ಹಾಲಿವುಡ್ ಎಂಬ ಮಾಯಾಂಗನೆ

ವಿಶ್ವದೆಲ್ಲೆಡೆಯ ಸಿನಿಮಾ ಪ್ರೇಮಿಗಳು ಇಂಗ್ಲಿಷ್ ಚಿತ್ರರಂಗವನ್ನು ಗುರುತಿಸುವುದೇ `ಹಾಲಿವುಡ್~ ಎಂದು (ನಮ್ಮಲ್ಲಿ ಕನ್ನಡ ಚಿತ್ರರಂಗಕ್ಕೆ `ಸ್ಯಾಂಡಲ್ವುಡ್~ , ಹಿಂದಿಗೆ `ಬಾಲಿವುಡ್~ ಇದೆಯಲ್ಲ ಹಾಗೆ). ಹಾಗಿದ್ದರೆ ಏನಿದು ಹಾಲಿವುಡ್?
ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ದಕ್ಷಿಣ ಭಾಗದಲ್ಲಿನ ಲಾಸ್ ಎಂಜೆಲ್ಸ್ ಎಂಬ ಮಹಾನಗರಿಯನ್ನು ಉತ್ತರದ ಕಡೆಯಿಂದ ಪ್ರವೇಶಿಸುವಾಗ ಎಡಭಾಗದಲ್ಲಿ ಎತ್ತರದ ಮೌಂಟ್ ಲೀ ಬೆಟ್ಟದ ಮೇಲೆ ಎದ್ದು ಕಾಣುವ ಬಿಳಿ ಬಣ್ಣದ `ಹಾಲಿವುಡ್~ ಎಂಬ 9 ಅಕ್ಷರದ ಬೃಹತ್ ಫಲಕ ಇಡಿ ವಿಶ್ವವನ್ನೇ ಬೆರಗುಗೊಳಿಸಿದೆ.
ನಿತ್ಯ 40-50 ಸಾವಿರ ಪ್ರವಾಸಿಗಳನ್ನು ಚುಂಬಕದಂತೆ ಸೆಳೆಯುತ್ತಿದೆ. ಬೆಟ್ಟದ ಸುತ್ತ ಬೆಳೆದ ಸಿನಿಮಾ ಸ್ಟುಡಿಯೋಗಳೇ ಅದಕ್ಕೆ ಎಲ್ಲಿಲ್ಲದ ಮಹತ್ವ ತಂದುಕೊಟ್ಟಿವೆ.
ಅಷ್ಟಕ್ಕೂ ಹಾಲಿವುಡ್ ಬುಲೇವಾರ್ಡ್ ಕಮರ್ಷಿಯಲ್ ಅಂಡ್ ಎಂಟರ್ಟೇನ್ಮೆಂಟ್ ಡಿಸ್ಟ್ರಿಕ್ ಎಂಬ ಹೆಸರು ಹೊತ್ತ ಈ ಪುಟ್ಟ ಪ್ರದೇಶದ ಆಕರ್ಷಣೆಯೇ ಅಂಥದ್ದು. ಜನಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ ಬಹುಪಾಲು ವೈಭವೋಪೇತ, ಸಾಹಸಮಯ, ರೋಮಾಂಚಕಾರಿ, ಪ್ರೀತಿ ಪ್ರಣಯದ ಸಹಸ್ರಾರು ಇಂಗ್ಲಿಷ್ ಚಿತ್ರಗಳು ತಯಾರಾಗಿದ್ದು ಇಲ್ಲಿ.
ಬೃಹತ್ ಸಿನಿಮಾ ತಯಾರಿಕಾ ಸಂಸ್ಥೆಗಳಾದ ಪ್ಯಾರಾಮೌಂಟ್, ಯುನಿವರ್ಸಲ್, ವಾರ್ನರ್ ಬ್ರದರ್ಸ್, ಆರ್ಕೆಒ ಮತ್ತು ಕೊಲಂಬಿಯಾದ ಸ್ಟುಡಿಯೊಗಳು ಇಲ್ಲಿವೆ. ಜಾಸ್, ಜುರಾಸಿಕ್ ಪಾರ್ಕ್, ಟರ್ಮಿನೇಟರ್, ಕಿಂಗ್ಕಾಂಗ್ 360 ಡಿ 3 ಡಿ ಮುಂತಾದವು ಸಿನಿಮಾಗಳು ತಯಾರಾಗಿದ್ದು ಹೇಗೆ ಎಂಬುದನ್ನು ಈಗಲೂ ಪ್ರವಾಸಿಗಳಿಗೆ ತೋರಿಸುವ ವ್ಯವಸ್ಥೆ ಇಲ್ಲಿದೆ.
ಸ್ಟುಡಿಯೊಗಳನ್ನೆಲ್ಲ ನೋಡಿ ಬೆಟ್ಟ ಇಳಿದು ಬಂದರೆ ಹಾಲಿವುಡ್ ಬುಲೇವಾರ್ಡ್ ಸಿಗುತ್ತದೆ.ಸದಾ ಜನಸಂಚಾರದಿಂದ ತುಂಬಿರುವ, ಚಟುವಟಿಕೆಯ ಕೇಂದ್ರವಾಗಿರುವ ಈ ರಸ್ತೆಯ ಒಂದು ಪುಟ್ಟ ಭಾಗವೇ ವಿಶ್ವವಿಖ್ಯಾತ `ವಾಕ್ ಆಫ್ ಫೇಮ್~.
