ಸೋಮವಾರ, ಮೇ 17, 2021
25 °C
ವಸತಿ ಯೋಜನೆಯಲ್ಲಿ ಅಕ್ರಮ: ಉಪ ಲೋಕಾಯುಕ್ತರ ಅಸಮಾಧಾನ

ಹಳ್ಳಿಯಲ್ಲೇ ನೆಲೆಸಲು ವೈದ್ಯರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ವೈದ್ಯರು ಅದೇ ಹಳ್ಳಿಯಲ್ಲಿ ನೆಲೆಸದಿದ್ದರೆ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು' ಎಂದು ಉಪ ಲೋಕಾಯುಕ್ತ ಸುಭಾಷ ಆಡಿ ಸೂಚಿಸಿದರು.ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೆರೆಹಾವಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸದೇ ಹತ್ತಿರದ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಗರ ಪ್ರದೇಶದಿಂದ ವೈದ್ಯರು ಹಳ್ಳಿಗೆ ಬರುವವರೆಗೆ ಮಧ್ಯಾಹ್ನ 11ರಿಂದ 12 ಗಂಟೆಯಾಗುತ್ತದೆ.  ರಾತ್ರಿ ವೇಳೆ ಯಾವುದೇ ತುರ್ತು ಚಿಕಿತ್ಸೆ ನೀಡಬೇಕಾದರೆ, ವೈದ್ಯರು ಇಲ್ಲದಂತಾಗುತ್ತದೆ. ಹೀಗಾಗಿ ವೈದ್ಯರು ಹಳ್ಳಿಗಳಲ್ಲೇ ನೆಲೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು' ಎಂದು ಅವರು ತಿಳಿಸಿದರು.`ಹಲವು ಗ್ರಾಮಗಳಲ್ಲಿ ಒಳಚರಂಡಿಯ ಕಲುಷಿತ ನೀರು ಕುಡಿಯುವ ನೀರಿನ ಮೂಲವನ್ನು ಸೇರುತ್ತಿವೆ. ಇವುಗಳನ್ನು ಗ್ರಾಮದಲ್ಲಿರುವ ಸಾಮಾನ್ಯ ಶುದ್ಧೀಕರಣ ಉಪಕರಣಗಳಿಂದ ಶುಚಿಗೊಳಿಸಲು ಸಾಧ್ಯವಿಲ್ಲ. ಅಂಥ ಪ್ರದೇಶಗಳನ್ನು ಗುರುತಿಸಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಅವರು ಸೂಚಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಿಲೀಪಕುಮಾರ ಮುನ್ನೋಳಿ, `ಡೆಂಗೆ, ಚಿಕೂನ್‌ಗುನ್ಯಾ ರೋಗಗಳು ಚಿಕ್ಕೋಡಿ, ಅಥಣಿ ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಒಟ್ಟು 39 ಗ್ರಾಮಗಳಲ್ಲಿ ಇದು ಕಾಣಿಸಿಕೊಂಡಿದೆ. ಈಗಾಗಲೇ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ' ಎಂದು ಸಭೆಗೆ ಮಾಹಿತಿ ನೀಡಿದರು.ಬಡ ಜನರಿಗಾಗಿ ಸೂರು ಕಲ್ಪಿಸಲು ಸರ್ಕಾರ ಅನೇಕ ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಬೇಕು ಎಂದು ಉಪಲೋಕಾಯುಕ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.`ಒಂದೇ ಕುಟುಂಬದವರಿಗೆ ಒಂದಕ್ಕಿಂತ ಹೆಚ್ಚು ಮನೆಗಳನ್ನು ಮಂಜೂರು ಮಾಡಿರುವ, ಮಂಜೂರಾದ ಮನೆಗಳಲ್ಲಿ ಫಲಾನುಭವಿ ವಾಸವಾಗದೇ, ಬೇರೆ ಕುಟುಂಬದವರು ವಾಸ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇವುಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸಮಗ್ರ ವರದಿಯನ್ನು ಕಳುಹಿಸಿಕೊಡಬೇಕು.ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಮ್ಮ ಹಂತದಲ್ಲಿ ಕ್ರಮಕೈಗೊಳ್ಳಲು ಸಾಧ್ಯವಾಗದಿದ್ದರೆ,  ಲೋಕಾಯುಕ್ತರಿಗೆ ತಿಳಿಸಿ. ನಾವು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ಅವರು ಹೇಳಿದರು.