ಸೋಮವಾರ, ಏಪ್ರಿಲ್ 19, 2021
32 °C

ಹಾಲಾಡಿ ಸರ್ವಸಮ್ಮತ ಆಯ್ಕೆಯಾಗಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಡುಪಿ ಜಿಲ್ಲೆಯಿಂದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೇ ಸಚಿವ ಸ್ಥಾನ ನೀಡಬೇಕು ಎಂಬುದು ಪಕ್ಷದ ನಾಯಕರ ತೀರ್ಮಾನವಾಗಿತ್ತು. ಆದರೆ, ಪಕ್ಷವೇ ತನ್ನ ನಿರ್ಧಾರವನ್ನು ಬದಲಿಸಿತು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಕೊನೆ ಕ್ಷಣದಲ್ಲಿ ಪಕ್ಷದ ಮುಖಂಡರು ನಿರ್ಧಾರ ಬದಲಿಸಿರುವುದರಿಂದ ತಮಗೆ ಅವಮಾನವಾಗಿದೆ ಎಂದಿರುವ ಶ್ರೀನಿವಾಸ ಶೆಟ್ಟಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಬೆಂಗಳೂರಿಗೆ ಆಹ್ವಾನಿಸಿ, ಅಂತಿಮ ಗಳಿಗೆಯಲ್ಲಿ ಸಚಿವ ಸ್ಥಾನ ನಿರಾಕರಿಸುವ ಮೂಲಕ ಅವಮಾನ ಮಾಡಲಾಗಿದೆ ಎಂದು ಅವರು ಬೇಸರಗೊಂಡಿದ್ದಾರೆ.ಶೆಟ್ಟಿ ಅವರಿಗೆ ಸ್ಥಾನ ದೊರೆಯದಿರುವ ಬಗ್ಗೆಯೇ ಅಸಮಾಧಾನ ಸ್ಫೋಟಗೊಂಡಿದೆ. ಆದರೆ, ಉಡುಪಿ ಜಿಲ್ಲೆಯಿಂದ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಪೂಜಾರಿ ಅವರು, ಸದ್ಯ ಉಡುಪಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಸಮಸ್ಯೆಗೆ ತಕ್ಷಣದ ಪರಿಹಾರ ಕಾಣುತ್ತಿಲ್ಲ. ಪಕ್ಷದ ರಾಜ್ಯ ಮುಖಂಡರು ಕೂಡಲೇ ಮಧ್ಯ ಪ್ರವೇಶಿಸಬೇಕಿದೆ ಎಂದರು.ಶ್ರೀನಿವಾಸ ಶೆಟ್ಟಿ ಅವರೇ ಸಚಿವರಾಗಬೇಕು ಎಂದು ಇಡೀ ಜಿಲ್ಲಾ ಘಟಕ ಬಯಸಿತ್ತು. ಹಾಗಾಗಿ ಸಚಿವರಾಗುವ ಕನಸನ್ನು ತಾವು ಕಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.`ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕರೆ ಮಾಡಿದರು. ಆಗ ಈ ವಿಷಯವನ್ನು ನಾನು ನನ್ನ ಸಹೋದ್ಯೋಗಿಗಳ ಗಮನಕ್ಕೆ ತಂದೆ. ಶೆಟ್ಟಿ ಅವರೇ ತಮ್ಮ ಆಯ್ಕೆಯಾದ ಕಾರಣ ಈ ಆಹ್ವಾನವನ್ನು ಒಪ್ಪಿಕೊಳ್ಳಬಾರದು ಎಂದು ಅವರೆಲ್ಲ ಸೂಚಿಸಿದರು. ಈ ಕಾರಣದಿಂದ ನಾನು ರಾಜಭವನಕ್ಕೆ ಹೋಗದಿರಲು ನಿರ್ಧರಿಸಿದ್ದೆ. ನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಕೂಡ ಕರೆಮಾಡಿ ತಕ್ಷಣ ಬರುವಂತೆ ಸೂಚಿಸಿದರು. ಆಗಲೂ ಹೋಗದಿದ್ದರೆ ಪಕ್ಷದ ವಿರುದ್ಧ ನಡೆದಂತಾಗುತ್ತದೆ ಎಂದು ನಾನು ತೀರ್ಮಾನಿಸಿದೆ. ದೆಹಲಿಯಲ್ಲಿ ನನಗೆ ಯಾವುದೇ ಸಂಪರ್ಕಗಳಿಲ್ಲ. ಆದ್ದರಿಂದ ಸಚಿವ ಪದವಿಗೆ ಲಾಬಿ ನಡೆಸಿರಲಿಲ್ಲ~ ಎಂದರು.`ಶೆಟ್ಟಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಕಾರಣಕ್ಕಾಗಿಯೇ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾನು ಬೆಂಗಳೂರಿಗೆ ಬಂದಿದ್ದೆ. ನನ್ನೊಂದಿಗೆ ಕುಟುಂಬದ ಯಾರನ್ನೂ ಕರೆತಂದಿರಲಿಲ್ಲ. ಈ ಕಾರಣಕ್ಕಾಗಿಯೇ ಕುಟುಂಬದ ಸದಸ್ಯರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿಲ್ಲ~ ಎಂದರು.ಶ್ರೀನಿವಾಸ ಶೆಟ್ಟಿ ಅವರಿಗಾಗಿ ತಾವು ರಾಜೀನಾಮೆ ನೀಡಲು ಸಿದ್ಧವೇ ಎಂಬ ಪ್ರಶ್ನೆಗೆ, `ಸಾಮಾಜಿಕ ನ್ಯಾಯವನ್ನು ಗಮನದಲ್ಲಿ ಇರಿಸಿಕೊಂಡು ಪಕ್ಷ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಪಕ್ಷವೇ ನನ್ನ ರಾಜೀನಾಮೆ ಬಯಸಿದರೆ ನಾನು ಅದಕ್ಕೆ ಸಿದ್ಧ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.