ಬುಧವಾರ, ಏಪ್ರಿಲ್ 14, 2021
25 °C

ಹಾಲಿನ ಬೆಲೆ ಹೆಚ್ಚಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬರದಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ಸಹಕಾರವಾಗುವಂತೆ ಸರ್ಕಾರ ಹಾಲಿನ ಬೆಲೆಯನ್ನು ಹೆಚ್ಚಿಸಲು ಮುಂದಾಗಬೇಕೆಂದು ಕೆಎಂಎಫ್ ನಿರ್ದೇಶಕ ಪಿ. ನಾಗರಾಜು ಮನವಿ ಮಾಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಜನಶ್ರೀ ಬೀಮಾ ವಿಮಾ ಯೋಜನೆಯ ವಿದ್ಯಾರ್ಥಿ ವೇತನದ ಚೆಕ್ಕುಗಳು, ಮೃತಪಟ್ಟ ರಾಸುಗಳ ಪರಿಹಾರದ ಚೆಕ್ಕುಗಳನ್ನು ವಿತರಿಸಿ ಅವರು ಮಾತನಾಡಿದರು.ಮಳೆಯಿಲ್ಲದೇ ಕಂಗಾಲಾಗಿರುವ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ.  ಹೈನುಗಾರಿಕೆ ನಂಬಿರುವ ರೈತರು ಮೇವಿಗಾಗಿ ಪರಿತಪಿಸುತ್ತಿದ್ದಾರೆ. ಒಂದೆಡೆ ಹಸಿರು ಮೇವು ಇಲ್ಲದೇ ಮತ್ತೊಂದೆಡೆ ಹಣ ಕೊಟ್ಟು ಕೊಂಡು ಕೊಳ್ಳಲು ಒಣ ಮೇವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಇತ್ತೀಚಿನ ದಿನಗಳಲ್ಲಿ ಪಶು ಆಹಾರದ ಉತ್ಪಾದನೆಗೆ ಅವಶ್ಯವಿರುವ ಕಚ್ಚಾ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ಮತ್ತು ಹಸಿರು ಮೇವು ಖರೀದಿಸಿ, ಹಾಲು ಉತ್ಪಾದನೆ ಮಾಡುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು, ಹಾಲು ಉತ್ಪಾದಕರ ಕುಟುಂಬ ನೆಮ್ಮದಿ ಜೀವನ ನಡೆಸಲು ಪ್ರತಿ ಲೀಟರ್ ಹಾಲಿಗೆ ರೂ 3 ರಂತೆ ಹಚ್ಚಿಸಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜನಶ್ರೀ ಬೀಮಾ ವಿಮಾ ಯೋಜನೆಯ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮರಣ ಹೊಂದಿದ ರಾಸುಗಳ ವರಸುದಾರರ ಕುಟುಂಬದವರಿಗೂ ಪರಿಹಾರದ ಚೆಕ್ ವಿತರಿಸಲಾಯಿತು. ಬಮೂಲ್ ರಾಮನಗರ ಶಿಬಿರದ ಉಪ ವ್ಯವಸ್ಥಾಪಕ ಜಿ.ಮಾಯಣ್ಣ, ವಿಸ್ತರಣಾಧಿಕಾರಿಗಳಾದ ಕೆ.ಎನ್.ನಂಜಯ್ಯ, ಶ್ರೀಕಂಠಯ್ಯ, ರಮೇಶ್, ಅಪ್ಪಾಜಪ್ಪ, ಕೃಷ್ಣಪ್ಪ, ಸುಗ್ಗನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ರಾಮಯ್ಯ, ಅರ್ಚಕರಹಳ್ಳಿ ಸಂಘದ ರಾಮಯ್ಯ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.