ಗುರುವಾರ , ಫೆಬ್ರವರಿ 25, 2021
19 °C

ಹಾಸ್ಟೆಲ್‌ಗಳಿಗೆ ಜಿಲ್ಲಾಧಿಕಾರಿ, ಸಿಇಒ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸ್ಟೆಲ್‌ಗಳಿಗೆ ಜಿಲ್ಲಾಧಿಕಾರಿ, ಸಿಇಒ ಭೇಟಿ

ರಾಮನಗರ: ಜಿಲ್ಲಾಧಿಕಾರಿ ಬಿ.ಆರ್. ಮಮತಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಶೈಲಜಾ ಅವರು ಶನಿವಾರ ತಾಲ್ಲೂಕಿನ ಯರೇಹಳ್ಳಿಯ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಸಮಾಜ ಕಲ್ಯಾಣ ಇಲಾಖೆಯ ಗಿರಿಜನ ಆಶ್ರಮ ಶಾಲೆ ಹಾಗೂ ಕೂಟಗಲ್‌ನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.‘ಜಿಲ್ಲೆಯ ಪ್ರತಿಯೊಂದು ಹಾಸ್ಟೆಲ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಈ ಅಧಿಕಾರಿಗಳು ಆಗಾಗ್ಗೆ ಹಾಸ್ಟೆಲ್ ಸ್ಥಿತಿಗತಿಗಳ ಕುರಿತು ಜಿ.ಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು.

ಇಲಾಖೆಗಳ ಅನುದಾನ ಹಾಗೂ ಇತರೆ ಮೂಲಗಳಿಂದ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಸಂಬಂಧ ಆಸಕ್ತಿ ವಹಿಸಿ ಅಧಿಕಾರಿಗಳು ಹಾಸ್ಟೆಲ್‌ಗಳ ಅಭಿವೃದ್ಧಿಗೆ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ವಿವರಿಸಿದರು.ತುರ್ತಾಗಿ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳನ್ನು ಅನುದಾನದ ಕೊರತೆಯಿಂದ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಅಂತಹವುಗಳ ಪಟ್ಟಿ ತಯಾರಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಂಗೇಗೌಡ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಕಾರ್ಪೋರೇಟ್ ಕಂಪೆನಿಗಳ ಸಿಎಸ್‌ಆರ್ ನಿಧಿಯಿಂದ ಸೌಕರ್ಯ ಒದಗಿಸಲು ಚಿಂತಿಸಲಾಗಿದೆ ಎಂದರು.‘ಅನಗತ್ಯವಾಗಿ ಮಕ್ಕಳನ್ನು ಹಾಸ್ಟೆಲ್‌ಗಳಿಂದ ಹೊರಗಾಗಲಿ ಅಥವಾ ಊರಿಗಾಗಲಿ ಕಳುಹಿಸಬಾರದು. ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತ್ರಿ ಕಡ್ಡಾಯವಾಗಿ ಪಾಲಿಸಬೇಕು. ಮಕ್ಕಳು ಹೊರಗೆ ಹೋದ ಸಂದರ್ಭ ಅವರಿಗೆ ತೊಂದರೆ ಆದರೆ ಅದಕ್ಕೆ ನಿಲಯಪಾಲಕರೇ ಹೊಣೆ’ ಎಂದು ಅವರು ಎಚ್ಚರಿಸಿದರು.‘ಒಡೆದಿರುವ ಕಿಟಕಿ ಗಾಜುಗಳನ್ನು ಆಗ್ಗಿಂದಾಗ್ಗೆ ಸರಿಪಡಿಸಿಕೊಳ್ಳಬೇಕು. ವಯರಿಂಗ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಅಕ್ಕಿಯನ್ನು ಸರಿಯಾಗಿ ಎರಡು ಮೂರು ಬಾರಿ ತೊಳೆದು ಅಡುಗೆಗೆ ಬಳಸಬೇಕು. ವಿದ್ಯಾರ್ಥಿಗಳಿಗೆ ಕಾಟ್ ಅಥವಾ ಮಂಚದ ವ್ಯವಸ್ಥೆ ಮಾಡಬೇಕು.ಚಾಪೆಯ ಮೇಲೆ ಮಲಗುವುದರಿಂದ ಶೀತದ ವಾತಾವರಣದಲ್ಲಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಶೀಘ್ರವಾಗಿ ಮಂಚದ ವ್ಯವಸ್ಥೆ  ಕಲ್ಪಿಸಬೇಕು’ ಎಂದು ಸೂಚಿಸಿದರು.ನಿಲಯದ ಸಿಬ್ಬಂದಿ ಮಕ್ಕಳಿಗೆ ಶುಚಿತ್ವದ ಕುರಿತು ಹೇಳಿಕೊಡಬೇಕು. ಶೌಚಾಲಯ, ಸ್ನಾನದ ಗೃಹಗಳನ್ನು ಬಳಸಿದ ನಂತರ ಸರಿಯಾಗಿ ನೀರು ಹಾಕುವುದನ್ನು ಹೇಳಿಕೊಡಬೇಕು. ಹಾಸ್ಟೆಲ್ ಆವರಣದಲ್ಲಿ ತೋಟಗಾರಿಕೆ ಕೈಗೊಳ್ಳುವ ಸಂಬಂಧ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.