ಗುರುವಾರ , ಏಪ್ರಿಲ್ 22, 2021
29 °C

ಹುಚ್ಚು ಮನಸೇ ನೀ ಹಿಂಗ್ಯಾಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕರಣ 1

ಮಾಲತಿಗೆ 19 ವರ್ಷ. ಅದಾಗಲೇ ಮದುವೆಯಾಗಿ ಎರಡು ವರ್ಷ ತುಂಬಿತ್ತು. ಮೊದಲನೇ ಪಿಯುಸಿ ಮುಗಿದಿದ್ದಾಗ ಆಕೆಯ ಮದುವೆಯಾಗಿತ್ತು. ಚಿಕ್ಕಮ್ಮನ ಕಡೆಯ ಸಂಬಂಧವೊಂದು ಕೂಡಿ ಬಂದಾಗ, ತಂದೆ ತಾಯಿ ಮದುವೆ ಮಾಡಿ ಮುಗಿಸಿಬಿಟ್ಟಿದ್ದರು. ಇದರಿಂದ ಓದುವ ಅವಳ ಹಂಬಲಕ್ಕೆ ಕಡಿವಾಣ ಬಿದ್ದಿತ್ತು.ಆದರೂ ಓದಬೇಕೆಂಬ ಕನಸುಗಳ ಸುರುಳಿಯನ್ನು ಸುತ್ತಿಟ್ಟು, ತನ್ನ ಭಾವನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗಂಡನ ಜೊತೆಗೆ ಹೆಜ್ಜೆ ಹಾಕಿದ್ದಳು ಮಾಲತಿ. ಗಂಡನೂ ಅವಳ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ. ಹಬ್ಬ, ಮದುವೆ ಸಮಾರಂಭ, ಅದೂ, ಇದೂ ಎಂದು ಆಗೊಮ್ಮೆ, ಈಗೊಮ್ಮೆ ತವರಿಗೆ ಬಂದು ಹೋಗುತ್ತಿದ್ದಳು. ಸುಖೀ ಸಂಸಾರದಲ್ಲಿದ್ದಂತೆ ಕಾಣುತ್ತಿದ್ದ ಆಕೆ ಇತ್ತೀಚೆಗೆ ಒಮ್ಮಿಂದೊಮ್ಮೆಲೇ ನೇಣಿಗೆ ಶರಣಾಗಿ ಹೆತ್ತವರಿಗೆ, ಗಂಡನ ಮನೆಯವರಿಗೆ ದಿಗ್ಭ್ರಮೆ ಮೂಡಿಸಿದ್ದಳು, ಹೆತ್ತೊಡಲಿಗೆ ಕಿಚ್ಚಿಟ್ಟಿದ್ದಳು.ಮಾಲತಿಗೊಬ್ಬ ಪ್ರಿಯಕರನಿದ್ದ ಆಕೆಯ ಊರಿನಲ್ಲಿ. ಆಕೆ ಪಿಯುಸಿಯಲ್ಲಿದ್ದಾಗ ಅವರಿಬ್ಬರ ಪ್ರೇಮ ಪ್ರಕರಣ ಪಕ್ವವಾಗತೊಡಗಿತ್ತು. ಅವನು ಆಗಲೇ ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಅವಳ ಎರಡನೇ ಪಿಯುಸಿ ಮುಗಿದ ನಂತರ ಹಿರಿಯರ ಜೊತೆ ತಮ್ಮ ಮದುವೆಯ ಪ್ರಸ್ತಾಪ ಮಾಡಬೇಕೆಂದಿದ್ದರು. ತನ್ನ ಪ್ರೇಮ ಪ್ರಕರಣಕ್ಕೆ ನಾಂದಿ ಹಾಡಿ ಗಂಡನ ಮನೆ ಸೇರಿದ್ದರೂ ಮಾಲತಿಗೆ ಪ್ರೇಮಿಯ ಬಗ್ಗೆ ಇದ್ದ ಒಲವು ಆಗಾಗ ಪುಟಿದೇಳುತ್ತಿತ್ತು. ತವರಿಗೆ ಬಂದಾಗ ಸಮಯ, ಸಂದರ್ಭ ನೋಡಿಕೊಂಡು ತನ್ನ ಮಾಜಿ ಪ್ರೇಮಿಯನ್ನು ಭೇಟಿಯಾಗುತ್ತಿದ್ದಳು.ಬರೀ ಕಣ್ಣೋಟ, ಕುಡಿನೋಟ, ಲಘು ಸ್ಪರ್ಶ ಸುಖಕ್ಕೆ ಮೀಸಲಾಗಿದ್ದ ಅವರ ಭೇಟಿ ಈಗ ಮುಂದಿನ ಹೆಜ್ಜೆಯನ್ನೂ ದಾಟಿತ್ತು. ತಾನೀಗ ಇನ್ನೊಬ್ಬನ ಹೆಂಡತಿ, ತಾನು ಮಾಡುತ್ತಿರುವುದು ತಪ್ಪು ಎಂದು ಮಾಲತಿಗೆ ಮನದಟ್ಟಾಗಿದ್ದರೂ, ತವರಿಗೆ ಬಂದಾಗ ಪ್ರಿಯಕರನ ಸಂಗಕ್ಕೆ ಆಕೆಯ ಮನ ಹಾತೊರೆಯುತ್ತಿತ್ತು. ಆಕೆ ನೇಣಿಗೆ ಕೊರಳೊಡ್ಡಿದಾಗ ಮೂರು ತಿಂಗಳ ಗರ್ಭಿಣಿಯೂ ಆಗಿದ್ದಳು. ತನ್ನ ಒಡಲಲ್ಲಿರುವ ಕುಡಿ ಗಂಡನದೋ ಅಥವಾ ಪ್ರಿಯಕರನದೋ ಎಂಬ ದ್ವಂದ್ವದಲ್ಲಿದ್ದಳು ಮಾಲತಿ. ಆಕೆ ಈ ಬಾರಿ ತವರಿಗೆ ಬಂದಿದ್ದಾಗ, ಪ್ರಿಯಕರನೊಂದಿಗಿನ ತನ್ನ ಸಂಬಂಧದ ಬಗ್ಗೆ ಊರಿನಲ್ಲಿ ಒಬ್ಬಿಬ್ಬರಿಗೆ ಗೊತ್ತಾಗಿದ್ದುದನ್ನು ತಿಳಿದು ಅಧೀರಳಾಗಿ ತನ್ನ ಜೀವವನ್ನು ಕೊನೆಗಾಣಿಸಿಕೊಂಡಿದ್ದಳು.ಪ್ರಕರಣ- 2

ರಾಧಿಕಾ ಅದೇ ತಾನೇ ಬಿ.ಎ ಮೊದಲ ವರ್ಷದ ಪರೀಕ್ಷೆ ಬರೆದಿದ್ದಳು. ಯೌವನದ ಸಹಜ ಕನಸುಗಳು ಅವಳ ಮೈ, ಮನಗಳಲ್ಲಿ ಗರಿಗೆದರತೊಡಗಿದ್ದವು. ಬೆಂಗಳೂರಿನಲ್ಲಿ ಬಿ.ಇ ಓದುತ್ತಿದ್ದ ಆಕೆಯ ಅಣ್ಣ ರವಿ ಈ ಬಾರಿ ರಜೆಯಲ್ಲಿ ಊರಿಗೆ ಬಂದಾಗ ತನ್ನ ಸಹಪಾಠಿ, ರೂಮ್‌ಮೇಟ್ ರಂಜನ್‌ನನ್ನೂ ಕರೆತಂದಿದ್ದ. ಒಂದೆರಡು ದಿನಗಳಲ್ಲೇ ರವಿಯ ತಂದೆ, ತಾಯಿ ಮತ್ತು ರಾಧಿಕಾಳೊಂದಿಗೆ ರಂಜನ್ ಬಲು ಬೇಗ ಹೊಂದಿಕೊಂಡು ಮನೆಯವನಂತೆಯೇ ಆಗಿಬಿಟ್ಟ.ಊರಿಗೆ ಬಂದ ಐದನೇ ದಿನ ಬೆಳಿಗ್ಗೆ ನೇಸರನ ಉದಯಕ್ಕೆ ಮೊದಲೇ ರವಿಯ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು. ರಾಧಿಕಾ ಮತ್ತು ರಂಜನ್ ರಾತ್ರೋ  ರಾತ್ರಿ ಓಡಿಹೋಗಿದ್ದರು. ಇಬ್ಬರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ಮೊದಲೇ ಹೃದ್ರೋಗಿಯಾಗಿದ್ದ ರಾಧಿಕಾಳ ತಂದೆ ಮನೆತನದ ಮರ್ಯಾದೆಗೆ ಅಂಜಿ ಎದೆಯೊಡೆದುಕೊಂಡಿದ್ದರು. ತೀವ್ರ ಹೃದಯಾಘಾತದಿಂದ ಅವರ ದೇಹಾಂತವಾಗಿತ್ತು.

ಬರೀ ನಾಲ್ಕು ದಿನಗಳ ಪರಿಚಯದಲ್ಲಿ ರಾಧಿಕಾ ಮತ್ತು ರಂಜನ್‌ರಲ್ಲಿ ಅದೆಂತಹ ಪ್ರೀತಿ ಬೆಳೆದಿತ್ತೋ, ಅವರದು ಪ್ರೇಮವೋ, ಕಾಮವೋ ಅವರಿಗಷ್ಟೇ ಗೊತ್ತು.ಪ್ರಕರಣ- 3

