ಭಾನುವಾರ, ಮೇ 9, 2021
18 °C

ಹಿರಿಯೂರು ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ  ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಗೆ ಮಾಮೂಲಿನಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಅಧ್ಯಕ್ಷೆ ಅನುರಾಧಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಜಿ.ಪಂ. ಎಂಜಿನಿಯರಿಂಗ್ ವಿಭಾಗ ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿ ತಿಳಿಯೋಣವೆಂದರೆ ಸದರಿ ಇಲಾಖೆಯ ಅಧಿಕಾರಿಯೇ ಸಭೆಗೆ ಬಂದಿಲ್ಲ. ಕಾಟಾಚಾರಕ್ಕೆ ಸಹಾಯಕ ಅಧಿಕಾರಿಯನ್ನು ಕಳಿಸುತ್ತಾರೆ. ಸಭೆಗೆ ಬಂದವರು ಯಾವ ಪ್ರಶ್ನೆ ಕೇಳಿದರೂ, ತಮಗೆ ತಿಳಿಯದು, ಸಾಹೇಬ್ರನ್ನು ಕೇಳಬೇಕು ಎನ್ನುತ್ತಾರೆ. ಇಂಥ ಚೆಂದಕ್ಕೆ ಸಭೆ ನಡೆಸಬೇಕೇ ಎಂದು ಅವರು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿರುವ ಸುದ್ದಿ ದಿನನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಅಧಿಕಾರಿಗಳು ಮಾತ್ರ ಈ ವಿಚಾರ ತಮಗೆ ಸಂಬಂಧವಿಲ್ಲವೇನೊ ಎನ್ನುವಂತೆ ದೂರವಿದ್ದಾರೆ.ಹೀಗಾದರೆ, ಮತ ನೀಡಿದ ಜನ ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ ಎಂದು ಅನುರಾಧಾ ಖಾರವಾಗಿ ಪ್ರಶ್ನಿಸಿದರು.ಕುಡಿಯುವ ನೀರು ಪೂರೈಕೆಗೆ ಆಗತ್ಯವಿರುವ ಸಾಮಗ್ರಿಗಳನ್ನು ಬೆಸ್ಕಾಂ ಅಧಿಕಾರಿಗಳು ಕುಂಟುನೆಪ ಹೇಳದೇ ಪೂರೈಕೆ ಮಾಡಬೇಕು.ಯಾವಾಗ ಕೇಳಿದರೂ ಮೆಟೀರಿಯಲ್ ದಾಸ್ತಾನು ಇಲ್ಲ ಎಂಬ ಉತ್ತರವನ್ನು ಸಿದ್ಧವಾಗಿ ಇಟ್ಟುಕೊಂಡಿರುತ್ತೀರಿ. ಉತ್ತರೆ ಮಳೆಯೂ ಕೈಕೊಟ್ಟಿದ್ದು, ಅಂತರ್ಜಲ ದಿನೇ ದಿನೇ ಕುಸಿಯುತ್ತಿದೆ. ಕುಡಿಯುವ ನೀರಿಗೆ ಸಮರೋಪಾದಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.ಮಳೆ ಇಲ್ಲದ ಕಾರಣ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯಕ್ರಮ ಅನುಷ್ಠಾನವಾಗಿಲ್ಲ ಎಂದು ಸಾಮಾಜಿಕ ಅರಣ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದಾಗ, ಮಳೆ ಬಂದಾಗಲೂ ನೀವು ಸಾಧನೆ ಮಾಡಿದ್ದು, ಅಷ್ಟರಲ್ಲೇ ಇದೆ. ಜನಪ್ರತಿನಿಧಿಗಳು ಮಾಡುವ ದೂರವಾಣಿ ಕರೆಗೆ ನೀವು ಸಿಗುತ್ತಿಲ್ಲ. ದೂರವಾಣಿ ಕರೆ ಸ್ವೀಕರಿಸಲು ನಿಮಗೆ ಇರುವ ಅಡ್ಡಿಯೇನು? ಎಂದು  ಪ್ರಶ್ನೆ ಮಾಡಿದರು.ಅಡುಗೆ ಅನಿಲ ಸಿಲಿಂಡರ್ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಿಲ್ಲ ಎಂದು ಶಿಕ್ಷಕರು ದೂರುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಚಿನ್ನರಾಜು ಮನವಿ ಮಾಡಿದರು.ಪಶುಪಾಲನೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದ ಮೂಲಕ ಜಾನುವಾರುಗಳ ಮೇವು ಖರೀದಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯವಿರುವ ಕಡೆ ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.ವಲಯ ಅರಣ್ಯ, ಸಹಕಾರ, ಪರಿಶಿಷ್ಟಜಾತಿ- ವರ್ಗದ ಅಭಿವೃದ್ಧಿ ನಿಗಮ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಸದರಿ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಅನುರಾಧಾ ಸೂಚಿಸಿದರು.ರಮೇಶ್, ಉಪಾಧ್ಯಕ್ಷೆ ಪುಷ್ಪಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರಪ್ಪ, ಕೃಷಿಕಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮತ್ತಿತರರು ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.