ಹಾಸ್ಯದ ಹುಡುಕಾಟ ಹೊಸ ಪರದಾಟ

ಭಾನುವಾರ, ಮೇ 26, 2019
27 °C

ಹಾಸ್ಯದ ಹುಡುಕಾಟ ಹೊಸ ಪರದಾಟ

Published:
Updated:

ಎಲ್ಲಾ ಮಾತುಗಳನ್ನೂ ಒಂದೇ ಉಸಿರಲ್ಲಿ ತಾವೊಬ್ಬರೇ ಹೇಳುಬಿಡುವಷ್ಟು ಧಾವಂತದಲ್ಲಿ ನಿರ್ದೇಶಕ ಸಂಗೀತ್ ಸಾಗರ್ ಇದ್ದರು. ಅವರಿಗೆ ಚಿತ್ರಕಥೆಯನ್ನು ನೀಡಿರುವ ರಾಜಶೇಖರ ಚಟ್ಣಳ್ಳಿ ಮುಖದಲ್ಲೂ ಮಂದಹಾಸ. ನಟರಾಗಿ ಕಚಗುಳಿ ಇಡುವ ರವಿಶಂಕರ್ ಮಾತ್ರ ಯಾಕೋ ಗಂಭೀರವದನರಾಗಿದ್ದರು. `ಪರದಾಟ~ ಚಿತ್ರದ ಮುಹೂರ್ತ ಅದ್ದೂರಿಯಾಗಿಯೇನೂ ಇರಲಿಲ್ಲ. ಆದರೆ, ತಂಡದವರೆಲ್ಲಾ ಪರಸ್ಪರ ಅತ್ಯಾಪ್ತತೆಯಿಂದ ಇದ್ದರು.`ಕೋಲ್ಮಿಂಚು~, `ಸವಿಗನಸು~ ಚಿತ್ರಗಳನ್ನು ಈಗಾಗಲೇ ನಿರ್ದೇಶಿಸಿದ ಅನುಭವ ಬೆನ್ನಿಗಿಟ್ಟುಕೊಂಡಿರುವ ಸಂಗೀತ್ ಸಾಗರ್ ಎಲ್ಲರಂತೆ ಕಥೆ ಹೇಳಲು ನಿರಾಕರಿಸಿದರು. ಇಡೀ ಚಿತ್ರದ ಏಕಮೇವ ಉದ್ದೇಶ ನಗಿಸುವುದಷ್ಟೆ ಎಂದರು. ಆರು ಹಾಡುಗಳಿರುವ ಈ ಚಿತ್ರದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ.ಗೋಕರ್ಣ, ಶಿರಸಿ, ಮುರುಡೇಶ್ವರ, ಸಕಲೇಶಪುರದ ಕೆಲವು ಲೊಕೇಷನ್‌ಗಳನ್ನು ಹಾಡುಗಳಲ್ಲಿ ಬಳಸಿಕೊಳ್ಳುವುದು ಅವರ ಉದ್ದೇಶ. ಸಂಗೀತ ನಿರ್ದೇಶಕನ ಕುರ್ಚಿಯನ್ನೂ ಸಂಗೀತ್ ಸಾಗರ್ ಅವರೇ ಅಲಂಕರಿಸಿರುವುದು ವಿಶೇಷ.

 

`ಅವನಂದ್ರೆ ಅವನೇ~, `ಓ ಪ್ರೀತಿಯೇ~, `ಮೌನರಾಗ~, `ಪ್ರೀತಿಗೆ ಥ್ಯಾಂಕ್ಸ್~ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಕೂಡ ಅವರದ್ದು. ಮೂಲತಃ ಅವರು ಸಂಗೀತ ನಿರ್ದೇಶಕರೇ ಹೌದು.ಸಂಪೂರ್ಣ ಮನರಂಜನೆ ಕೊಡುವ ಈ ಚಿತ್ರವನ್ನು ಪೂರ್ತಿ ಭಿನ್ನವೇನೂ ಅಲ್ಲ ಎಂದು ಪ್ರಾಮಾಣಿಕವಾಗಿ ಬಣ್ಣಿಸಿದವರು ನಟ ರವಿಶಂಕರ್. ಎಲ್ಲರೂ ತನ್ನನ್ನು ಗುರುತಿಸಬೇಕು ಎಂಬ ಆಸೆಯಿಂದ ನಾಯಕ ಮಾಡುವ ಕೆಲಸಗಳಲ್ಲೇ ಸಹಜವಾದ ಹಾಸ್ಯ ಸ್ಫುರಿಸುವಂತೆ ಚಿತ್ರಕಥೆಯನ್ನು ಹೆಣೆಯಲಾಗಿದೆ ಎನ್ನುವ ರವಿಶಂಕರ್‌ಗೆ ನಿರೂಪಣೆಯಲ್ಲೇ ಆಟ ಆಡುವ ನಿರ್ದೇಶಕರ ಉಮೇದು ಅರ್ಥವಾಗಿದೆಯಂತೆ.`ಸಿಲ್ಲಿ ಲಲ್ಲಿ~ ಹಾಸ್ಯ ಧಾರಾವಾಹಿಯ ಕೆಲವು ಕಂತುಗಳ ಪರಿಕಲ್ಪನೆಯ ಹಕ್ಕುದಾರರಾದ ರಾಜಶೇಖರ್ ಚಟ್ಣಳ್ಳಿಯವರ ಜಾಣತನವನ್ನು ರವಿಶಂಕರ್ ಮೆಚ್ಚಿಕೊಂಡರು.ಚಿತ್ರದ ನಾಯಕಿ ಸುಷ್ಮಾ. ತನ್ನನ್ನು ಪ್ರೀತಿಸು ಎಂದು ನಾಯಕನಿಗೆ `ಟಾರ್ಚರ್~ ಕೊಡುವ ಪಾತ್ರಕ್ಕೆ ಜೀವತುಂಬುವ ತವಕದಲ್ಲಿ ಅವರಿದ್ದರು.`ಪೆರೋಲ್~, `ಹುಡುಗ ಹುಡುಗಿ~ ಚಿತ್ರಗಳಲ್ಲಿ ಕ್ಯಾಮೆರಾ ಕೈಚಳಕ ತೋರಿರುವ ಗುಂಡ್ಲುಪೇಟೆ ಸುರೇಶ್ ಈ ಚಿತ್ರದ ಛಾಯಾಗ್ರಾಹಕ. ದೊಡ್ಡಬಳ್ಳಾಪುರದಲ್ಲಿ ಭೂವ್ಯವಹಾರ ನಡೆಸುವ ನಯನ್ ಸತೀಶ್ ಚಿತ್ರರಂಗದಲ್ಲೂ ಒಂದು ಕೈ ನೋಡೋಣ ಎಂದುಕೊಂಡು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.ಗೆಳೆಯ ಶಶಾಂಕ್ ರಾಜ್ ಕಾರ್ಯಕಾರಿ ನಿರ್ಮಾಪಕರಾಗಿ ಅವರಿಗೆ ಸಾಥ್ ನೀಡಲಿದ್ದಾರೆ. ಸಂಭಾಷಣೆಯನ್ನೂ ರಾಜಶೇಖರ್ ಚಟ್ಣಳ್ಳಿ ಬರೆದಿದ್ದು, ಒಂದೂಕಾಲು ಕೋಟಿ ರೂಪಾಯಿಯಲ್ಲಿ ಸಿನಿಮಾ ಮುಗಿಸುವುದು ತಂಡದ ಬಯಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry