ಶುಕ್ರವಾರ, ಜನವರಿ 24, 2020
17 °C

ಹಳ್ಳೀ ಹುಡುಗಿ ಸೈಕಲ್ ಕಲಿತದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

“ಸೈಕಲ್ ಮ್ಯೋಲಿಂದ ಬಿದ್ದರ ಪೂರ್ತಿ ಸೈಕಲ್ ಹೊಡೀಲಿಕ್ಕೆ ಕಲತಂಗ” ಇದು ಸೈಕಲ್ ಕಲಿಯುವ ಎಲ್ಲ ಸಣ್ಣ ಮಕ್ಕಳು ಬಿದ್ದಾಗಲೂ ದೊಡ್ಡವರು ಹೇಳುವ ಮಾತು. ನಾನೂ ಹಿಂಗ ಹೇಳಿಸಿಕೊಂಡ ಸೈಕಲ್ ಕಲ್ತಿದ್ದು.

 

ನನಗ ಗಾಯ ಲಗೂನ ಮಾಯ್ತಿದ್ದರಿಂದ ಹೆಚ್ಚು ತ್ರಾಸ ಇರಲಿಲ್ಲ. ಕೆಲವೊಬ್ರಿಗೆ ಬೀಳೋದು, ಬಿದ್ದು ಮಂಡಿ ಒಡಕೊಳ್ಳೋದು, ಅದು ಕೀವಾಗೋದು, ಆಮೇಲೆ ಡಾಕ್ಟರು, ಗುಳಗಿ, ಇಂಜಕ್ಷನ್ ಎಲ್ಲಾ ಭೋರಗಳಿ ಇರ‌್ತದ.ನನಗ ಹಂಗೇನ ಇರಲಿಲ್ಲ. ಹಿಂಗಾಗಿ ಬೀಳೋದು ಅನ್ನೋದು ಅಷ್ಟು ಕಿರಿಕಿರಿ ಆಗ್ತಿರಲಿಲ್ಲ. ನಾ ಹುಟ್ಟಿ ಬೆಳೆದದ್ದು ತಿಳವಳ್ಳಿ. ನಾವು ಬೆಳೀತಾ ಇದ್ದಾಗ ನಮ್ಮೂರಾಗ ಭಾಳಂದ್ರ 8-10 ಬೈಕ್ ಇದ್ದಿರಬಹುದು. ಭಾಳ ಮಂದಿ ಹತ್ತರ ಸ್ವಂತದ ಸೈಕಲ್ಲೂ ಇರ‌್ತಿದ್ದಿಲ್ಲ. ನಮ್ಮ ಮನ್ಯಾಗೂ ಇದ್ದಿರಲಿಲ್ಲ.ಅವಾಗೆಲ್ಲ ಹಳ್ಳಿಯೊಳಗ ಇನ್ನೂ ಲೇಡೀಸ್ ಸೈಕಲ್ ಬಂದಿದ್ದಿಲ್ಲ. ಗಂಡು ಹುಡುಗರ ಸೈಕಲ್ಲನ್ನ ಎಲ್ಲಾರೂ ಕಲಿಯೋದು. ನನಗ ನೆನಪಿದ್ದಂಗ ಕನ್ನಡ ಸಾಲಿಯೊಳಗ ಇದ್ದಾಗ ನಾವೆಲ್ಲ `ದೊಡ್ಡ ಸೈಕಲ್~ ಕಲೀಲಿಕ್ಕೆ ಶುರು ಮಾಡಿದ್ದು. ಮೊದ ಮೊದಲ ಒಂದೆರಡು ದಿನ ಬರೇ ಸೈಕಲ್ ಹಿಡಕೊಂಡು, ಅದರ ಹ್ಯಾಂಡಲ್ ಸಂಭಾಳಿಸಿಕೋತನ ಓಡ್ಯಾಡೋದು.ಆಮ್ಯೋಲೆ ಒಂದೆರಡು ದಿನ `ಒಳಪೆಡ್ಲ್~  ಪ್ರ್ಯಾಕ್ಟೀಸು. ಗೊತ್ತಾಗಿಲ್ಲಂದ್ರ ಸೈಕಲ್ಲಿನ ಎರಡು ಗಾಲಿ ನಡುವಿನ ತ್ರಿಕೋನದ ಆ ಕಡೆ ಒಂದು ಕಾಲು, ಈ ಕಡೆ ಇನ್ನೊಂದು ಕಾಲು ಪೆಡಲ್ ಮ್ಯೋಲೆ ಇಟ್ಟು ಸೈಕಲ್ ಹೊಡಿಯೋ ಪ್ರಯತ್ನ.

 

ಆದರ ನನಗ ಮಾತ್ರ ಒಳ  ಪೆಡ್ಲ್ ಹೊಡೆಯೋದು ಲಗೂನ ಬಂತು. ಇಷ್ಟು ಬಂತಂದ್ರ ಹೆಚ್ಚೂ ಕಮ್ಮಿ ಸೈಕಲ್ ಬಂದಂಗನ. ಇದ ಬರೋತನಕಾ ಸಣ್ಣ ಹುಡುಗರು ಅವರ ಅಣ್ಣ-ಅಕ್ಕನ ಗಂಟು ಬಿದ್ದು ಅಷ್ಟು-ಇಷ್ಟು ಲಂಚ ಕೊಟ್ಟು ಅವರ ಮರ್ಜಿ ಕಾಯೋದು. ಯಾಕಂದ್ರ ನಾವು ಸೈಕಲ್ ಕಲಿಯೋ ಮುಂದ ಅವರು ನಮ್ಮ ಹಿಂದ ಓಡಿಕೋತ ಸೈಕಲ್ ಹಿಡಕೊಂಡ ನಮಗ ಧೈರ್ಯ ಕೊಡಬೇಕಲ್ಲಾ.ಈಗ ಹೆಂಗ ಓಣಿಗೆ ಒಂದೊಂದು ಬ್ಯೂಟಿ ಪಾರ್ಲರ್ ಅವನೋ ಹಂಗ ಅವಾಗ. ಅವಾಗ ಬಾಡಿಗಿ ಸೈಕಲ್ ಅಂಗಡಿ ಇದ್ದವು. ಸೈಕಲ್ ಬೇಕಾದವರು ಅಲ್ಲಿಂದನ ಸೈಕಲ್ ಬಾಡಿಗಿಗೆ ತೊಗೊಂಡು ತಾಸಿಗೆ ಎಂಟಾಣೆ   ಒಂದ್ರುಪಾಯಿ ಕೊಡ್ತಿದ್ದರು.

 

ನಮ್ಮ ಓಣ್ಯಾಗಿನ ಹುಡುಗರು, ನಮ್ಮ ಅಣ್ಣ, ಇವರು ಸಹಿತ ಬಾಡಿಗಿ ಸೈಕಲ್ ತಂದ ಸೈಕಲ್ ಕಲೀತಿದ್ರು. ಬಾಡಿಗಿ ಅಂಗಡಿಯವನ ಹತ್ತಿರ ಸಣ್ಣ ಸೈಕಲ್ ಜಾಸ್ತಿ ಇರ‌್ತಿರಲಿಲ್ಲ. ಒಂದೋ ಎರಡೋ ತರಸ್ತಿದ್ದ. ಆದರ ಅದಕ್ಕ ಅಡ್ವಾನ್ಸ್ ಬುಕ್ಕಿಂಗ್ ಇರ‌್ತಿತ್ತು. ಇನ್ನೊಂದು ಏನಂದ್ರ ಅದರಾಗ ಒಳ ಪೆಡ್ಲಿನ ಮಜಾ ಇರ‌್ತಿರಲಿಲ್ಲ.ನನ್ನ ತವರು ಮನಿ ಅಡ್ಡ ಹೆಸರು ಕಟ್ಟಿ. ಮನೀ ಮುಂದ ದೊಡ್ಡ ಅಂಗಳ, ದೊಡ್ಡ ಕಟ್ಟಿ. ಮುಂಜಾನಿ ಚಹಾದಿಂದ ಹಿಡದು ಸಂಜೀತನಕ ನಮ್ಮ ಅಭ್ಯಾಸ, ಒಮ್ಮಮ್ಮೆ ರಾತ್ರಿ ಊಟಾ ಸಹ ತಾಟಿನೊಳಗ ಕಲಿಸಿಕೊಂಡು ಬಂದು ಕಟ್ಟೀ ಮ್ಯೋಲೆ ಕೂತನ ಮಾಡ್ತಿದ್ವಿ. ನಾನು ಸೈಕಲ್ ಕಲಿತಿದ್ದನೂ ಸಹಿತ ಹಂಗನ-ಕಟ್ಟಿ  ಹತ್ತೇ!ನನಗ ಸೈಕಲ್ ಕಲಿಸಿದ ಶ್ರೇಯ ನಮ್ಮ ಮನೀ ಕಟ್ಟೀಗೆ ಹೋಗಬೇಕು. ಯಾಕಂದ್ರ ಸೈಕಲ್ಲಿಂದೂ, ನಂದೂ ಹೆಚ್ಚೂ ಕಮ್ಮೀ ಒಂದ ಹೈಟು. ಭಾಳಂದ್ರ ನಾನು ಒಂದು ಗೇಣು ಹೆಚ್ಚು ಇರಬಹುದು.ಅಷ್ಟ. ಈ ಪರಿಸ್ಥಿತಿ ಎನ್ನ ಎಸ್ಸೆಸ್ಸೆಲ್ಸಿ ಮುಗಿಯೋ ತನಕಾನೂ ಹಂಗ ಇತ್ತು. ಹಂಗಾಗೇ ಸೈಕಲ್ ಹತ್ತುವಾಗ ಎಡಗಾಲು ಪೆಡಲ್ ಮೇಲೆ ಇಟ್ಟು, ಎರಡು ಹೆಜ್ಜಿ ಓಡು ನಡುಗೆಯೊಳಗ ಓಡಿ, ಹೆಜ್ಜಿ ಎತ್ತಿ ಸೀಟು ಮ್ಯೋಲೆ ಕೂಡುವ ಆ ಭಂಗಿ ನನಗ ಯಾವಾಗಲೂ ಸಾಧ್ಯ ಆಗಲಿಲ್ಲ.

 

ಆವಾಗ ಸೈಕಲ್ ನಡೆಸಿಕೋತ, ಒಂದು ಕಟ್ಟೀ ಬಾಜೂಕ ಬಂದು, ಕಟ್ಟೀ ಮ್ಯೋಲೆ ನಿಂತು, ಸೈಕಲ್ ಮೇಲೆ ಕೂಡ್ತಿದ್ದೆ. ಇನ್ನ ನಮ್ಮ ಮನ್ಯಾಗ ಏನರ ಸಾಮಾನು ತರಲಿಕ್ಕೆ ಹೇಳಿದರ ಬಾಡಿಗಿ ಸೈಕಲ್ ಕೊಡಿಸಿದರ ಸಾಮಾನು ತರೋದು ಅಂತ ಹೇಳತಿದ್ವಿ. ಅಷ್ಟರ ಪೂರ್ತೇಕ್ಕನ ನಾನು ಸೈಕಲ್ ಕಲತು ಮರತು ಬಿಟ್ಟಿದ್ದೆ.ಆದರ ಸೈಕಲ್‌ನ ಮಜಾ ಅನುಭವಿಸಿದ್ದು ಏನಿದ್ರೂ ಬಾಗಲಕೋಟಿಯೊಳಗ. ಬಿ.ಕಾಂ. ಮೊದಲನೇ ವರ್ಷದ ಪರೀಕ್ಷಾ ಮುಗಿದ ಸೂಟಿಗೆ ನಮ್ಮ  ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮದಲ್ಲಿ ಒಂದು ತಿಂಗಳು ಕಡು ಬಿಸಿಲಿನ ಬಾಗಲಕೋಟೆಗೆ ಹೋದೆ.ವಿದ್ಯಾರ್ಥಿಗಳಿಗಾಗಿ ಸಮರ್ ಕ್ಯಾಂಪ್ ಸ್ಟಡಿ ಸರ್ಕಲ್ ಆಯೋಜಿಸಿದಿವಿ. ಕಾರ್ಯಕರ್ತರ ಮನೀಗೆ ಹೋಗೋದು, ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿ ಮಾಡೋದು ಇಂಥದ್ದೆಲ್ಲವನ್ನೂ ಮಾಡಬೇಕಿತ್ತು. ಅಲ್ಲಿ ಹೆಚ್ಚಿನ ಕಾರ್ಯಕರ್ತರ ಕಡೆ ಸೈಕಲ್ ಇದ್ದವು.ನಾ ಉಳಿದಿದ್ದು ಹಿರಿಯ ಪ್ರಾಧ್ಯಾಪಕರೊಬ್ಬರ ಮನೆಯಲ್ಲಿ. ಅವರ ಮಗಳ ಸೈಕಲ್ ನನಗ ಕೊಟ್ಟಿದ್ರು. ಬೆಳಿಗ್ಗೆ ಮನಿ ಬಿಟ್ಟರ ಇನ್ನ ರಾತ್ರಿ ಊಟ ಮುಗಿಸಿಯೇ ಹಿಂದಕ್ಕ ಬರತಿದ್ದೆ. ಎರಡ ದಿನ ನಡಕೋತ ಅಡ್ಡಾಡಿದೆ. ಅರೆ ಮಲೆನಾಡಿನ ನನಗ ಆ ಬಾಗಲಕೋಟಿಯ ಭರ್ತಿ ಭಯಂಕರ ಬಿಸಿಲಿನ ಓಡಾಟಕ್ಕ ಬಾಯಿತುಂಬ ಹುಗುಳಾಗಿ ಮಾತು ಬರದಂಗ ಆದವು.ಇನ್ನು ಸೈಕಲ್ ಅಂದರ ಹೆದರಿಕೆ ಬರ‌್ತಿತ್ತು. ಹಳ್ಳೀ ಸಾಲಿ ಗ್ರೌಂಡಿನ್ಯಾಗ, ಖಾಲಿ ರೋಡಿನ್ಯಾಗ ಸೈಕಲ್ ಕಲತಕೀಗೆ ಬಾಗಲಕೋಟೆ ರಸ್ತೆಗಳೂ, ರೋಡ ತುಂಬಾ ಮಂದೀ, ಕಿಲ್ಲಾದಾಗಿನ ಸಣ್ಣ ಸಣ್ಣ ಸಂದಿಗಳು, ಅದರ ನಡುವೆ ಜೋರು ದನಿಯಿಂದ “ಓ ಹಳದೀ ಚೂಡಿದಾರ್ ವಾಲಿ ಹೋಳಾಗಿ ಹೋಗ್ರೀ” ಅಂತ ನನ್ನನ್ನ ಕೂಗುವ ಟಾಂಗಾವಾಲಾಗಳೂ, ಇವೆಲ್ಲ ನೋಡಿ ಸೈಕಲ್ ಹೊಡೀಬೇಕಂದ್ರ ನಡು ರಾತ್ರಿಯೊಳಗೂ ಬೆಚ್ಚಿ ಬೀಳ್ತಿದ್ದೆ.ಆದರ ನಾ ಸೈಕಲ್ ಹೊಡೀಲಾರದಕ್ಕ, ನನ್ನ ಜೊತೆಗಿನ ಹುಡುಗರೂ ತಮ್ಮ ಕಡೆ ಸೈಕಲ್ ಇದ್ದರೂ ನನ್ನ ಜೊತೆಗೆ ನಡಕೋತನ ಬರಬೇಕಾಗ್ತಿತ್ತು. ಹಂಗಾಗಿ ಸೈಕಲ್ ಹೊಡಿಯಬೇಕು ಅನ್ನೂ ಫರ್ಮಾನ್ ಹಿರಿಯರಿಂದ ಬಂತು.