ಮಂಗಳವಾರ, ಜನವರಿ 21, 2020
29 °C
ತಾಳ್ಯ ಹೋಬಳಿಯ ಗ್ರಾಮಗಳಿಗೆ ಸಚಿವ ಎಚ್‌.ಆಂಜನೇಯ ಭೇಟಿ

ಹಳ್ಳಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು, ವಿದ್ಯುತ್‌, ವಸತಿ, ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಭರವಸೆ ನೀಡಿದರು.ತಾಲ್ಲೂಕಿನ ಟಿ.ಎಮ್ಮಿಗನೂರಿನಲ್ಲಿ ಭಾನುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಮತ್ತಿತರ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೇ ಹೋಗಿ ಕೊಡಬೇಕು. ಗ್ರಾಮ ಲೆಕ್ಕಾಧಿಕಾರಿ ಪ್ರತಿ ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಮದುವೆ ಆಗದ ಹೆಣ್ಣುಮಕ್ಕಳಿಗೆ ಮಾಸಾಶನ ಕೊಡುವ ಮನಸ್ವಿನಿ ಯೋಜನೆ ನಮ್ಮ ಸರ್ಕಾರದ ಕೊಡುಗೆಯಾಗಿದ್ದು, ಸಮರ್ಪಕವಾಗಿ ಜಾರಿಗೊಳಿಸಬೇಕು. ಎಲ್ಲೂ ಮಧ್ಯವರ್ತಿಗಳ ಕಾಟ ಇರಬಾರದು. ಈ ಬಗ್ಗೆ ತಹಶೀಲ್ದಾರ್‌ ಮೇಲ್ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಸಾಕಷ್ಟು ಹಣವಿದ್ದು, ಅಗತ್ಯ ಇರುವ ಕಡೆ ತುರ್ತು ಕಾಮಗಾರಿ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಹೆಚ್ಚಿರುವ ಬಗ್ಗೆ ದೂರು ಬರುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಮದ್ಯ ಸರಬರಾಜು ಮಾಡುವ ಬಾರ್‌ಗಳನ್ನು ಜಪ್ತಿ ಮಾಡಿ ಎಂದು ಪೊಲೀಸರಿಗೆ ಸೂಚಿಸಿದರು.ಗೊಲ್ಲರಹಟ್ಟಿ, ಪರಿಶಿಷ್ಟರ ಕಾಲೊನಿಗಳಿಗೆ ಸಿಸಿ ರಸ್ತೆ, ಕುಡಿಯುವ ನೀರು, ಚರಂಡಿ ಮತ್ತಿತರ ಮೂಲಸೌಕರ್ಯ ಒದಗಿಸಲು ಸಾಕಷ್ಟು ಹಣ ಇದೆ. ನಾನು ಶಾಲೆ ಕಟ್ಟಲು ಹಣ ಕೊಡುತ್ತೇನೆಯೇ ಹೊರತು ದೇವಾಲಯ ಕಟ್ಟಲು ಅನುದಾನ ನೀಡುವುದಿಲ್ಲ. ಹಿಂದಿನ ಅವಧಿಯಲ್ಲಿ ನಡೆದಿರುವ ಅಪೂರ್ಣ ಕಾಮಗಾರಿಗಳನ್ನು ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನ 45 ತಾಂಡಾಗಳು, ಗೊಲ್ಲರಹಟ್ಟಿ, ಭೋವಿಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಸಚಿವರು ಹೇಳಿದರು.ಹಳೇಹಳ್ಳಿ, ಸಿರಾಪನ ಹಳ್ಳಿ, ತಾಳ್ಯ, ಕುಮ್ಮಿನಘಟ್ಟ, ಮಲಸಿಂಗನ ಹಳ್ಳಿ ಮಾರ್ಗದ ಹಳ್ಳಿಗಳಲ್ಲಿ ಸಂಚರಿಸಿ ಜನರ ಅಹವಾಲು ಸ್ವೀಕರಿಸಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಕಾಂಗ್ರೆಸ್‌ ಮುಖಂಡ ಕಿರಣ್‌ ಕುಮಾರ್‌, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)