ಗುರುವಾರ , ಮೇ 6, 2021
32 °C

ಹಳ್ಳಿ ಹೈದರ ಸಾಹಸ, ಸಂಭ್ರಮ ಇತ್ಯಾದಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕ್ರೀಡಾಪಟುಗಳು ತಮ್ಮ ಅಭಿಮಾನಿಗಳೊಂದಿಗೆ ಪಟ್ಟಣದ ಮುನೇಶ್ವರ ಕಾವಲ್ ಮೈದಾನಕ್ಕೆ ಗುರುವಾರ ಳಿಗ್ಗೆಯಿಂದಲೇ ಜಮಾಯಿಸಿದ್ದರಿಂದ ಕ್ರೀಡಾಂಗಣ ತುಂಬಿತ್ತು. ಗ್ರಾಮೀಣ ದಸರಾ ಕ್ರೀಡಾಕೂಟಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್  ಮತ್ತು ಮೈಸೂರು ಜಿಲ್ಲಾ ಗ್ರಾಮೀಣ ದಸರಾ ಸಮಿತಿ ಉಪಾಧ್ಯಕ್ಷ ಹನಗೋಡು ಮಂಜುನಾಥ್  ಗುಂಡು ಎತ್ತುವ ಮೂಲಕ ಚಾಲನೆ ನೀಡಿದರು.ಹೆಚ್ಚು ಸ್ಪರ್ಧಿಗಳಿಲ್ಲದಿದ್ದರೂ ರೋಚಕದಿಂದ ಕೂಡಿದ್ದ ಗುಂಡು ಎತ್ತುವ ಕ್ರೀಡೆ ಕ್ರೀಡಾಭಿಮಾನಿಗಳಿಗೆ ಸಂತೋಷ ತಂದಿತು. ಗುಂಡು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು 50, 75 ಮತ್ತು 125  ಕೆ.ಜಿ ಭಾರದ ಕಲ್ಲಿನ ಗುಂಡುಗಳನ್ನು ನಿರ್ದಿಷ್ಟ ಸಮಯದಲ್ಲಿ ಎತ್ತಬೇಕು ಎಂದು ಸೂಚನೆ ನೀಡಲಾಗಿತ್ತು. ಸೂಚನೆಯಂತೆ ಕ್ರೀಡಾಪಟುಗಳು ಗುಂಡು ಎತ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನಕ್ಕೆ ನಡೆದ ಸ್ಪರ್ಧೆ ಟೈ ಆಗಿದ್ದರಿಂದ ಹೆಮ್ಮಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮೇಗೌಡ ಮತ್ತು ಹುಣಸೂರು ಪಟ್ಟಣದ ನಿವಾಸಿ ಶ್ರೀನಿವಾಸ್ ಇಬ್ಬರಿಗೂ  ಮೂರನೇ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯಲ್ಲಿ  ಕೊಯಮತ್ತೂರು ಕಾಲೋನಿ ಗ್ರಾಮದ ವೇಲು ಸ್ವಾಮಿ ಪ್ರಥಮ, ದ್ವಿತೀಯ ಸ್ಥಾನ ಕಲ್ಕುಣಿಕೆ ಬಡಾವಣೆಯ ದನ್‌ಪಾಲ್ ಮಡಿಲು ಸೇರಿತು.

