ಭಾನುವಾರ, ಆಗಸ್ಟ್ 9, 2020
21 °C

ಹಿತ್ತಲ ಹೂ ಸೌಮ್ಯಾ

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

ಹಿತ್ತಲ ಹೂ ಸೌಮ್ಯಾ

ಸುಂದರ ಶರೀರ, ಮಾದಕ ಶಾರೀರ ಎನ್ನುವ ವಿಶೇಷಣ ಸೌಮ್ಯಾ ರಾವ್ ಅವರಿಗೆ ಹೊಂದುವಂತಹದ್ದು. ಮಾದಕ ಕಂಠದ ಗಾಯಕಿ ಎಂದೇ ಅವರು ಪ್ರಸಿದ್ಧರು. ಬಾಲಿವುಡ್, ತೆಲುಗು, ತಮಿಳಿನಲ್ಲಿ ಅವಕಾಶಗಳನ್ನು ಪಡೆಯುತ್ತಿರುವ ಇವರು ಅಪ್ಪಟ ಕನ್ನಡದವರು. ಅದರಲ್ಲೂ ಗಾಯಕಿ ಬಿ.ಕೆ.ಸುಮಿತ್ರಾ ಅವರ ಪುತ್ರಿ. ಆದರೂ ಕನ್ನಡದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳು ಇಲ್ಲ. ಅದಕ್ಕೆ ಕಾರಣ ಸೌಮ್ಯಾ ಅವರಿಗೂ ತಿಳಿದಿಲ್ಲ.

`ಕನ್ನಡದಲ್ಲಿ ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನಸ್ಥಿತಿ ಇದೆ. ಕೆಲವರಲ್ಲಿ `ಇವಳು ನಮ್ಮ ಕನ್ನಡದ ಹುಡುಗಿ ಅಲ್ವಾ ಬಿಡು~ ಎಂಬ ಉದಾಸೀನವೂ ಇದೆ. ಮತ್ತೆ ಕೆಲವರಲ್ಲಿ `ನಮ್ಮ ಕನ್ನಡದ ಹುಡುಗಿ ಸೌಮ್ಯಾ ಬೇರೆ ಕಡೆ ಹೆಸರು ಮಾಡುತ್ತಿದ್ದಾಳೆ~ ಎಂಬ ಹೆಮ್ಮೆಯೂ ಇದೆ. ಎರಡೂ ರೀತಿಯ ಅನುಭವಗಳೂ ನನಗಾಗಿವೆ~ ಎಂದು ನಗುವ ಸೌಮ್ಯಾ ಇತ್ತೀಚೆಗೆ `ವಿಷ್ಣುವರ್ಧನ~ ಚಿತ್ರದ `ಎದೆಯೊಳಗೆ ಗಿಟಾರು..~ ಹಾಡಿದ್ದಾರೆ.

`ಜಂಗ್ಲಿ~ ಚಿತ್ರದ `ಹಳೆ ಪಾತ್ರೆ ಹಳೆ ಕಬ್ಣ..~, `ಅಭಿ~ ಚಿತ್ರದ `ಸುಮ್ ಸುಮ್ಮೆ ಓಳು..~, `ಬಿಂದಾಸ್~ ಚಿತ್ರದ `ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..~ ಅವರು ಕನ್ನಡದಲ್ಲಿ ಹಾಡಿರುವ ಜನಪ್ರಿಯ ಹಾಡುಗಳು.

`ತಮಿಳು, ತೆಲುಗು, ಕನ್ನಡ, ಹಿಂದಿಯಲ್ಲಿ ಸ್ವಲ್ಪ ಸ್ವಲ್ಪ ಹಾಡುತ್ತಾ ತಿರುಗಾಡುತ್ತಿದ್ದೇನೆ. ಮುಂಬೈನಲ್ಲಿ ನೆಲೆಸಿದ್ದೇನೆ. ಅಲ್ಲಿಯೇ ಹೆಚ್ಚು ಅವಕಾಶಗಳಿವೆ~ ಎನ್ನುವ ಈ ಗಾಯಕಿ ಡಬ್ಬಿಂಗ್ ಕಲಾವಿದೆಯಾಗಿ ವೃತ್ತಿ ಆರಂಭಿಸಿದವರು.