`ಅತಿವೃಷ್ಟಿಯಾಗಿ ನೆರೆಹಾವಳಿ ಬಂದಾಗ ಜನರಿಗೆ ಯಾವುದೇ ರೀತಿಯ ತೊಂದರೆಯಾಗದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತೊಂದರೆಗೆ ಒಳಗಾಗುವ ಗ್ರಾಮಗಳನ್ನು ಗುರುತಿಸಿ ನೆರೆಹಾವಳಿ ಬಂದಾಗ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಸ್ಥಳ ನಿಗದಿಪಡಿಸಬೇಕು.ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳ ತಂಡವನ್ನು ರಚಿಸಬೇಕು. ಜನರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ವೈದ್ಯಕೀಯ ತಂಡ ರಚಿಸುವುದರ ಜೊತೆಗೆ ಅವಶ್ಯಕ ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ತೊಂದರೆಗೆ ಒಳಗಾಗುವ ಜನರನ್ನು ಸಾಗಿಸಲು ದೋಣಿಗಳನ್ನು ಪ್ರತಿಯೊಂದು ಗ್ರಾಮದಲ್ಲಿ ಇಡುವುದರ ಜೊತೆಗೆ, ಈಜುಗಾರರನ್ನು ಗುರುತಿಸಬೇಕು' ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣ ಕುಮಾರ, `ಮಳೆಗಾಲ ಆರಂಭವಾದ ಬಳಿಕ ಇದುವರೆಗೆ 10 ಜನರು ಮೃತಪಟ್ಟಿದ್ದು, 7 ಜನರ ವಾರಸುದಾರರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದವರ ಕುಟುಂಬದವರಿಗೂ ಪರಿಹಾರ ನೀಡಲಾಗುವುದು' ಎಂದು ತಿಳಿಸಿದರು.`ಕಳೆದ ವರ್ಷದ ಬೆಳೆ ಹಾನಿಗೆ ಪರಿಹಾರ ನೀಡಲು ರೂ 29 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿತ್ತು. ಈಗಾಗಲೇ ರೂ 20 ಕೋಟಿ ಪರಿಹಾರ ನೀಡಲಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಉಳಿದ ಪರಿಹಾರ ವಿತರಣೆ ಕಾರ್ಯ ವಿಳಂಬವಾಗಿದೆ. ಶೀಘ್ರದಲ್ಲೇ ಬಾಕಿ ಉಳಿದಿರುವ ರೂ 9 ಕೋಟಿ ಪರಿಹಾರ ವಿತರಿಸಲಾಗುವುದು' ಎಂದು ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ, `ನೆರೆ ಹಾವಳಿ ಬಂದರೆ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳ ತಂಡ ಸಜ್ಜಾಗಿದೆ. ಅಗತ್ಯ ಪ್ರಮಾಣದಲ್ಲಿ ಬೋಟ್‌ಗಳಿವೆ. ರೂ 40 ಲಕ್ಷ ವೆಚ್ಚದಲ್ಲಿ ಪರಿಹಾರ ಕಾರ್ಯದ ಉಪಕರಣಗಳನ್ನು ಖರೀದಿಸಲಾಗಿದೆ. ಅರಣ್ಯ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.`ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸುಗಮವಾಗಿ ಬೀಜ ಹಾಗೂ ಗೊಬ್ಬರ ಸಿಗುವ ಹಾಗೆ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸುವುದರ ಜೊತೆಗೆ ನಕಲಿ ಬೀಜ ಹಾಗೂ ಗೊಬ್ಬರ ವಿತರಣೆಯಾಗದ ಹಾಗೆ ನೋಡಿಕೊಳ್ಳಬೇಕು' ಎಂದು ಸೂಚಿಸಿದರು.ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಇಲ್ಲದಿದ್ದರೆ, ಕಠಿಣ ಕ್ರಮವನ್ನು ಎದುರಿಸಲು ಸಿದ್ಧರಾಗಿ' ಎಂದು ಅವರು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೋಳನ, ಅವರು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.