ಸಾಲದ್ದಕ್ಕ ನಮ್ಮ ಪ್ರಮುಖರೊಬ್ಬರು `ಸಂಘಟನೆಯ ಬಾಗಲಕೋಟಿ ವಿದ್ಯಾರ್ಥಿನಿಯರು ರಜಾದಾಗ ಬಾಗಲಕೋಟಿಯಿಂದ ಬಿಜಾಪುರ ತನಕಾ ಸ್ವದೇಶಿ ಜಾಗೃತಿ ಹಾಗೂ ಸ್ತ್ರೀ ಸಮಾನತೆ ಉದ್ದೇಶ ಸಾರುವ ಸೈಕಲ್ ಜಾಥಾ  ಮಾಡ್ತಾರ~ ಅಂತ ಬೆಂಗಳೂರಿನಲ್ಲಿ ಘೋಷಣೆ ಮಾಡಿ ಬಂದಿದ್ದರು. ದಶರಥನ ವಚನ ಪಾಲಿಸಲಿಕ್ಕೆ ಶ್ರೀರಾಮಚಂದ್ರ ವನವಾಸಕ್ಕೆ ಹೋದ ಪರಿಸ್ಥಿತಿ ನನ್ನದಾಗಿತ್ತು.ತಾಲೀಮು ಶುರು ಆತು. ಟ್ರಾಫಿಕ್ ಇಲ್ಲದಾಗ ರಾತ್ರಿ 10 ರ ಮೇಲೆ ಹಾಗೂ ಬೆಳಿಗ್ಗೆ 6ಕ್ಕೆ ಎದ್ದು ಸೈಕಲ್ ಕಲೀಲಿಕ್ಕೆ ಶುರು ಮಾಡಿದೆ. ನನ್ನ ಅತಿಥೇಯರು ಅಲ್ಲಿ ನನಗ ಕೊಟ್ಟ ಸೈಕಲ್ ನನ್ನ ಕನಸಿನ ಲೇಡೀಸ್ ಸೈಕಲ್. ಅದನ್ನ ಹೊಡೀಲಿಕ್ಕೆ ಕಟ್ಟಿಯ ಅವಶ್ಯಕತಾ ಇರಲಿಲ್ಲ.ಅಂತೂ ಇಂತೂ ಸೈಕಲ್ ಜಾಥಾಕ್ಕ 8 ದಿನಾ ಇದ್ದಾಗ ಬಾಗಲಕೋಟಿಯ ಕಿಲ್ಲಾದಾಗ, ಜೋರಾಗಿ ಒದರಿಕೋತ ಹೋಗೋ ಟಾಂಗಾದ ಮಂದೀ ನಡುವೆ ಬ್ರೇಕ್ ಹಚ್ಚಲಾರದಂಗ ಸೈಕಲ್ ಹೊಡಿಯೋವಷ್ಟು ಪಳಗಿದೆ.ಪಿಯುಸಿ, ಡಿಗ್ರಿ, ಓದೋ 6 ಹುಡುಗಿಯರು, ಎರಡು ವಿದ್ಯಾರ್ಥಿ ಪ್ರಮುಖರು ಎಲ್ಲಾ ಸೇರಿ, ನಮ್ಮ ಜಾಥಾ ನಡೀತು. 3 ದಿನದ ನಮ್ಮ ಜಾಥಾ ಬಾಗಲಕೋಟಿಯಿಂದ 4 ತಾಲೂಕಿನ 10 ಊರುಗಳಿಗೆ ಹೋಗಿ 160 ಕಿಮೀ ದೂರ ಸಾಗಿ ಎಲ್ಲ ಕಡೆ ಸಭೆ, ಭಾಷಣ ಮಾಡತಾ ಬಿಜಾಪುರದ ಬಹಿರಂಗ ಸಭೆಯೊಳಗ ಮುಗೀತು.ಒಂದು ದಿನಕ್ಕ ಸರಾಸರಿ 50-55 ಕೀಮೀ ಸೈಕಲ್ ಹೊಡೆದಿದ್ವಿ. ಮೊದಲೇ ದಿನ ಮಲಗಿದವರಿಗೆ ಮರುದಿನ ಮುಂಜಾನೆ ಒಂದು ಹಳ್ಳೀ ಮುದಿಕೀ ಕಡೆ ಎಣ್ಣೀ ಕಾಸಿ ಕಾಲ ತಿಕ್ಕಿಸಿಕೊಂಡ ಮ್ಯೋಲನೇ ಎದ್ದೇಳಲಿಕ್ಕೆ ಸಾಧ್ಯ ಆತು.ಎರಡನೇ ದಿನ ಆ ಬಟಾನ ಬಯಲ ಹಾದಿ, ಏರಿ, ಮುಳ್ಳು ಕಂಟೀ ಮ್ಯೋಲೆ ಸೈಕಲ್ ಇಳದ, ದೂಡಿದರೂ ಮುಂದ ಹೋಗಲಾರದ ಸ್ಥಿತಿ. ಇದೆಲ್ಲಾ ಯಾಕ ಬೇಕಿತ್ತು ಅಂತ ಒಮ್ಮಮ್ಮೆ ಕಣ್ಣಾಗ ನೀರ. ಆದ್ರ ಸೋಲೋದ ಬೇಕಿದ್ದಿಲ್ಲ. ಅದಕ್ಕೂ ಮೀರಿ ಒಂದು ಮಾತು ಇತ್ತು ಅಂತ ಅನಸ್ತದ.ಜನಪ್ರಿಯತೆ  ಅನ್ನೋದು ಮನುಷ್ಯಾಗ ಏನನ್ನೂ ಮಾಡಸ್ತದ. ಆ ಹಳ್ಳೀ ಊರಿನ ಗೌಡ್ರು, ಪ್ರಮುಖರು, ರೈತರು ಊರು ಮುಂದ ಆರತಿ ಮಾಡಿ ಕರೆಯೋದು, ಆ ಹತ್ತೀ ಹೂವಿನ ಮಾಲಿ, ಜೈ ಜೈಕಾರ, ಆ ಮೈಕು, ಆ ಸ್ಟೇಜು, ಕೈ ಮಾಡಿ ಕರೀತಿದ್ವು. ಹಂಗಾಗಿ ನಾನು ಸೈಕಲ್ ಕಲಿತದ್ದು, ಬರೇ ಬಿದ್ದು, ಮಂಡೀ ಒಡಕೊಂಡು, ಕಲತ ಅನುಭವ ಅಲ್ಲ.

