ಮಂಗಳವಾರ, ಮಾರ್ಚ್ 9, 2021
30 °C

ಹಸೆಮಣೆ ಏರಬೇಕಿದ್ದ ನವಜೋಡಿ ಆಸ್ಪತ್ರೆಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸೆಮಣೆ ಏರಬೇಕಿದ್ದ ನವಜೋಡಿ ಆಸ್ಪತ್ರೆಗೆ!

ಹುಬ್ಬಳ್ಳಿ: ಕಿಮ್‌್ಸ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಒಂದು ಮೂಲೆಯ ಬೆಡ್‌ನಲ್ಲಿ, ಹಸಿರು– ಹಳದಿ ಮಿಶ್ರಿತ ಮದುವೆ ಸೀರೆಯಲ್ಲಿ ಬಲಗಾಲು ಮುರಿದು ಮಲಗಿದ್ದ ಮದುಮಗಳು....ಇನ್ನೊಂದು ಮೂಲೆಯ ಬೆಡ್‌ನಲ್ಲಿ ಎಡಭುಜ ಮತ್ತು  ತಲೆಗೆ ಬ್ಯಾಂಡೇಜ್‌ ಕಟ್ಟಿಕೊಂಡು ನರಳುತ್ತಿದ್ದ ಮದುಮಗ...ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕಂದಗಲ್ಲಪುರದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಹಸೆಮಣೆ ಏರಬೇಕಿದ್ದ ಈ ನವಜೋಡಿ, ಅದೇ ಹೊತ್ತಿಗೆ ಇಲ್ಲಿನ ಕಿಮ್‌್ಸನಲ್ಲಿ ನರಳುತ್ತಿದ್ದರು. ಸಂತೈಸಲೆಂದು ಆ ಇಬ್ಬರ ಪಕ್ಕದಲ್ಲಿ ಯಾರೂ ಇರಲಿಲ್ಲ!!  ಮದುವೆ ದಿಬ್ಬಣ ಹೊರಟ ಟ್ರ್ಯಾಕ್ಟರ್‌ ಮತ್ತು ಲಾರಿ ಮಧ್ಯೆ ಬುಧವಾರ ಬೆಳಿಗ್ಗೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ 16 ಮಂದಿಯನ್ನು ಕಿಮ್ಸ್‌ನಲ್ಲಿ ದಾಖಲಿಸಲಾಗಿದ್ದು, ಆ ಪೈಕಿ ವಧು– ವರ ಸೇರಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಈ ಅಪಘಾತದಲ್ಲಿ 10 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.ಕಳೆದ ಗೌರಿ ಹುಣ್ಣಿಮೆಯಂದು ಮುಂಡರಗಿ ತಾಲ್ಲೂಕಿನ ನಾಗಸಮುದ್ರದ ಮಾಳವ್ವ ಬಾಳಪ್ಪ ಹಾದಿಮನಿ (18) ಮತ್ತು ಡಂಬಳದ ನೀಲಕಂಠ ಹರಿಜನ (35) ಮಧ್ಯೆ ಮದುವೆ ನಿಶ್ಚಿತಾರ್ಥ ಆಗಿತ್ತು. ನೀಲಕಂಠನ ಮನೆಯಲ್ಲಿ ಮಂಗಳವಾರ ಅರಿಶಿನ ಕಾರ್ಯಕ್ರಮ ನಡೆದಿತ್ತು. ಕಂದಗಲ್ಲಪುರದಲ್ಲಿ ಬುಧವಾರ ಮಧ್ಯಾಹ್ನ ಮದುವೆ ನಿಗದಿಯಾಗಿತ್ತು. ಮದುವೆ ಸಂಭ್ರಮಕ್ಕೆ ಹೊರಟ ವೇಳೆ ಈ ದುರ್ಘಟನೆ ಸಂಭವಿಸಿದೆ.