ಪೂನಂಳ ಮದುವೆ ಅವಳಂತೆಯೇ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಜಿತೇಶನ ಜೊತೆಗೆ ವಿಜೃಂಭಣೆಯಿಂದ ಜರುಗಿತ್ತು. ಮದುವೆಯ ನಂತರ ದಂಪತಿಗೆ ಮೊದಲ ರಾತ್ರಿ. ಪೂನಂ ಏಕೋ ಕೊಂಚ ಡಲ್ಲಾಗಿದ್ದಾಳೆ ಎಂದು ಜಿತೇಶನಿಗೆ ಅನಿಸತೊಡಗಿತ್ತು.ಮದುವೆಯ ಗಲಾಟೆಯಲ್ಲಿ ಬಳಲಿರಬೇಕು ಎಂದುಕೊಂಡ. ಆದರೂ ಮೊದಲ ರಾತ್ರಿಯ ಉತ್ಸಾಹ, ಉಲ್ಲಾಸ, ಕಾತರ ಅವಳ ನಡೆಯಲ್ಲಿ ಕಂಡು ಬಾರದ್ದರಿಂದ ಜಿತೇಶ್ ಅವಳನ್ನು ನೇರವಾಗಿ ಕೇಳಿದ್ದ. `ಹುಷಾರಾಗಿರುವಿ ತಾನೇ?~ ಎನ್ನುತ್ತಾ ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ, ಪೂನಂ ಮನಬಿಚ್ಚಿ ಮಾತನಾಡಿದ್ದಳು.ಅವಳಿಗೆ ತವರು ಮನೆಯ ಪಕ್ಕದ ಮನೆಯ ಹುಡುಗನೊಂದಿಗೆ ಪ್ರೇಮ ಇತ್ತು. ಅವನ ಜೊತೆ ಎಲ್ಲಾ ರೀತಿಯ ಸಂಬಂಧ ಇಟ್ಟುಕೊಂಡಿದ್ದರೂ  ತಂದೆ-ತಾಯಿಯರ ಒತ್ತಾಯಕ್ಕೆ ಮಣಿದು ಈ ಮದುವೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಳು. ಅವಳ ಮಾತುಗಳನ್ನು ಕೇಳಿ ಜಿತೇಶನಿಗೆ ಆಘಾತ ಆಗಿತ್ತು. ಮದುವೆಗೆ ಮುಂಚೆಯೇ ವಿಷಯ ತಿಳಿಸಿದ್ದರೆ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಬಹುದಾಗಿತ್ತು ಎಂದು ಜಿತೇಶ್ ಹೇಳಿದ್ದಕ್ಕೆ, ಪೂನಂ ತನಗೆ ಧೈರ್ಯವಿರಲಿಲ್ಲ ಎಂದು ಹೇಳಿದ್ದಳು. ಈಗ ಪೂನಂ-ಜಿತೇಶರ ವಿವಾಹ ಸಂಬಂಧ ಮರಿದುಬಿದ್ದಿದೆ.ಮೇಲಿನ ಈ ಎಲ್ಲಾ ಪ್ರಕರಣಗಳೂ ಕಾಲ್ಪನಿಕವಲ್ಲ. ನಮ್ಮ ನಿಮ್ಮೆದುರಲ್ಲೇ ಇಂಥಹ ಹಲವಾರು ಪ್ರಕರಣಗಳು ದಿನನಿತ್ಯ ಘಟಿಸುತ್ತಿರುತ್ತವೆ. ಮನುಷ್ಯನಿಗೆ ಭಗವಂತ ಯೋಚನಾ ಶಕ್ತಿಯನ್ನು ಕೊಟ್ಟಿದ್ದಾನೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದು ಇಬ್ಬರಿಗೂ ತಿಳಿಯುತ್ತದೆ. ಹೀಗಿರುವಾಗ ಅನೈತಿಕ ಸಂಬಂಧ ಬೆಳೆಸುವಾಗ ತೋರುವ ಧೈರ್ಯವನ್ನೇ ತಂದೆ, ತಾಯಿಗೆ ತಮ್ಮ ಪ್ರೇಮ ಪ್ರಕರಣವನ್ನು ತಿಳಿಸಿ ಹೇಳಲು, ಅವರಿಗೆ ಮನದಟ್ಟು ಮಾಡಿಕೊಡಲು ತೋರಬಾರದೇಕೆ?ಲೈಂಗಿಕತೆಯಲ್ಲಿ ಗಂಡ, ಹೆಂಡತಿ ಇಬ್ಬರೂ ನಿಷ್ಠೆಯಿಂದ ಇರಬೇಕು. ತಮ್ಮ, ತಮ್ಮ ಸಂಗಾತಿಗಳಲ್ಲೇ ಸುಖ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಸುಖ ಎಂಬುದು ಮರೀಚಿಕೆಯಾಗಿ ಅನೈತಿಕತೆಗೆ ಎಡೆಮಾಡಿಕೊಡುತ್ತದೆ. ಇಂತಹವರು ಹೂವಿನಿಂದ ಹೂವಿಗೆ ಹಾರುವ ದುಂಬಿಯಂತಾಗಿ ಅನಾಹುತಕ್ಕೆ ಕಾರಣರಾಗುತ್ತಾರೆ. ಹುಚ್ಚುಚ್ಚಾಗಿ ಕುಣಿಯುವ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಎಲ್ಲ ಸರಿ ಹೋಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.