 

ಅದು ಒಂದು ದೊಡ್ಡ ಆದರ್ಶದ ಬೆನ್ನು ಹತ್ತಿದ್ದು. ಇವತ್ತಿಗೂ ನಾನು ಗಾಡಿ ತೊಗೊಂಡು ಹೋಗುವಾಗ ಯಾರರೇ ಸೈಕಲ್‌ನ್ಯಾಗ ಬಂದ್ರ ನಾ ಬ್ರೇಕ್ ಹಚ್ಚತೇನಿ, ಅವಗ ಹೋಗಲಿಕ್ಕೆ ಬಿಡತೇನಿ. ಯಾಕಂದ್ರ ಬಿಸಲಾಗ ಬೆವರಿಳಿಸಿ ಗಳಿಸಿದ ಸೈಕಲ್ಲಿನ ಆ ವೇಗಕ್ಕೆ ವಿನಾಕಾರಣ ಬ್ರೇಕ್ ಬಿದ್ದರ ಆಗುವ ಸಂಕಟ, ಸಿಟ್ಟನ್ನು ಅನುಭವಿಸಿನ ತಿಳಕೋಬೇಕು.(ಯುವ ವಕೀಲೆಯಾಗಿರುವ ಲೇಖಕಿ ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರು.)

ಪ್ರತಿಕ್ರಿಯಿಸಿ (+)