ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಸಾಹಸ ಕ್ರೀಡೋತ್ಸವ

Last Updated 20 ಫೆಬ್ರುವರಿ 2011, 9:30 IST
ಅಕ್ಷರ ಗಾತ್ರ

‘ಮೂರು ಹೊತ್ತು ಓದು, ಓದು, ಓದು. ಅದಲ್ಲದಿದ್ದರೆ ಹೋಮ್‌ವರ್ಕ್ ಮಾಡು’, ಮಕ್ಕಳ ಬುದ್ದಿಮತ್ತೆ, ಜ್ಞಾನಕ್ಕೆ ಮಾತ್ರ ಸೀಮಿತವಾಗುವ ಮಾನಸಿಕ ಒತ್ತಡದ ಸಂದಿಗ್ಧ ಸಮಯದಲ್ಲಿ ಧೈರ್ಯ, ದೇಹಬಲ, ಮನೋಧರ್ಮ ಪ್ರೇರೇಪಿಸುವ ಸಾಹಸ, ಕ್ರೀಡೆಗೆ ಅವಕಾಶವೇ ಇಲ್ಲದಂತಾಗಿದೆ. ಆದರೆ, ಕಲಿಕೆಯ ಜತೆಗೆ ಭವಿಷ್ಯದ ಜೀವನಪಾಠಕ್ಕೆ ಮಕ್ಕಳಿಗೆ ಧೈರ್ಯ, ಮನೋಬಲ ಹೆಚ್ಚಿಸುವ ಸಾಹಸ ಕ್ರೀಡೆಗಳನ್ನು ಹಲವು ವರ್ಷಗಳಿಂದ ಕ್ರೀಡೋತ್ಸವದ ಹೆಸರಿನಲ್ಲಿ ಹೊಸನಗರದ ವಿದ್ಯಾಭಾರತಿ ವಿದ್ಯಾಸಂಸ್ಥೆ ಕೈಹಾಕಿ ಸೈ ಎನಿಸಿಕೊಂಡಿದೆ. ಈಚೆಗೆ ಸಂಸ್ಥೆಯ ಪುಟಾಣಿಗಳು ನಡೆಸಿದ ಸಾಹಸ ಕ್ರೀಡೋತ್ಸವ ಮನಸೆಳೆಯಿತು.

ಟೇಬಲ್ ಮೇಲೆ 4 ಬಾಟಲಿಗಳ ಮೇಲೆ ಚಕ್ರಾಸನ, 11 ಬಾಟಲಿ ಮೇಲೆ ಶಂಕಾಸನ, ಅರ್ಧಮತ್ಸೇಂದ್ರಾಸನ, 7 ಬಾಟಲಿ ಮೇಲೆ ಪಿರಮಿಡ್ ಆಕೃತಿಯಲ್ಲಿ ಐವರು ವಿದ್ಯಾರ್ಥಿಗಳು, 14 ಬಾಟಲಿಗಳ ಮೇಲೆ 4 ವರ್ಷದ ಪೋರನ ವಕ್ಷಾಸನವು ಉಸಿರು ಬಿಗಿ ಹಿಡಿದು ನೋಡುವಂತಿರುತ್ತದೆ. ಯೋಗಾಸನ ಮಕ್ಕಳ ಏಕಾಗ್ರತೆ ಹೆಚ್ಚಿಸಬಲ್ಲದು ಎನ್ನುತ್ತಾರೆ ಯೋಗಶಿಕ್ಷಕ ಆರ್. ನಾಗರಾಜ್. 

ರೋಮಾಂಚನ ಉಂಟುಮಾಡುವ ಬೈಸಿಕಲ್ ಮೇಲೆ ಸಾಹಸ ಪ್ರದರ್ಶನದಲ್ಲಿ ಒಂದೇ ಬೈಸಿಕಲ್ ಮೇಲೆ 7 ವಿದ್ಯಾರ್ಥಿಗಳ ಪಿರಮಿಡ್ ಆಕೃತಿ, ಸೈಕಲ್ ಮೇಲೆ ಪದ್ಮಾಸನ, ಚಕ್ರಾಸನ, ಮತ್ಸೇಂದ್ರಾಸನ, ಅಕ್ಷಯ ಎಂಬ 6ನೇ ತರಗತಿ ವಿದ್ಯಾರ್ಥಿಯ ಬೆನ್ನಿನ ಮೇಲೆ ಸೈಕಲ್ ಓಡಿಸುವ ಪ್ರದರ್ಶನ ಜನಮೆಚ್ಚುಗೆ ಪಡೆಯಿತು.4 ವರ್ಷದ ಯುಕೆಜಿ ಬಾಲಕ ರಜತ್ ಸುತ್ತಲೂ ಧಗಧಗಿಸಿ ಉರಿಯುತ್ತಿರುವ ಬೆಂಕಿಯ ರಿಂಗ್‌ನ ಒಳಗೆ ಜಿಗಿದಾಗ ಪ್ರೇಕ್ಷಕರ ಎದೆ ಒಮ್ಮೆ ಧಸ್ಸೆಂದುದು ಸುಳ್ಳಲ್ಲ. ಹೀಗೆ ಯಾವುದೇ ಎಗ್ಗಿಲ್ಲದೆ ಧೈರ್ಯವಾಗಿ ವಿಭಾವಸು, ಶಶಾಂಕ್, ರಂಜನ್, ಅಕ್ಷಯ್, ಶರತ್, ಸಂತೋಷ ಬೆಂಕಿಯ ಚಕ್ರದೊಳಗೆ ಓಡಿ ಬಂದು ಜಿಗಿಯಲಾರಂಭಿಸಿದರು. ಇದು ಮಕ್ಕಳ ಧೈರ್ಯ ಪ್ರವೃತ್ತಿಗೆ ಪೂರಕ ಎನ್ನುತ್ತಾರೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ದತ್ತಾತ್ರೇಯ.

ಮಾನವ ನಿರ್ಮಿತ ದೇಗುಲದ ಗೋಪುರ, ಪಾದಗಳಲ್ಲಿ ಕಮಲ ಪ್ರದರ್ಶನ, ಮಕ್ಕಳನ್ನು ಬಳಸಿಕೊಂಡು ರಥ ನಿರ್ಮಾಣ, ತ್ರಿಶೂಲ, ಸ್ವಸ್ತಿಕ್, ನಕ್ಷತ್ರಾ ಕೃತಿಯಲ್ಲಿ ಮಕ್ಕಳು ಬೆಂಕಿಯ ದೊಂದಿ ಹಿಡಿದು ಕವಾಯತು ಪ್ರದರ್ಶನ ನೋಡುಗರ ಮನ ಸೂರೆಗೊಂಡಿತ್ತು. ಕೇವಲ ಗಂಡು ಮಕ್ಕಳಿಗೆ ಮಾತ್ರ ಸಾಹಸ ಕ್ರೀಡೆ ಸೀಮಿತವಾಗಿರಬಾರದು. ಈ ನಿಟ್ಟಿನಲ್ಲಿ ಈ ಶಾಲೆಯ ಹೆಣ್ಣುಮಕ್ಕಳು ಸಹ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಾಹಸ ಕ್ರೀಡೆಗೂ ಒತ್ತು ಕೊಟ್ಟಿರುವ ವಿದ್ಯಾಭಾರತಿ ವಿದ್ಯಾಸಂಸ್ಥೆ ಇತರರಿಗೆ ಮಾದರಿ ಎಂದರೆ ತಪ್ಪಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT