ಶನಿವಾರ, ಜನವರಿ 18, 2020
20 °C

ಹಸುಗೂಸಿನೊಂದಿಗೆ ಬಾಣಂತಿಯರಿಗೆ ಕಾಯುವ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಕುಟುಂಬ ಕಲ್ಯಾಣ ಇಲಾ­ಖೆಯ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ­ಗಾಗಿ (ಲ್ಯಾಪ್ರಸ್ಕೋಪಿ) ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಬಂದಿದ್ದ ಸುಮಾರು 15ಕ್ಕೂ ಹೆಚ್ಚು ಬಾಣಂತಿಯರು ತಮ್ಮ ಹಸುಗೂಸುಗಳೊಂದಿಗೆ ನಾಲ್ಕಾರು ಗಂಟೆ ಕಾಯುವ ಶಿಕ್ಷೆ ಅನುಭವಿಸಿದರು.ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು. ನಗರದ ವಿವಿಧ ವಾರ್ಡ್‌ ಹಾಗೂ ಕಂಪ್ಲಿಯ ಕೊಟ್ಟಾಲು ಸೇರಿದಂತೆ ತಾಲ್ಲೂಕಿನ ನಾನಾ ಗ್ರಾಮೀಣ ಭಾಗದಿಂದ ಬಂದಿದ್ದ ಬಾಣಂತಿಯರಿಗೆ ಆಸ್ಪತ್ರೆ ಆವರಣದಲ್ಲಿ ಕಾಯುವ ಸ್ಥಿತಿ ಎದುರಾಗಿತ್ತು.‘ಸೋಮವಾರ ರಕ್ತ, ಮೂತ್ರ ಸೇರಿದಂತೆ ನಾನಾ ಪರೀಕ್ಷೆ ಮಾಡಿಸಿದ್ದೇವೆ. ಮಂಗಳವಾರ ಬೆಳಿಗ್ಗೆ ಬರಲು ವೈದ್ಯರು ಸೂಚಿಸಿದ್ದರು. ಬೆಳಿಗ್ಗೆ 8ಕ್ಕೆ ಬಂದಿದ್ದೇವೆ. ಆದರೆ ಸಕಾಲಕ್ಕೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಕೊಟ್ಟಾಲ್‌ ಗ್ರಾಮದ ಬಾಣಂತಿ ವರ­ಲಕ್ಷ್ಮಿ ಜೊತೆ ಬಂದಿದ್ದ ತಾಯಿ ಶಿವ­ಗಂಗಮ್ಮ ಅಸಮಾಧನ ವ್ಯಕ್ತಪಡಿಸಿದರು.‘ಹಸಿ ಬಾಣಂತಿ ಆರೈಕೆ ಅಗತ್ಯ. ನಾಲ್ಕು ಗಂಟೆ ಕೂರಬಾರದು. ಮುಂದೆ ಬಾಣಂತಿಗೆ ಸೊಂಟದ ನೋವು ಬರುತ್ತದೆ. ಆದರೆ ಅನಿವಾರ್ಯ ಇಲ್ಲಿ ಸೂಕ್ತ ಸವಲತ್ತು ಇಲ್ಲ. ಆಸ್ಪತ್ರೆಯ ಆವರಣದಲ್ಲಿ ಕೂರಬೇಕಾಗಿದೆ’ ಎಂದು ಮತ್ತೊಬ್ಬ ಬಾಣಂತಿ ಆದಿಲಕ್ಷ್ಮಿಯ ಸಹೋದರಿ ರೇಣುಕಾ ಹೇಳಿದರು.ಎಳೆಯ ಮಕ್ಕಳನ್ನು ಹೊತ್ತು ತಂದಿದ್ದ ಬಾಣಂತಿಯರು ಹಾಗೂ ಅವರ ಪಾಲಕರು ಆಸ್ಪತ್ರೆಯಲ್ಲಿ ಸೂಕ್ತ ಸವಲತ್ತುಗಳಿಲ್ಲದ ಕಾರಣ ಆವರಣದಲ್ಲಿರುವ ಮರಗಳಿಗೆ ಸೀರೆಗಳನ್ನು ಕಟ್ಟಿ ಜೋಕಾಲಿ ಮಾಡಿ ಮಕ್ಕಳನ್ನು ಮಲಗಿಸುತ್ತಿದ್ದ ದೃಶ್ಯ ಕಂಡು ಬಂತು.‘ಈ ಮೊದಲು ತಿಂಗಳಿಗೊಮ್ಮೆ ಶಸ್ತ್ರಚಿಕಿತ್ಸೆ ಮಾಡಲಾಗುತಿತ್ತು. ಒತ್ತಡದಿಂದಾಗಿ ಗುಣಮಟ್ಟದ ಶಸ್ತ್ರಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರಿನ ಮೇರೆಗೆ ವಾರಕ್ಕೊಮ್ಮೆ ಮಾಡಲಾಗುತ್ತಿದೆ. ಆಸ್ಪತ್ರೆಯ ಒಳಗೆ ಕೂರಲು ಸಾಕಷ್ಟು ಸ್ಥಳವಿದೆ. ಹೊರಗೆ ಕುರ್ಚಿಗಳಿಲ್ಲ’ ಎಂದು ಆಡಳಿತಾಧಿಕಾರಿ ಡಾ. ರಾಮಕೃಷ್ಣ ಹೇಳಿದರು.

ಪ್ರತಿಕ್ರಿಯಿಸಿ (+)