ಸಂಗೀತ ಕಲಿಯುವ ಮುಂಚೆಯೇ ಸ್ವರ ಜ್ಞಾನ ಅರಿತಿದ್ದ ಸೌಮ್ಯಾಗೆ ಅಮ್ಮ ಹಾಡುತ್ತಿದ್ದುದು ತಾನಾಗಿ ಒಲಿದು ಬಂತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಅವರು ಆರು ವರ್ಷದವರಿದ್ದಾಗ ಮಕ್ಕಳ ಗೀತೆಗಳ ಆಲ್ಬಂಗೆ ಹಾಡುವ ಮೂಲಕ ವೃತ್ತಿ ಆರಂಭಿಸಿದರು. ಓದುತ್ತಾ ಹಾಡುತ್ತಾ ಕಾಲೇಜು ಮೆಟ್ಟಿಲೇರಿದ ಸೌಮ್ಯಾ ಪದವಿ ಮುಗಿಸಿ ಹಿನ್ನೆಲೆ ಗಾಯನವನ್ನೇ ವೃತ್ತಿಯಾಗಿ ಸ್ವೀಕರಿಸಿದರು.

`ನಾನು ಯಾವುದನ್ನು ಪ್ಲಾನ್ ಮಾಡಿರಲಿಲ್ಲ. ಅವಕಾಶಗಳು ಹುಡುಕಿಕೊಂಡು ಬಂದವು. ಬದುಕು ಬಂದಂತೆ ಸ್ವೀಕರಿಸುತ್ತಾ ಹೋದೆ. ಕಾಲೇಜಿನಲ್ಲಿ ಇರುವಾಗ ಹಾಡಿದರೆ ಹಣ ಸಿಗುತ್ತದೆ ಎನ್ನುವುದೇ ಖುಷಿಯಾಗಿತ್ತು. ಬಂದ ಹಣದಲ್ಲಿ ಗೆಳತಿಯರೊಂದಿಗೆ ಪಿಕ್ಚರ್‌ಗೆ ಹೋಗ್ತಿದ್ದೆ. ರೆಸ್ಟೋರೆಂಟ್‌ಗೆ ಹೋಗ್ತಿದ್ದೆ~ ಎಂದು ನಗುವ ಸೌಮ್ಯಾ, ಕಾಲೇಜು ದಿನಗಳಲ್ಲಿ ಹಾಡಿ 150 ರೂಪಾಯಿ ಸಂಭಾವನೆ ಪಡೆದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಮೊಟ್ಟ ಮೊದಲು 1993ರಲ್ಲಿ `ರಾಜಾ ರಾಣಿ~ ಎಂಬ ಕನ್ನಡ ಚಿತ್ರಕ್ಕೆ ಅವರು ಹಾಡಿದ್ದರು. ಆ ಸಿನಿಮಾ ಬಿಡುಗಡೆಯಾಗಲೇ ಇಲ್ಲ. ಅದರ ನಂತರ ತೆಲುಗಿನಿಂದ ಅವಕಾಶಗಳು ಬರತೊಡಗಿದವು. `ನಿನ್ನೇ ಪೆಳ್ಳಾಡುತಾ~ ಚಿತ್ರದ `ಗ್ರೀಕುವೀರುಡು~ ಹಾಡು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಆ ಮೂಲಕ ಸೌಮ್ಯಾ ಮಾದಕ ಕಂಠದ ಗಾಯಕಿ ಎನಿಸಿಕೊಂಡರು. ತಮಿಳು ಮತ್ತು ತೆಲುಗಿನಲ್ಲಿ ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂತು. ದಕ್ಷಿಣ ಭಾರತದ ಚಿತ್ರಗಳಲ್ಲಿ 200ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ತರುವಾಯ ಅವರಿಗೆ ಮುಂಬೈಗೆ ಹೋಗುವ ಮನಸ್ಸಾಯಿತು.

