ಭಾನುವಾರ, ಜನವರಿ 26, 2020
29 °C

ಹಳ್ಳಿ ಅಂಗಳದಿಂದ ಬಜಾರ್‌ವರೆಗೂ

ಸುಮಾ Updated:

ಅಕ್ಷರ ಗಾತ್ರ : | |

ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹೊಸತನಗಳು ಕಣ್ತೆರೆಯುತ್ತಿರುವ ಇಂದಿನ ದಿನಗಳಲ್ಲಿ ರೈತರು ಕೇವಲ ಕೃಷಿಕರಾಗಿದ್ದರೆ ಸಾಲದು, ಕೃಷಿ ಉದ್ಯಮಿಗಳೂ ಆದರೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಇದೇ ಉದ್ದೇಶದೊಂದಿಗೆ ನೂತನ ಪ್ರಯೋಗಕ್ಕೆ ಅಣಿಯಾಗಿದ್ದು ತುಮಕೂರು ಜಿಲ್ಲೆ.ರೈತರು ಬೆಳೆದ ಬೆಳೆಗಳು ಹಲವು ಹಂತಗಳನ್ನು ಕಂಡು ಆಹಾರ ಉತ್ಪನ್ನವಾಗಿ ಜನರ ಕೈ ಸೇರುವಷ್ಟರಲ್ಲಿ ಸಾಕಷ್ಟು ಸಮಯವಾಗಿರುತ್ತದೆ. ಕೆಲವೊಮ್ಮೆ ರೈತರಿಗೂ ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಕ್ಕಲಿಲ್ಲವೆಂಬ ಕೊರಗು. ಆದರೆ ತಮ್ಮ ಬೆಳೆಗೆ ತಾವೇ ಆಹಾರ ಉತ್ಪನ್ನದ ರೂಪ ನೀಡಿ ಮಾರಾಟ ಮಾಡಿದರೆ ಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.‘ಡ್ರೀಮ್ ಇನ್’ ಸಂಸ್ಥೆ ‘ಮಣಿಪಾಲ್‌ ಫೌಂಡೇಶನ್’ ಜೊತೆ ಕೈ ಜೋಡಿಸಿ ಈ ಯೋಜನೆ ಆರಂಭಿಸಿದ್ದು ತುಮಕೂರು ಜಿಲ್ಲೆಯಲ್ಲಿ. ‘ಕೃಷಿ ಉದ್ಯಮದಲ್ಲಿ ತುಮಕೂರು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಜಿಲ್ಲೆ. ಇದೇ ಕಾರಣಕ್ಕೆ ಈ ಜಿಲ್ಲೆಯನ್ನು ಯೋಜನೆಗೆ ಮೊದಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಕೃಷಿಯೊಂದಿಗೆ ಸಣ್ಣ, ಮಧ್ಯಮ ಕೈಗಾರಿಕೆಗಳೂ ಕಣ್ತೆರೆಯುತ್ತಿವೆ. ಗ್ರಾಮದ ಆರ್ಥಿಕ ಮಟ್ಟವನ್ನು ಏರಿಸುವ ಉದ್ದೇಶ­ದಿಂದ ಈ ಕಾರ್ಯ ಕೈಗೊಳ್ಳಲಾಗಿದೆ’ ಎಂಬುದು ಯೋಜನೆಯ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ ಅವರ ಮಾತು.ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಕಲಬೆರಕೆಯಿಲ್ಲದ, ತಾಜಾ ಮತ್ತು ಶುದ್ಧ ಆಹಾರವನ್ನು ಜನರು ಬಯಸುತ್ತಿದ್ದಾರೆ. ಆದ್ದರಿಂದ ರೈತರೇ ನೇರವಾಗಿ ಆಹಾರ ಉತ್ಪನ್ನಗಳನ್ನು ತಯಾರಿಸಿದರೆ ಈ ಎಲ್ಲಾ ಉದ್ದೇಶಗಳೂ ಪೂರೈಸಿದಂತಾಗುತ್ತದೆ ಎನ್ನುತ್ತಾರೆ ಅವರು.

2012ರಿಂದ ಈ ಯೋಜನೆಯನ್ನು ಕೈಗೊಂಡಿದ್ದು, ತುಮಕೂರಿನ ಗುಬ್ಬಿ ಮತ್ತು ಶಿರಾದ ಒಂಬತ್ತು ರೈತರ ಮೂರು ತಂಡಗಳು ತಾವು ಬೆಳೆದ ರಾಗಿ, ತೆಂಗನ್ನು ಆಹಾರ­ವಾಗಿ ಮಾರ್ಪಾಡುಗೊಳಿಸಿದ್ದಾರೆ. ‘ತುಮಹಾರ’ ಎಂಬ ಬ್ರಾಂಡ್‌ ಹೆಸರಿನಲ್ಲಿ ಸದ್ಯಕ್ಕೆ ಮಾರುಕಟ್ಟೆಗೆ ಇವು ಬಿಡುಗಡೆಯಾಗಿವೆ. ಮೊದಲ ಹಂತವಾಗಿ ರಾಗಿ ಮಾಲ್ಟ್, ತೆಂತಾ, ಬೇಬಿ ಫುಡ್, ರಾಗಿ ಹುರಿಹಿಟ್ಟು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ್ದಾರೆ. ಇವು ಪರಿಶುದ್ಧ ಹಾಗೂ ಕಡಿಮೆ ಬೆಲೆ ಎನ್ನುವುದು ಈ ರೈತರ ಅಂಬೋಣ.ಈ ಯೋಜನೆಗೆಂದು ಬೆಂಗಳೂರಿನ ಜಿಕೆವಿಕೆ ಹಾಗೂ ಆಹಾರ ತಜ್ಞರ ಬಳಿ ರೈತರಿಗೆ ತರಬೇತಿ ನೀಡಲಾಗಿದೆ. ಇದೀಗ ರೈತರು ತಮ್ಮದೇ ಸ್ವಂತ ಸಂಘ ಕಟ್ಟಿಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಒದಗಿಸಿಕೊಳ್ಳುವ ವ್ಯವಸ್ಥೆ­ಯನ್ನೂ ಕೈಗೊಂಡಿದ್ದಾರೆ. ಈ ಮೂಲಕ ಗ್ರಾಮದ ಆರ್ಥಿಕ ಸುಭದ್ರತೆ ಹಾಗೂ ಸಾಮಾಜಿಕ ಮಟ್ಟವನ್ನು ಏರಿಸುವ ಉದ್ದೇಶ ಇದರದ್ದು.ಆಧುನಿಕತೆಯ ಅವಶ್ಯಕತೆ

ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿರುವುದರಿಂದ ಪ್ರತಿಯೊಂದು ಆಹಾರೋತ್ಪನ್ನಗಳನ್ನೂ ಶುದ್ಧತೆ ಮತ್ತು ಆರ್ಥಿಕತೆಯ ದೃಷ್ಟಿಯಿಂದ ನೋಡುತ್ತಾರೆ.ಮಧುಮೇಹ, ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಅಧಿಕ ರಕ್ತದೊತ್ತಡ ಹೀಗೆ ಹಲವು ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಆದ್ದರಿಂದ ಈ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ಹೊರತರಲಾಗಿದೆ. ಸದ್ಯಕ್ಕೆ ತುಮಕೂರು ಜಿಲ್ಲೆಯಲ್ಲಿ ಮಾತ್ರ ಯೋಜನೆ ಕೈಗೊಂಡಿದ್ದು, ಇನ್ನಿತರ ಗ್ರಾಮಗಳಿಗೂ ವಿಸ್ತರಿಸುವ ಆಲೋಚನೆಯಿದೆ. ಬೆಂಗಳೂರಿನ ಹಲವು ಸೂಪರ್ ಮಾರ್ಕೆಟ್‌ಗಳಲ್ಲಿ ಮತ್ತು ತುಮಕೂರಿನ ಹಲವೆಡೆ ಈ ಉತ್ಪನ್ನಗಳು ದೊರೆಯಲಿವೆ.

 

ಪ್ರತಿಕ್ರಿಯಿಸಿ (+)