ಗುರುವಾರ , ಜನವರಿ 30, 2020
19 °C

ಹಸಿದ ಹೊಟ್ಟೆಯಲ್ಲೇ ಹೊಸ ವರ್ಷಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೊಸ ವರ್ಷ ಎಲ್ಲರಿಗೂ ನೆಮ್ಮದಿ, ಸುಖ, ಶಾಂತಿ ತರಲಿ ಎಂಬ ಸಂದೇಶಗಳು ಭಾನುವಾರ ಬೆಳಗಿನಿಂದಲೂ ಆರಂಭವಾಗಿವೆ. ಸಮೀಪದ ವಡಗೇರಾ ಶಾಲೆಯ ಮಕ್ಕಳಿಗೆ ಮಾತ್ರ ಹೊಸ ವರ್ಷವನ್ನು ಹಸಿದ ಹೊಟ್ಟೆಯಲ್ಲೇ ಸ್ವಾಗತಿಸುವ ದುಸ್ಥಿತಿ ಒದಗಿ ಬಂದಿದೆ.ವಡಗೇರಾ ಮೊರಾರ್ಜಿ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ಮಕ್ಕಳನ್ನು ಕೇಳುವವರೇ ಇಲ್ಲದಾಗಿತ್ತು. ಅಡುಗೆ ಮಾಡುವ ಸಿಬ್ಬಂದಿ, ತಮಗೆ 6 ತಿಂಗಳಿಂದ ವೇತನ ಕೊಟ್ಟಿಲ್ಲ ಎಂದು ಕೆಲಸಕ್ಕೆ ಬರಲಿಲ್ಲ. ಅಡುಗೆ ಮನೆಯತ್ತ ಹೊರಳಿ ನೋಡುವವರೂ ಇರಲಿಲ್ಲ. ಇನ್ನೂ ಅಡುಗೆ, ತಿಂಡಿ ಮಾಡುವುದಂತೂ ದೂರದ ಮಾತು.ಆದರೆ ಪುಟ್ಟ ಮಕ್ಕಳ ಹೊಟ್ಟೆ ಕೇಳಬೇಕಲ್ಲ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಮಕ್ಕಳ ಆಸೆಗೆ ತಣ್ಣೀರು ಎರಚಿದಂತಾಗಿತ್ತು. ಮಕ್ಕಳು ಬೆಳಿಗ್ಗೆಯಿಂದಲೇ ಹಸಿವಿನಿಂದ ಅಳಲು ಆರಂಭಿಸಿದರು. ಹಸಿವನ್ನು ತಾಳಲಾರಾದೇ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ಘಟಕದ ಪದಾಧಿಕಾರಿಗಳಿಗೆ ಕರೆ ಮಾಡಿ ಇಂದು ನಮ್ಮ ಶಾಲೆಯಲ್ಲಿ ಅಡುಗೆ ಮಾಡಿಲ್ಲ. ನಮ್ಮ ಜೊತೆ ಶಿಕ್ಷಕರೂ ಇಲ್ಲಾ. ನೀವು ಬಂದು ಊಟದ ವ್ಯವಸ್ಥೆ ಮಾಡಿಕೊಡಿ ಎಂದು ಗೋಗರೆದರು.ಇದನ್ನು ಕೇಳಿದ ಸಮಿತಿ ಪದಾಧಿಕಾರಿಗಳು, ಕೂಡಲೇ ಶಾಲೆಗೆ ಹೋಗಿ ಅಲ್ಲಿನ ವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಳುತ್ತಿರುವ ಮಕ್ಕಳ ಸ್ಥಿತಿಯನ್ನು ನೋಡಲಾಗದ ಪದಾಧಿಕಾರಿಗಳು, ಅವರನ್ನು ಸಂತೈಸುವಷ್ಟರಲ್ಲಿ ಸಾಕು ಬೇಕಾಯಿತು. ಕೊನೆಗೆ ಅಡುಗೆ ಮಾಡುವ ಸಿಬ್ಬಂದಿಯ ಮನೆಗೆ ತೆರಳಿದ ಪದಾಧಿಕಾರಿಗಳನ್ನು ಅವರ ಮನವೊಲಿಸಲು ಮುಂದಾದರು. ಸಂಬಳ ಕೊಡಿಸುವ ಪ್ರಯತ್ನ ಮಾಡುತ್ತೇವೆ.ದಯವಿಟ್ಟು ಮಕ್ಕಳಿಗೆ ಅಡುಗೆ ಮಾಡಿ ಹಾಕಿ ಎಂದು ಮನವಿ ಮಾಡಿದರು. ಅದಕ್ಕೆ ಒಪ್ಪಿದ ಅಡುಗೆ ಸಿಬ್ಬಂದಿ, ಮಕ್ಕಳಿಗೆ ಅಡುಗೆ ಮಾಡಿ ಬಡಿಸಿದರು.ಇಷ್ಟೆಲ್ಲ ನಡೆಯುತ್ತಿದ್ದರೂ, ಶಾಲೆಗೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಶಿಕ್ಷಕರಾಗಲಿ, ಸುಳಿಯದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಇಂತಹ ಸ್ಥಿತಿ ಎದುರಿಸಬೇಕಾಯಿತು. ಅಡುಗೆ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡಿದಾಗ ಮಾತ್ರ ಅವರ ಜೀವನ ಕೂಡ ನಡೆಯುತ್ತದೆ. ಆದರೆ ಅಧಿಕಾರಿಗಳ ಮಾತ್ರ ಗುತ್ತಿಗೆದಾರರ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ.ಕೂಡಲೇ ಈ ಶಾಲೆಯ ಸಮಸ್ಯೆಗಳನ್ನು ಸರಿಪಡಿಸಬೇಕು. ಶಿಕ್ಷಕರು, ಅಡುಗೆಯವರಿಗೆ ಒಂದು ವಾರದೊಳಗೆ ಸಂಬಳ ನೀಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಣ್ಣ ಜಡಿ, ಪದಾಧಿಕಾರಿಗಳಾದ ಬಸ್ಸುಗೌಡ ತೆಗ್ಗಿನಮನಿ, ಲಕ್ಷ್ಮಣ ಟೇಲರ್, ಶಿವುಕುಮಾರ ಬಾಗೂರ, ಅಪ್ಪಣ್ಣ ಎಚ್, ಮಲ್ಲಿಕಾರ್ಜುನ ಜಡಿ, ಜಲಾಲ ತುಮಕೂರ, ಗಂಗಾಧರ ವಿಶ್ವಕರ್ಮ, ಐರೆಡ್ಡಿಗೌಡ, ರಾಜು ಗೊರುವರ, ದೇವರಾಜ ವರ್ಕನಳ್ಳಿ, ರಫಿ ದೇವದುರ್ಗ, ಫಕೀರ ಅಹ್ಮದ್, ಸೈದು ದೇವರಡ್ಡಿ, ದೇವಿಂದ್ರ ಜಡಿ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)