 ಗೊಬ್ಬರ ಮೂಟೆ ಓಟ: 50 ಮೀ. ಗೊಬ್ಬರದ ಮೂಟೆ ಹೊತ್ತ ಓಟ ಸ್ಪರ್ಧೆಯಲ್ಲಿ 29 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಪ್ರತಿಯೊಬ್ಬರು 50 ಕೆ.ಜಿ. ಗೊಬ್ಬರ ತುಂಬಿದ ಚೀಲವನ್ನು ಹೆಗಲ ಮೇಲೆ ಹೊತ್ತು ಓಡಿ  ಪ್ರೇಕ್ಷಕರನ್ನು ರಂಜಿಸಿದರು.ಕೆಸರು ಗದ್ದೆ ಓಟ: ಹೈರಿಗೆ ಪಿಕ್‌ಅಪ್ ನಾಲಾ ಬಯಲಿನಲ್ಲಿ ಪುರುಷರಿಗೆ ಕೆಸರು ಗದ್ದೆ ಓಟ ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡೆಯಲ್ಲಿ ಗ್ರಾಮೀಣ ಕೃಷಿಕರು ಹೆಚ್ಚಾಗಿ ಭಾಗವಹಿಸಿದ್ದರು. ಕೆಸರು ಗದ್ದೆ ಓಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದ ಕ್ರೀಡಾಪಟುಗಳಿಗೆ ಜಿ.ಪಂ ಸದಸ್ಯ ಸಿ.ಟಿ.ರಾಜಣ್ಣ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ್ ವೈಯಕ್ತಿಕವಾಗಿ ನಗದು ಬಹುಮಾನ ನೀಡಿದರು.ರಂಗೋಲಿ ಚಿತ್ತಾರ: ಮಹಿಳೆಯರು ತಂಪಾದ ಚಪ್ಪರದ ನೆರಳಿನಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಎಲ್ಲರ ಗಮನ ಸೆಳೆದರು. ಈ ಸ್ಪರ್ಧೆಯಲ್ಲಿ 15 ಮಹಿಳೆಯರು ಭಾಗವಹಿಸಿದ್ದರು. ಭಾರತದ ತಿರಂಗ ಧ್ವಜ ಬಣ್ಣ ತುಂಬಿಸಿದ ರಂಗೋಲಿ ಎಲ್ಲರನ್ನು ಆಕರ್ಷಿಸಿತ್ತು. ಹಲವು ಸ್ಪರ್ಧಿಗಳು ಬಣ್ಣ ಬಣ್ಣದ ಹೂವಿನ ಎಸಳುಗಳನ್ನು ಬಳಸಿ ರಂಗೋಲಿ ಬಿಡಿಸಿದ್ದು ವಿಶೇಷವಾಗಿತ್ತು. ತುಂಬಿದ ಬಿಂದಿಗೆ ಹೊತ್ತು ನಡೆಯುವುದು, ರಾಗಿ ತುಂಬಿದ ಬುಟ್ಟಿ ಹೊತ್ತು ನಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಿ  ಕ್ರೀಡಾಸ್ಫೂರ್ತಿ ಮೆರೆದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವರಾಜ್, ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ರಂಗಸ್ವಾಮಿ, ಮಾಜಿ ಜಿ.ಪಂ ಸದಸ್ಯ ರಮೇಶ್‌ಕುಮಾರ್ ಭಾಗವಹಿಸಿದ್ದರು. ಕ್ರೀಡಾಕೂಟವನ್ನು ನಾಡಹಬ್ಬಗಳ ಸಮಿತಿ ಸದಸ್ಯರು ನಡೆಸಿದರು.`ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ~


ಎಚ್.ಡಿ.ಕೋಟೆ: ಗ್ರಾಮೀಣ ಕ್ರೀಡೆ, ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ದಸರಾ ಉತ್ತಮವಾದ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸತ್ಯವತಿ ಹೇಳಿದರು.ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಎಷ್ಟೋ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ದಸರಾ ಉತ್ತಮ ನಿದರ್ಶನವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಚಿಕ್ಕಣ್ಣನರವರು ಗ್ರಾಮೀಣ ದಸರಾ ಕಾರ್ಯಕ್ರಮ ಉತ್ತಮವಾಗಿದ್ದು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಎಂದರು.