ಭಾನುವಾರ, ಜೂನ್ 20, 2021
26 °C

ಹೀಗೊಬ್ಬ ಮರ್ಕಟಪ್ರಿಯ ಶ್ವಾನ ಪ್ರೇಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಪಟ್ಟಣದ ಯುವಕ­ನೊಬ್ಬ ಕೋತಿ ಹಾಗೂ ನಾಯಿಗಳಿಗೆ ನಿತ್ಯ ದಾಸೋಹ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ದುಡಿಮೆಯ ಒಂದು ಪಾಲನ್ನು ಈ ಪ್ರಾಣಿಗಳ ಆಹಾರ­ಕ್ಕಾಗಿ ಮೀಸಲಿಟ್ಟಿದ್ದಾನೆ.ಈ ಯುವಕನ ಹೆಸರು ಶ್ರೀನಿವಾಸ. ಗಾರೆ ಮೇಸ್ತ್ರಿ ಶ್ರೀನಿವಾಸ ಎಂದರೆ ಇಲ್ಲಿನ ಜನರಿಗೆ ಸುಲಭವಾಗಿ ತಿಳಿಯು­ತ್ತದೆ. ಅಷ್ಟಿಷ್ಟು ಹಣದ ವ್ಯವ­ಹಾರವೂ ಇದೆ. ಕೋತಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಪ್ರತಿ ದಿನ ಸಂಜೆ ಆಹಾರ ನೀಡುವುದು ಈ ಯುವಕನ ಹವ್ಯಾಸ.ಈತ ಈ ಕಾಯಕವನ್ನು ಒಂದು ದಶಕ­ದಿಂದಲೂ ಮಾಡಿಕೊಂಡು ಬಂದಿ­ದ್ದಾನೆ. ಸಂಜೆ 5 ರಿಂದ 6 ಗಂಟೆ ಒಳಗೆ ಬೈಕ್‌ ಮೇಲೆ ಬ್ರೆಡ್‌, ಬನ್‌, ಬಾಳೆ­ಹಣ್ಣು ಇತ್ಯಾದಿ ತಿನಿಸುಗಳನ್ನು ಹೊತ್ತು ತರುತ್ತಾನೆ. ನಾಯಿ ಹಾಗೂ ಕೋತಿ­ಗಳು ನಿಗದಿತ ಸ್ಥಳದಲ್ಲಿ ಶ್ರೀನಿವಾಸ­ನಿಗಾಗಿ ಕಾದು ಕುಳಿತಿರುತ್ತವೆ. ಬೈಕ್‌ ಶಬ್ದ ಕೇಳಿಸಿದೊಡನೆ ಎದ್ದು ಹಿಂದೆ ಓಡಲು ಪ್ರಾರಂಭಿಸುತ್ತವೆ.ಶ್ರೀನಿವಾಸ ಬೈಕ್‌ ನಿಲ್ಲಿಸುತ್ತಿದಂತೆ ಕೋತಿಗಳು ಸುತ್ತುವರಿದು ಕೈಚಾಚು­ತ್ತವೆ. ನಾಯಿಗಳು ಸುತ್ತಲೂ ನೆರೆದು ಬಾಲ ಅಲ್ಲಾಡಿಸಿಕೊಂಡು ನಿಲ್ಲುತ್ತವೆ. ಶ್ರೀನಿವಾಸನ ಸನ್ನಿಧಿಯಲ್ಲಿ ವೈರತ್ವಕ್ಕೆ ಎಡೆ­ಯಿಲ್ಲ. ಕೋತಿ, ನಾಯಿಗಳು ಪರಸ್ಪರ ಜಗಳವಾಡದೆ ಹಾಕಿದ್ದನ್ನು ಸಾಮರಸ್ಯದಿಂದ ತಿಂದು ಹೋಗುತ್ತವೆ. ಕೆಲವು ಕೋತಿಗಳು ಶ್ರೀನಿವಾಸನ ಬೆನ್ನೇರಿ ಭುಜದ ಮೇಲೆ ಕುಳಿತು ತಿಂಡಿ ಕೇಳು­ವುದುಂಟು.ಕಾಡುಗಳು ಕಣ್ಮರೆಯಾದ ಮೇಲೆ ಕೋತಿಗಳು ನೆಲೆ ಕಳೆದುಕೊಂಡವು. ಬೀದಿ ನಾಯಿಗಳು ಆಹಾರವಿಲ್ಲದೆ ಅಲೆ­ಯುತ್ತಿರುತ್ತವೆ. ಮನುಷ್ಯ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೂಕ ಪ್ರಾಣಿಗಳು ಏನು ಮಾಡು­ತ್ತವೆ? ಆದ್ದರಿಂದಲೇ ನನ್ನ ದುಡಿಮೆಯ ಸ್ವಲ್ಪ ಭಾಗವನ್ನು ಅವುಗಳಿಗೆ ಮೀಸ­ಲಿಟ್ಟಿದ್ದೇನೆ. ಅದರಿಂದ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದು ಶ್ರೀನಿವಾಸ ಹೇಳುತ್ತಾನೆ.ಪ್ರಾಣಿ ದಯೆಗೆ ಈ ಯುವಕ ಪ್ರತಿ ನಿತ್ಯ ₨500 ರಿಂದ 600 ಖರ್ಚು ಮಾಡುತ್ತಾನೆ. ಆದರೂ ದೇವರು ಕೊಡು­ತ್ತಾನೆ ಎಂಬುದು ಆತನ ನಿರಾಳ ಮಾತು. ಶ್ರೀನಿವಾಸನ ಪ್ರಾಣಿ ಪ್ರೀತಿಗೆ ಸ್ಥಳೀಯರಿಂದ ವಿರೋಧ ಬಂದಿದ್ದೂ ಉಂಟು. ಕೋತಿಗಳಿಗೆ ಆಹಾರ ನೀಡು­ವುದರಿಂದ ಅವು ಜಾಗ ಬಿಟ್ಟು ಹೋಗು­ವುದಿಲ್ಲ. ನಾಯಿಗಳು ಜನರಿಗೆ ಉಪಟಳ ನೀಡುತ್ತವೆ ಎಂದು ಗುಲ್ಲು ಎಬ್ಬಿಸಿದರು. ಸೇವೆಗೆ ಅಡ್ಡಿಪಡಿಸಿದ ಜನರನ್ನು ಸಮಾ­ಧಾನಪಡಿಸಿ, ಹಿಡಿದ ದಾರಿ ಬಿಡದೆ ನಡೆಯುತ್ತಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.