ಮಂಗಳವಾರ, ಜೂನ್ 15, 2021
24 °C

ಹಾಸನದ ಅಭ್ಯರ್ಥಿ ಅಂಧ ಸ್ವಾಮೀಜಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡೂ ಕಣ್ಣು ಕಾಣಿಸದ ಅಂಧ ಸ್ವಾಮೀಜಿಯೊಬ್ಬರನ್ನು ಹಾಸನ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ‘ರೋಗದಿಂದ ಯೋಗದೆಡೆಗೆ’ ಎಂಬ ಹೆಸರಿನ ಶಿಬಿರಗಳನ್ನು ರಾಜ್ಯದಾದ್ಯಂತ ನಡೆಸಿ ಜನಪ್ರಿಯತೆ ಗಳಿಸಿರುವ ಶ್ರೀಗುರು ಬಸವ ಮಹಾಮನೆ ಮಠದ ಬಸವಾ­ನಂದ ಸ್ವಾಮೀಜಿ ಅವ­­ರಿಗೆ ಟಿಕೆಟ್‌ ಕೊಡುವ ಬಗ್ಗೆ ಪಕ್ಷದಲ್ಲಿ ಸಮಾಲೋಚನೆಗಳು ನಡೆದಿವೆ.ರಕ್ತದ ಕ್ಯಾನ್ಸರ್‌ ಸೇರಿದಂತೆ ಹಲವು ಗಂಭೀರ ರೋಗಗಳಿಗೆ ಚಿಕಿತ್ಸೆ ನೀಡುತ್ತಿರುವ ಸ್ವಾಮೀಜಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಗೋಣಿ ಸೋಮನ­ಹಳ್ಳಿ­ಯವರು. ಇವರ ಮೂಲ ಮಠ ಇರುವುದು ಧಾರ­ವಾಡದ ಮನಗುಂಡಿ ಗ್ರಾಮದಲ್ಲಿ.

2009ರಲ್ಲಿ ಬೇಲೂರಿನ ಶಿವಪುರದಲ್ಲಿ ಮಠದ ಶಾಖೆ ಆರಂಭಿಸಿದ ಅವರು ಯೋಗ ಮತ್ತು ನಿಸರ್ಗ ಉಪಚಾರದ ಮೂಲಕ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಉಪವಾಸವೇ ಅನೇಕ ರೋಗಗಳಿಗೆ ಮದ್ದು ಎಂದು ಹೇಳಿದ್ದಾರೆ.ಮೈಸೂರಿನಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿರುವ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿ. ಅವರು ಈ ದೇಶದ ಪ್ರಧಾನಿಯಾಗ­ಬೇಕು ಎನ್ನುವ ಕಾರಣಕ್ಕೆ ರಾಜಕೀಯ ರಂಗ ಪ್ರವೇಶಿಸಲು ತೀರ್ಮಾನಿಸಿದ್ದಾರೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಸ್ವಾಮೀಜಿಯವರು ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಟಿಕೆಟ್‌ ಸಲುವಾಗಿ ಪಕ್ಷದ ಎಲ್ಲ ಮುಖಂಡರ ಮನೆ ಬಾಗಿಲಿಗೆ ಎಡತಾಕಿದ್ದಾರೆ.ಸ್ವಾಮೀಜಿಯವರ ಆಸಕ್ತಿ ನೋಡಿ ಬೆರಗಾಗಿರುವ ಬಿಜೆಪಿ ಮುಖಂಡರು ‘ಒಂದು ಕೈ ನೋಡಿ ಬಿಡೋಣ’ ಎನ್ನುವ ತೀರ್ಮಾನಕ್ಕೆ ಬಂದಂತಿದೆ. ಹಾಸನದಲ್ಲಿ ಒಕ್ಕಲಿಗರನ್ನು ಬಿಟ್ಟರೆ ಅತಿ ಹೆಚ್ಚು ಮತದಾರರು ಇರುವುದು ಲಿಂಗಾಯತರು. ಈ ಕಾರಣಕ್ಕೆ ಲಿಂಗಾಯತರ ಮತಗಳ ಮೇಲೆ ಕಣ್ಣಿಟ್ಟು ಸ್ವಾಮೀಜಿಯವರನ್ನು ಕಣಕ್ಕೆ ಇಳಿಸಿದರೆ ಹೇಗೆ ಎನ್ನುವ ಲೆಕ್ಕಾಚಾರವೂ ನಡೆದಿದೆ.

ಹಾಸನದಲ್ಲಿ ಬಿಜೆಪಿಗೆ ನೆಲೆ ಇಲ್ಲದ ಕಾರಣ ಈ ಹೊಸ ಪ್ರಯೋಗಕ್ಕೆ ಪಕ್ಷ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಕಣಕ್ಕೆ ಇಳಿಯಲು ಸಿದ್ದ: ‘ಬಿಜೆಪಿ ಟಿಕೆಟ್‌ ಕೊಟ್ಟರೆ ಚುನಾವಣಾ ರಾಜಕೀಯಕ್ಕೆ ಇಳಿಯಲು ಸಿದ್ಧ ಇದ್ದೇನೆ. ಹಾಸನ ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿವೆ. ಮೂಲ­ಸೌಲಭ್ಯಗಳ ಕೊರತೆ ಇದೆ. ನನಗೆ ಕಣ್ಣು ಕಾಣಿಸದಿದ್ದರೂ ಸಮಸ್ಯೆಗಳು ಏನು ಎನ್ನುವುದು ಚೆನ್ನಾಗಿ ಗೊತ್ತಿದೆ. ಈ ಕಾರಣಕ್ಕೆ ನನಗೆ ಟಿಕೆಟ್‌ ಕೊಡಿ ಎನ್ನುವ ಬೇಡಿಕೆಯನ್ನು ಬಿಜೆಪಿ ವರಿಷ್ಠರ ಮುಂದೆ ಇಟ್ಟಿದ್ದೇನೆ. ಟಿಕೆಟ್‌ ಕೊಟ್ಟರೆ ಗೆಲ್ಲುವುದು ಕೂಡ ಖಚಿತ’ ಎಂದು ಬಸವಾನಂದ ಸ್ವಾಮೀಜಿ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.ರಕ್ಷಿತಾಗೆ ಟಿಕೆಟ್‌ ನಕಾರ?

ಬೆಂಗಳೂರು:
ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ನಟಿ ರಕ್ಷಿತಾ ಆಸಕ್ತಿ ತೋರಿದ್ದರೂ ಅವರಿಗೆ ಟಿಕೆಟ್‌ ನೀಡದಿರಲು ಬಿಜೆಪಿ ತೀರ್ಮಾನಿಸಿದೆ.ಸಿನಿಮಾ ನಟ– ನಟಿಯರಿಗೆ ಟಿಕೆಟ್‌ ನೀಡುವುದಕ್ಕಿಂತ ಪಕ್ಷದ ಕಾರ್ಯಕ­ರ್ತರಿಗೆ ಟಿಕೆಟ್‌ ನೀಡುವುದು ಉತ್ತಮ ಎನ್ನುವ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ.ಈ ಕಾರಣಕ್ಕೆ ರಕ್ಷಿತಾ ಅವರಿಗೆ ಟಿಕೆಟ್‌ ನೀಡುವುದು ಅನುಮಾನ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಂಡ್ಯ ಮೂಲದ ಬಜರಂಗದಳ ಕಾರ್ಯಕರ್ತ ಮಂಜುನಾಥ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.