ಲವಾಗಿದೆ.

ಇಲ್ಲಿನ ರೈಲ್ವೆ ಗೇಟ್ ಪಕ್ಕದಲ್ಲಿ (ಎರಡೂ ಕಡೆ) ಪಾದಚಾರಿಗಳಿಗೆಂದು ನಿರ್ಮಿಸಲಾಗಿದ್ದ `ತಿರುಗು ಗೇಟ್' ಅನ್ನು ದುಷ್ಕರ್ಮಿಗಳು ಮುರಿದು ಹಾಕಿದ್ದಲ್ಲದೆ, ಅದನ್ನು ಕಳ್ಳತನ ಕೂಡ ಮಾಡಿದ್ದಾರೆ. ಇದರ ಪರಿಣಾಮ ರೈಲ್ವೆ ಗೇಟ್ ಹಾಕಿದ್ದರೂ ದ್ವಿಚಕ್ರ ವಾಹನ ಸವಾರರು ಯಾವುದೇ ಅಡೆತಡೆ ಇಲ್ಲದೆ ಇತ್ತಿಂದತ್ತ, ಅತ್ತಿಂದಿತ್ತ ಚಲಿಸುತ್ತಿದ್ದಾರೆ.

ಅಪಾಯದ ಗಂಟೆ- ಎಚ್ಚರ?:
ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿದೆ. ನಿತ್ಯ ಎರಡೂ ಬದಿಯಲ್ಲಿ ಸುಮಾರು 40 ರೈಲುಗಳು ಸಂಚರಿಸುತ್ತವೆ. ಪ್ರತಿ 40ರಿಂದ 45 ನಿಮಿಷಕ್ಕೊಂದು ರೈಲು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಅಲ್ಲದೆ ಬೆಂಗಳೂರಿನಿಂದ ಚನ್ನಪಟ್ಟಣದ ಶೆಟ್ಟಿಹಳ್ಳಿ ತನಕ ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾರ್ಯ ಮುಗಿದಿರುವ ಕಾರಣ ಈ ಮಾರ್ಗದಲ್ಲಿ ಎರಡೂ ಹಳಿಗಳ ಮೇಲೆ ರೈಲು ಸಂಚಾರ ಇರುತ್ತದೆ. ಇದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಡದಿ ಬಳಿಯ ಕೆಂಪನಹಳ್ಳಿ ಬಳಿ ಕೂಡ ದ್ವಿಪಥ ರೈಲು ಹಳಿ ಮಾರ್ಗ ಇದ್ದು, ಎರಡೂ ಬದಿಯಲ್ಲಿ ಏಕ ಕಾಲದಲ್ಲಿ ರೈಲುಗಳ ಸಂಚಾರ ಕೂಡ ನಡೆಯುತ್ತಿರುತ್ತದೆ. ಆದರೆ ಇಲ್ಲಿನ ರೈಲ್ವೆ ಗೇಟ್ ಅಷ್ಟು ಸುರಕ್ಷಿತವಾಗಿಲ್ಲ ಎಂಬುದು ಅದನ್ನು ನೋಡಿದರೆ ಗೊತ್ತಾಗುತ್ತದೆ.

ಕಳ್ಳಕಾಕರ ಅಥವಾ ದುಷ್ಕರ್ಮಿಗಳ ಉಪಟಳದಿಂದಾಗಿ ಈ ಗೇಟ್ನ ಆಜು ಬಾಜಿನ `ತಿರುಗು ಗೇಟ್'ಗಳು ಕಳ್ಳತನವಾಗಿದೆ. ಇದರ ಪರಿಣಾಮ ಇಲ್ಲಿ ಸದಾ ಅಪಾಯದ ಎಚ್ಚರಿಕೆ ಗಂಟೆ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಬಾರಿಸುತ್ತಿದೆ.