ಇಂಗ್ಲಿಷ್ ಚಿತ್ರರಂಗದ 2300ಕ್ಕೂ ಹೆಚ್ಚು ಖ್ಯಾತನಾಮ ಹೆಸರುಗಳನ್ನು ನಕ್ಷತ್ರ ಆಕಾರದ ಹಿತ್ತಾಳೆಯಲ್ಲಿ ಬರೆದು ಇಲ್ಲಿ ಫುಟ್ಪಾತ್ ಉದ್ದಕ್ಕೂ ಮೊಳೆ ಬಡಿದು ಅಳವಡಿಸಿದ್ದಾರೆ. ಯಾರ ಹೆಸರಿನ ನಕ್ಷತ್ರ ಇಲ್ಲಿರಬೇಕು ಎಂಬುದನ್ನು ನಿರ್ಧರಿಸುವುದು ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್. ಅದಕ್ಕಾಗಿಯೇ ಸಿನಿಮಾ ಮಂದಿ ಪಾಲಿಗೆ ಅವರ ಹೆಸರಿನ ನಕ್ಷತ್ರ ಇದ್ದರೆ ಅದು ಅತ್ಯಂತ ಪ್ರತಿಷ್ಠೆಯ ಸಂಗತಿ.
ಅಭಿಮಾನಿಗಳು ತಮ್ಮ ಮೆಚ್ಚಿನ ನಟ, ನಟಿ, ನಿರ್ದೇಶಕನ ಹೆಸರನ್ನು ಹುಡುಕುತ್ತ, ಕಣ್ಣಿಗೆ ಬಿದ್ದಾಗ ಖುಷಿಪಡುವುದನ್ನು ನೋಡಬೇಕು.
ಇದೇ ಫುಟ್ಪಾತ್ನಲ್ಲಿ ಇರುವ ಇನ್ನೆರಡು ಮಹತ್ವದ ಸ್ಥಳಗಳೆಂದರೆ ವಿಶ್ವದಲ್ಲಿಯೇ ಅತ್ಯಂತ ಪ್ರತಿಷ್ಠಿತ ಎನ್ನಲಾಗುವ ಗ್ರೌಮನ್ಸ್ ಚೈನೀಸ್ ಥಿಯೇಟರ್ ಮತ್ತು ಕೊಡಾಕ್ ಥಿಯೇಟರ್. ಸಿಡ್ ಗ್ರೌಮನ್ 1927ರಲ್ಲಿ ಕಟ್ಟಿಸಿದ ಥಿಯೇಟರ್ ಚೀನಿ ಪಗೋಡಾ ಮಾದರಿಯಲ್ಲಿದೆ. ಹಾಲಿವುಡ್ನ ಬಹುಪಾಲು ಚಿತ್ರಗಳನ್ನು ಪ್ರದರ್ಶಿಸಿದ ಕೀರ್ತಿ ಇದರದ್ದು.
1958ರಲ್ಲಿ ಗ್ರೌಮನ್ ತನ್ನ ಥಿಯೇಟರ್ ಎದುರು ವಾಕ್ ಆಫ್ ಫೇಮ್ ಸೃಷ್ಟಿಸಿ ಹೆಸರಾಂತ ನಟ ನಟಿಯರಿಗಾಗಿ ಅದನ್ನು ಮೀಸಲಿಟ್ಟಿದ್ದ. ಮೊದಲು ಆಸ್ಕರ್ ಪ್ರಶಸ್ತಿ ಪ್ರದಾನ ನಡೆಯುತ್ತಿದ್ದುದು ಇದೇ ಥಿಯೇಟರ್ನಲ್ಲಿ.
2001ರಲ್ಲಿ ಸುಮಾರು 940 ಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣವಾದ ಅತ್ಯಾಧುನಿಕ ಕೊಡಾಕ್ ಥಿಯೇಟರ್ (3400 ಆಸನ) ಈಗ ಆಸ್ಕರ್ ಪ್ರಶಸ್ತಿ ಪ್ರದಾನದ ಸ್ಥಳ ಎಂದೇ ವಿಶ್ವವಿಖ್ಯಾತ. ಇದರ ಸನಿಹದಲ್ಲಿಯೇ ಇದೆ ಸುರಸುಂದರಿ ನಟಿ ಮರ್ಲಿನ್ ಮನ್ರೋಳ ಉಡುಪು, ಚಿತ್ರರಂಗದ ಸ್ಮರಣಿಕೆಗಳನ್ನು ಒಳಗೊಂಡ ವಸ್ತುಸಂಗ್ರಹಾಲಯ.
ಹಾಲಿವುಡ್ ಚಿತ್ರ ತಾರೆಗಳ ಮನೆಗಳಿರುವ ಬೆವರ್ಲಿ ಹಿಲ್ಸ್, ಈ ತಾರೆಗಳು ಶಾಪಿಂಗ್ ಮಾಡುವ ರೋಡಿಯೋ ಡ್ರೈವ್ ರಸ್ತೆಯ ಇಕ್ಕೆಲಗಳ ಅದ್ದೂರಿ ಮಳಿಗೆಗಳನ್ನು (ಇದು ವಿಶ್ವದ ಅತ್ಯಂತ ದುಬಾರಿ ವಸ್ತುಗಳ ದುಬಾರಿ ರಸ್ತೆ ಎಂದೇ ಹೆಸರುವಾಸಿ) ನೋಡದಿದ್ದರೆ ಹಾಲಿವುಡ್ ಪ್ರವಾಸ ಮುಗಿಯುವುದಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.