ಸಂಗೀತ ನಿರ್ದೇಶಕ ಸಂದೀಪ್ ಚೌಟ ಸಂಗೀತ ನೀಡಿದ್ದ `ಜಂಗಲ್~ ಚಿತ್ರದಲ್ಲಿ ಹಾಡಿದ ಸೌಮ್ಯಾ ಬಾಲಿವುಡ್‌ನಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳತೊಡಗಿದರು. `ಪ್ಯಾರ್ ತೂನೆ ಕ್ಯಾ ಕಿಯಾ~, `ಫ್ಯಾಮಿಲಿ~, `ದಮ್~, `ಬಂಟಿ ಔರ್ ಬಬ್ಲಿ~, `ನಾಚ್ ಲೇವೆ~, `ವೆಲ್‌ಕಮ್~, `ಕ್ರೇಜಿ 4~ ಮುಂತಾದ ಹಿಂದಿ ಸಿನಿಮಾಗಳಲ್ಲಿ ಸೌಮ್ಯಾ ಕಂಠ ಕೇಳಬಹುದು.

ತಾವು ಇದುವರೆಗೂ ಹಾಡಿರುವ ಹಿಂದಿ ಹಾಡುಗಳಲ್ಲಿ `ಗುರು~ ಚಿತ್ರದ `ಶೌಕ್ ಹೇ~ ಮತ್ತು `ಕಂಪೆನಿ~ ಚಿತ್ರದ `ಆಂಖೋ ಮೇ ರಹೋ~ ಹಾಡುಗಳನ್ನು ಬಹುವಾಗಿ ಮೆಚ್ಚುವ ಸೌಮ್ಯಾ, `ಸಮಯ್~ ಚಿತ್ರದ `ಲೈಲಾ ಲೈಲಾ~ ಹಾಡಿಗೆ ಸ್ಟಾರ್‌ಡಸ್ಟ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

`ನಾನು ಬದುಕನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವತ್ತು ನಡೀತಿದೆ ಸಂತೋಷ. ಮುಂದಿನ ಬದುಕನ್ನು ಪ್ಲಾನ್ ಮಾಡಿಲ್ಲ~ ಎನ್ನುವ ಧೋರಣೆ ಸೌಮ್ಯಾ ಅವರದ್ದು.

`ಮನಸ್ಸಿನಲ್ಲಿ ದುಃಖ ಆವರಿಸಿರುವಾಗ ಸಂತೋಷದ ಹಾಡು ಮತ್ತು ಸಂತೋಷದ ಮನಸ್ಥಿತಿ ಇರುವಾಗ ದುಃಖದ ಹಾಡನ್ನು ಹಾಡುವುದೇ ನನಗೆ ಸವಾಲು. ಪ್ರತೀ ಬಾರಿಯೂ ಅಂಥ ಸವಾಲು ಎದುರಾಗುತ್ತಿರುತ್ತದೆ. ಅದನ್ನು ನಾನು ಸಂತಸದಿಂದಲೇ ಸ್ವೀಕರಿಸುವೆ~ ಎನ್ನುವ ಅವರು ಇದೀಗ ಸ್ವರ ಸಂಯೋಜನೆಯಲ್ಲೂ ಪಳಗಿದ್ದಾರೆ.

`ಅವಕಾಶ ಸಿಕ್ಕರೆ ರಾಗ ಸಂಯೋಜನೆ ಮಾಡುವೆ. ಆ ತಾಕತ್ತಿದೆ. ಆದರೆ ಅವಕಾಶ ನಿರೀಕ್ಷಿಸುತ್ತಾ ಕೂರುವುದಿಲ್ಲ. ಅದು ಬಂದಾಗ ಒಪ್ಪಿಕೊಳ್ಳುವೆ. ಅವಕಾಶ ಸಿಗದಿದ್ದರೂ ದುಃಖ ಪಡುವುದಿಲ್ಲ~ ಎಂಬ ಮಾತನಾಡುವ ಸೌಮ್ಯಾ ಸಾಕಷ್ಟು ಮ್ಯೂಸಿಕ್ ಆಲ್ಬಂಗಳಿಗೂ ಹಾಡಿದ್ದಾರೆ. ವಿದೇಶಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರುತ್ತಾರೆ.

ಇದೀಗ ಝೀ ಕನ್ನಡ ವಾಹಿನಿಯ `ಸರಿಗಮಪ ಲಿಟ್ಲ್ ಚಾಂಪ್ಸ್~ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.