`ಕಳೆದ ವರ್ಷ ಕೆಂಗೇರಿ ಮತ್ತು ಹೆಜ್ಜಾಲ ನಡುವಿನ ರೈಲ್ವೆ ಮಾರ್ಗದಲ್ಲಿ ದ್ವಿಪಥ ಮಾರ್ಗದ ಹಳಿ ಪರಿಶೀಲನೆಯಲ್ಲಿ ತೊಡಗಿದ್ದ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿಗೆ ಸಿಲುಕಿ ಅಸುನೀಗಿದ ಘಟನೆ ಇನ್ನು ಕಣ್ಣ ಮುಂದೆಯೇ ಇದೆ. ಎರಡು ಪಥದ ಹಳಿಗಳು ಇರುವ ಕಾರಣ ಯಾವ ಕಡೆಯಿಂದ ರೈಲು ಬರುತ್ತದೆ ಎಂಬುದನ್ನು ಊಹಿಸುವಲ್ಲಿ ರೈಲ್ವೆ ಸಿಬ್ಬಂದಿ ವಿಫಲವಾದ್ದರಿಂದ ಈ ದುರ್ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿಯೇ ರೈಲು ಯಾವ ಹಳಿಯಲ್ಲಿ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಆಗದ ಮೇಲೆ ಇನ್ನು ಸಾಮಾನ್ಯ ಜನರ ಕಥೆ ಏನು. ಕೆಂಪನಹಳ್ಳಿ ಬಳಿ ರೈಲ್ವೆ ಗೇಟ್ ಮುಚ್ಚಿದ್ದರೂ ಕೂಡ ಅಜಾಗರೂಕತೆಯಿಂದ ರೈಲು ಹಳಿ ದಾಟುವ ದುಃಸ್ಸಾಹಸ ಮಾಡುವ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಪಾಠ ಹೇಳುವವರು ಯಾರು' ಎಂದು ರೈಲ್ವೆ ಗೇಟ್ ಬಳಿ ಇದ್ದ ರೈಲ್ವೆ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.

`ಗೇಟ್ ಮುಚ್ಚುವುದಷ್ಟೇ ನಮ್ಮ ಕೆಲಸ': `ನಮಗೆ ಬಿಡದಿ ಅಥವಾ ರಾಮನಗರ ರೈಲು ನಿಲ್ದಾಣದಿಂದ ರೈಲುಗಳು ನಿರ್ಗಮಿಸಿದ ಸಂಕೇತ ದೊರೆತ ಕೂಡಲೇ ರೈಲಿನ ಗೇಟ್ಗಳನ್ನು ಮುಚ್ಚಿಬಿಡುತ್ತೇವೆ. ಕೆಲ ಪಾದಚಾರಿಗಳು ಇಲ್ಲಿನ ಗೇಟ್ಗಳನ್ನು ನುಸುಳಿಕೊಂಡು ಹೋಗುತ್ತಾರೆ. ದ್ವಿಚಕ್ರ ವಾಹನ ಸವಾರರು ಇಲ್ಲಿನ ಕಳ್ಳ ಮಾರ್ಗದ ಮೂಲಕ ರೈಲ್ವೆ ಹಳಿ ದಾಟುತ್ತಿದ್ದಾರೆ. ಅವರಿಗೆ ಹೇಳಲು ಹೋದರೆ ನಮ್ಮನ್ನೇ ಗದರಿಸುತ್ತಾರೆ. ತುರ್ತು ಕೆಲಸ ಇದೆ, ನಿಮಗೇನು ಗೊತ್ತು ಎಂದು ಕೆಂಡಕಾರುತ್ತಾರೆ. ಗೇಟ್ ಹಾಕುವುದಷ್ಟೆ ನಮ್ಮ ಕರ್ತವ್ಯ. ಹಾಕಿದ ಮೇಲೂ ಅಲ್ಲಿ ನುಸುಳಿಕೊಂಡು ಬಂದು ಅಪಘಾತ ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಾಗುವುದಿಲ್ಲ. ನಾಗರಿಕರ ಅಜಾಗರೂಕತೆ ಇದಕ್ಕೆ ಜವಾಬ್ದಾರಿ ಆಗುತ್ತದೆ' ಎಂದು ಆ ಸಿಬ್ಬಂದಿ ಉತ್ತರಿಸುತ್ತಾರೆ.

`ದ್ವಿಪಥ ಹಳಿ ಮಾರ್ಗ ಇರುವುದರಿಂದ ರೈಲುಗಳ ಸಂಚಾರ ಹೆಚ್ಚಿದೆ. ಒಂದು ಕಡೆಯಿಂದ ರೈಲು ಸಾಗಿದ ನಾಲ್ಕು ಐದು ನಿಮಿಷದಲ್ಲಿ ಇನ್ನೊಂದು ಕಡೆಯಿಂದ ರೈಲು ಬರುವ ಸಾಧ್ಯತೆ ಇರುತ್ತದೆ. ಆಗ ಗೇಟನ್ನು ತೆಗೆಯುವ ಗೋಜಿಗೆ ಹೋಗುವುದಿಲ್ಲ. ಹೀಗೆ ಎರಡೂ ರೈಲುಗಳು ಸಾಗುವ ತನಕ ಗೇಟ್ ಬಳಿ ನಿಂತು ಕಾಯುವ ಜನರ ಸಂಖ್ಯೆ ಕಡಿಮೆ. ನುಸುಳಿಕೊಂಡು ಹೋಗುವವರೇ ಹೆಚ್ಚು. ಕಾರು, ಲಾರಿ, ಟ್ರಾಕ್ಟರ್ಗಳು ಅನಿವಾರ್ಯವಾಗಿ ಕಾಯುತ್ತಾರಷ್ಟೆ' ಎಂದು ಅವರು ವಿವರಿಸುತ್ತಾರೆ.

`ಕೆಂಪನಹಳ್ಳಿ ರೈಲ್ವೆ ಗೇಟ್ ಬಳಿಯ ಎರಡೂ ಕಡೆ ಪಾದಚಾರಿಗಳಿಗಾಗಿ ನಿರ್ಮಿಸಿದ್ದ `ತಿರುಗು ಗೇಟ್'ಗಳು ಕಳುವಾಗಿವೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ' ಎಂದು ಅವರು ಹೇಳುತ್ತಾರೆ.

ಕೆಳಸೇತುವೆ ಬರಬೇಕಿದೆ: `ದ್ವಿಪಥ ರೈಲು ಹಳಿ ಇರುವ ಕಡೆಗಳಲ್ಲಿ ರೈಲ್ವೆ ಗೇಟ್ಗಳು ಇರಬಾರದು. ಅಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ಇರಬೇಕು ಎಂಬ ನಿಯಮ ಇದೆ. ಅದರಂತೆ ಬೆಂಗಳೂರು- ಮೈಸೂರು ರೈಲ್ವೆ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್ಗಳ ಬಳಿ ಕೆಳಸೇತುವೆ ನಿರ್ಮಿಸುವ ಪ್ರಸ್ತಾವ ಇದೆ. ಕೆಂಪನಹಳ್ಳಿ ರೈಲ್ವೆ ಗೇಟ್ ಬಳಿಯೂ ಕೆಳಸೇತುವೆ ನಿರ್ಮಿಸುವ ಉದ್ದೇಶ ಇದೆ. ಆದರೆ ಯಾವಾಗ ಇದು ಕಾರ್ಯಗತವಾಗುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡುತ್ತದೆ. ಅಲ್ಲಿಯವರೆಗೂ ಯಾವುದೇ ದುರಂತ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಷ್ಟೇ ನಮ್ಮ ಕೆಲಸ. ನಾಗರಿಕರು ತಮ್ಮ ನಾಗರಿಕ ಪ್ರಜ್ಞೆ ಮೆರೆದು ಕೆಲ ನಿಮಿಷ ಕಾದರೆ ತಮ್ಮ ಜೀವವನ್ನು ಕಾಪಾಡಿಕೊಳ್ಳಬಹುದು' ಎಂದು ಅವರು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.