ವಿಜಯ ದಶಮಿಯಂದು ಪಟ್ಟಣದ ವರದರಾಜಸ್ವಾಮಿ ದೇಸ್ಥಾನದಿಂದ ಸ್ತಬ್ದಚಿತ್ರಗಳೊಂದಿಗೆ ಮೆರವಣಿಗೆಯನ್ನು ರಾತ್ರಿ ಸಮಯದಲ್ಲಿ ನಡೆಸಲಾಗುವುದು ಎಂದರು.ಇದಕ್ಕೂ ಮುಂಚಿತವಾಗಿ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ಮಹದೇಶ್ವರ ದೇವಸ್ಥಾನದಲ್ಲಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಚಿಕ್ಕಣ್ಣ ಗ್ರಾಮೀಣ ದಸರಾಕ್ಕೆ ಚಾಲನೆ ನೀಡಿದರು. 10 ಸ್ತಬ್ದ ಚಿತ್ರಗಳು, ನಂದಿ ಧ್ವಜ, ಕಳಸಹೊತ್ತ ಮಹಿಳೆಯರು, ಪೂಜಾ ಕುಣಿತ, ವೀರಗಾಸೆ, ವೀರಭದ್ರ ಕುಣಿತ, ನಗಾರಿ, ಗಿರಿಜನರ ಕೋಲಾಟ, ಕೀಲು ಕುದುರೆ, ಕರಡಿ ಕುಣಿತ, ಮರಗಾಲು ಕುಣಿತ, ಕಂಸಾಳೆ ತಂಡ, ಡೋಲು, ಮಲಾರ ಕಾಲೋನಿಯ ವಿವಿಧ ಕಲಾ ತಂಡಗಳು ಮುಂತಾದ ಕಲಾವಿದರೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯೊಂದಿಗೆ ಹೊರಟು ಪದವಿ ಪೂರ್ವಕಾಲೇಜು ಮೈದಾನದಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಸೇರಿದರು.ಗ್ರಾಮೀಣ ಉಪ ಸಮಿತಿ ಅಧ್ಯಕ್ಷ ವರುಣಾಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಜಿ.ಗೋಪಾಸ್ವಾಮಿ, ಪ.ಪಂ.ಅಧ್ಯಕ್ಷರಾದ ರಫೀಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಂದಿನಿ, ಡಿ.ಎಂ.ಚಿಕ್ಕಣ್ಣೇಗೌಡ, ರಾಜಲಕ್ಷ್ಮಿ, ಭಾಗ್ಯಲಕ್ಷ್ಮೀ, ಪದ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರುಗಳು, ತಹಶೀಲ್ದಾರ್ ಎನ್.ಸಿ. ಜಗದೀಶ್, ಇಓ ನರಸಿಂಹಯ್ಯ, ಬಿಇಒ ಮಂಜುನಾಥ್, ಎಡಿಎ ವೆಂಕಟೇಶ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಬಿಇಒ ಮಂಜುನಾಥ್, ಸಿಪಿಐ ಮಲ್ಲಿಕ್, ಪಿಎಸ್‌ಐ ನಟರಾಜು ಇತತರು ಭಾಗವಹಿಸಿದ್ದರು.ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಶಾಲಾ ಮಕ್ಕಳಿಗೆ ದಿಡೀರ್ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೀದಿ ಬದಿಯಲ್ಲಿ ನಿಂತು ಪೋಷಕರ ಹುಡುಕಾಟದಲ್ಲಿ ತೊಡಗಿದ್ದರು. ಕೆಲ ಪೋಷಕರು ಈ ಬೆಳವಣಿಗೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಎಷ್ಟೋ ಪೋಷಕರು ಶಾಲೆಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗಲು ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಅನಾನುಕೂಲವಾಯಿತು.ಪ್ರಚಾರದ ಕೊರತೆಯಿಂದ ಸೊರಗಿದ ಕ್ರೀಡಾಕೂಟ