‘ನನಗೆ ಅಪ್ಪ ಇಲ್ಲ. ಅವ್ವ ಇದ್ದಾರೆ. ಹೊಲದಲ್ಲಿ ಕೆಲಸಕ್ಕೆ ಹೋಗುತ್ತೇನೆ. ಹಿರಿಯರು ಸೇರಿ ನೀಲಕಂಠ ಜೊತೆ ಮದುವೆ ನಿಶ್ಚಯಿಸಿದ್ದರು. ಸಂಬಂಧಿಕರ ಜೊತೆ ಪತಿಯ ಮನೆಯಿರುವ ಡಂಬಳಕ್ಕೆ ಅರಿಶಿನಕ್ಕೆಂದು ಬುಧವಾರವೇ ನಾವು ಬಂದಿದ್ದೆವು. ಮನೆಯಿಂದ ಬೆಳಿಗ್ಗೆ 7.30ಕ್ಕೆ ಎಲ್ಲರೂ ಟ್ರ್ಯಾಕ್ಟರ್‌ ಏರಿ ಮದುವೆ ನಡೆಯಲಿದ್ದ ದೇವಸ್ಥಾನಕ್ಕೆ ಹೊರಟಿದ್ದೆವು. ನಾನು ಟ್ರ್ಯಾಕ್ಟರ್‌ನಲ್ಲಿ ಮಧ್ಯದಲ್ಲಿ ಕುಳಿತಿದ್ದೆ. ಹಿಂದಿನಿಂದ ಬಂದ ಲಾರಿ ನಾವಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್‌ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿತ್ತು. ಅದಷ್ಟೆ ನನಗೆ ಗೊತ್ತು. ಘಟನೆಯಲ್ಲಿ ಇನ್ನೇನು ಆಗಿದೆ ಎಂದು ಗೊತ್ತಿಲ್ಲ’ ಎಂದು ಮಾಳವ್ವ ಅಮಾಯಕಳಾಗಿ ಹೇಳಿದಳು. ಘಟನೆಯಲ್ಲಿ ಜೊತೆಗಿದ್ದ 10 ಮಂದಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಆಕೆಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಭಾವಿ ಪತಿ ಸಹಿತ ಇತರರಿಗೆ ಏನಾಗಿದೆ ಎಂಬ ಬಗ್ಗೆಯೂ ಆಕೆಗೆ ಮಾಹಿತಿ ಇರಲಿಲ್ಲ.ಅತ್ತ, ಇನ್ನೊಂದು ಮೂಲೆಯ ಬೆಡ್‌ನಲ್ಲಿ ಮಲಗಿದ್ದ ಗೌಂಡಿ ಕಾರ್ಮಿಕ, ನೀಲಕಂಠನ ಸ್ಥಿತಿಯೂ ಅದೇ ಆಗಿತ್ತು. ತಲೆ ಮತ್ತು ಎಡಭುಜಕ್ಕೆ ಗಂಭೀರ ಗಾಯಗೊಂಡಿದ್ದ ನೀಲಕಂಠ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ. ‘ಮದುವೆಗೆ ಹೊರಟಿದ್ದೆವು. ಏನಾಯಿತು ಎಂದು ಗೊತ್ತಿಲ್ಲ’ ಎಂದು ಹೇಳಿದ ನೀಲಕಂಠ, ಒಂದೇ ಸಮನೆ ಕಣ್ಣೀರಿಟ್ಟ. ಘಟನೆಯಲ್ಲಿ ಸಾವು ಸಂಭ­ವಿಸಿದ ಬಗ್ಗೆಯೂ ಆತನಿಗೂ ಯಾರೂ ಹೇಳಿರಲಿಲ್ಲ.ಉಳಿದಂತೆ, ಗಾಯಾಳುಗಳನ್ನು ಹೊರ­ತುಪಡಿಸಿ, ಸಂಬಂಧಕರೆಂದುಕೊಂಡವರು ಆ ಕ್ಷಣಕ್ಕೆ ಕಿಮ್‌್ಸನಲ್ಲಿ ಯಾರೂ ಇರಲಿಲ್ಲ. ಅಕ್ಕಪಕ್ಕದ ಬೆಡ್‌ನಲ್ಲಿ ಗಾಯಗೊಂಡು ನರಳುತ್ತಿ­ರುವವರು, ತಮ್ಮ ಜೊತೆಗೇ ಟ್ರ್ಯಾಕ್ಟರ್‌ನಲ್ಲಿ ಮದುವೆಗೆ ಬಂದವರು ಎಂಬ ಮಾಹಿತಿ ಹೊರತುಪಡಿಸಿದರೆ, ಘಟನೆ ನಡೆದು ಸುಮಾರು ನಾಲ್ಕು ಗಂಟೆ ಕಳೆದಿದ್ದರೂ, ಘಟನೆಯಲ್ಲಿ ಸಾವು ಸಂಭವಿಸಿದ ವಿಷಯ ಅಲ್ಲಿದ್ದವರಿಗೆ ಗೊತ್ತಿರಲಿಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.