ಕೆ.ಆರ್.ನಗರ: ತಾಲ್ಲೂಕು ಗ್ರಾಮೀಣ ದಸರಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಕ್ರೀಡಾಕೂಟಕ್ಕೆ ಪ್ರಚಾರದ ಕೊರತೆಯಿಂದ ಕ್ರೀಡಾಪಟುಗಳಿಗಿಂತ ಅಧಿಕಾರಿಗಳ ದಂಡೆ ಹೆಚ್ಚಾಗಿರುವುದು ಕಂಡು ಬಂತು.ಪಟ್ಟಣದ ರೇಡಿಯೋ ಮೈದಾನದಲ್ಲಿ ಪುರುಷರಿಗಾಗಿ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಮತ್ತು ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುರುಷರಿಗಾಗಿ ಕೆಸರು ಗದ್ದೆ ಓಟದ ಸ್ಪರ್ಧೆ ಮಾತ್ರ ಹಳೇ ಯಡತೊರೆ ಬಳಿ ಇರುವ ಗದ್ದೆಯಲ್ಲಿ ಏರ್ಪಡಿಸಲಾಗಿತ್ತು.ಗ್ರಾಮೀಣ ದಸರಾ ಕ್ರೀಡಾಕೂಟದ ಜವಾಬ್ದಾರಿಯನ್ನು ಹೊತ್ತ ತಹಶೀಲ್ದಾರ್ ಡಾ.ನಂಜುಂಡೇಗೌಡ ಮತ್ತು ಅಧಿಕಾರಿಗಳ ತಂಡ ಕ್ರೀಡಾಕೂಟ ಏರ್ಪಡಿಸಲು ಬೆಳಿಗ್ಗೆ ಪಟ್ಟಣದ ರೇಡಿಯೋ ಮೈದಾನಕ್ಕೆ ಬಂದಿತು. ಆದರೆ ಅಲ್ಲಿ ನಾಳಿನ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕುವವರ ಹೊರತಾಗಿ  ಕ್ರೀಡಾಪಟುಗಳು ಇರಲಿಲ್ಲ. ಇದರಿಂದ ಮೊದಲು ಕೆಸರು ಗದ್ದೆ ಓಟ ಸ್ಪರ್ಧೆ ಏರ್ಪಡಿ ಸೋಣ ಎಂದು ಅಧಿಕಾರಿಗಳ ತಂಡ ಹಳೇ ಯಡತೊರೆ ಬಳಿ ಇರುವ ಕೆಸರು ಗದ್ದೆಗೆ ತಲುಪಿತು. ಅಲ್ಲಿ ಕೂಡ ಒಬ್ಬ ಕ್ರೀಡಾಪಟು ಇರಲಿಲ್ಲ. ಇದರಿಂದ ಗ್ರಾಮೀಣ ದಸರಾ ಕ್ರೀಡೆ ಉದ್ಘಾಟನೆಗೆ ಆಗಮಿಸಿದ್ದ ರೈತ ದಸರಾ ಸಮಿತಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ವಿಧಿ ಇಲ್ಲದೇ ಹಿಂದಿರುಗಿದರು. ಇದರಿಂದ ಗೊರಗುಂಡಿ ಮತ್ತು ಕಗ್ಗೆರೆ ಗ್ರಾಮದ ಕೆಲವು ಯುವಕರನ್ನು ಅಧಿಕಾರಿಗಳು ತಮ್ಮ ಜೀಪಿನಲ್ಲಿಯೇ ಕರೆತಂದು ಗ್ರಾಮೀಣ ದಸರಾ ಕ್ರೀಡಾಕೂಟ ನಡೆಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಟಿ.ಜವರೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಸೋಮಶೇಖರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಸಿ.ಬೆಟ್ಟೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಮಧುರದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ತೀವ್ರ ತರಾಟೆ: ಇದಕ್ಕೂ ಮುನ್ನ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿರುವ ಗ್ರಾಮೀಣ ದಸರಾ ಕ್ರೀಡಾ ಕೂಟದ ಬಗ್ಗೆ ಹೆಚ್ಚಿನ ಪ್ರಚಾರ ನೀಡದಿರುವುದನ್ನು ಖಂಡಿಸಿ ತಹಶೀಲ್ದಾರ್ ಡಾ.ನಂಜುಂಡೇಗೌಡ ಅವರನ್ನು ರೈತ ದಸರಾ ಸಮಿತಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಪಟ್ಟಣದ ರೇಡಿಯೋ ಮೈದಾನದಲ್ಲಿ ತರಾಟೆಗೆ ತೆಗೆದುಕೊಂಡರು.ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ರೈತರು ಹೆಚ್ಚಾಗಿ ಭಾಗವಹಿಸಬೇಕು. ಕ್ರೀಡಾಕೂಟ ಇರುವ ಬಗ್ಗೆ ಯಾರಿಗೂ ಗೊತ್ತಿಲ್ಲದಿದ್ದರೆ ಕ್ರೀಡಾ ಕೂಟದಲ್ಲಿ ಯಾರು ಭಾಗವಹಿತ್ತಾರೆ ಎಂದು ಪ್ರಶ್ನಿಸಿದರಲ್ಲದೇ ಕ್ರೀಡಾ ಕೂಟದ ಬಗ್ಗೆ ನನಗೂ ಸರಿಯಾದ ಮಾಹಿತಿ ಇರಲಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.