ಗುರುವಾರ , ಜೂನ್ 24, 2021
23 °C
ಅರಿವು ಹರಿವು

ಹುಬ್ಬು ಪುರಾಣವು...

ಸೂರ್ಯ Updated:

ಅಕ್ಷರ ಗಾತ್ರ : | |

‘ಹೇ, ಆ ಹುಡುಗಿಯ ಸೆಳೆಯುವ ಕಣ್ಣೋಟಕ್ಕೆ ಸೋತು ಹೋದೆ’ ಎಂದು ಪ್ರೀತಿಯಲ್ಲಿ ಬಿದ್ದ ಹುಡುಗ ತನ್ನ ಗೆಳೆಯನಿಗೆ ಹೇಳುವಾಗ, ಹುಡುಗಿಯ ನಯನಗಳನ್ನು, ನೋಟವನ್ನು ಆಕರ್ಷಕವನ್ನಾಗಿಸಿದ ಆಕೆಯ ಹುಬ್ಬು ಅವನ ಗಮನಕ್ಕೇ ಬಂದಿರಲಿಲ್ಲ!ಮಾನವನ ಮುಖದ ಸೌಂದರ್ಯದ ವಿಷಯಕ್ಕೆ ಬಂದಾಗ ಚರ್ಮದ ಬಣ್ಣ, ಕಣ್ಣು, ತುಟಿ, ಮೂಗು, ಕಿವಿಗಳ ಬಗ್ಗೆ ಹೆಚ್ಚು ಪ್ರಸ್ತಾಪವಾಗುತ್ತದೆಯೇ ಹೊರತು ಹುಬ್ಬುಗಳ ಬಗ್ಗೆ ಚರ್ಚೆ ಆಗುವುದು ತೀರಾ ಕಡಿಮೆ.ನಿಜ ಹೇಳಬೇಕೆಂದರೆ, ಅವನ/ಅವಳ ಆಕರ್ಷಣೀಯ ಕಣ್ಣುಗಳ, ಮೊಗದ ಹಿಂದೆ ಹುಬ್ಬುಗಳ ಪಾತ್ರ ಮಹತ್ವದ್ದು. ಆದರೆ, ಮೋರೆಯ ಚೆಲುವಿನ ವಿಚಾರದಲ್ಲಿ ಇವುಗಳು ಎಲೆ ಮರೆಯ ಕಾಯಿಗಳು! ಆದರೆ, ಈಗ ಪರಿಸ್ಥಿತಿ ಸ್ವಲ್ಪ ಬದಲಾದಂತೆ ತೋರುತ್ತಿದೆ. ಹುಬ್ಬುಗಳಿಗೂ ಪ್ರಾಮುಖ್ಯ ಸಿಗಲಾರಂಭಿಸಿದೆ. ಅದರಲ್ಲೂ ಆಧುನಿಕ ಮಹಿಳೆಯರು, ಯುವತಿಯರು ಹುಬ್ಬುಗಳನ್ನು ತಮ್ಮ ಮುಖದ ಚೆಲುವು ವರ್ಧಕಗಳಂತೆ ಕಾಣುತ್ತಿದ್ದಾರೆ! ಮುತುವರ್ಜಿಯಿಂದ ಅವುಗಳ ಲಾಲನೆ – ಪಾಲನೆ ಮಾಡುತ್ತಿದ್ದಾರೆ.  ಹಾಗಾದರೆ, ಹುಬ್ಬುಗಳು ಮುಖದ ಅಂದಕ್ಕಾಗಿ ಮಾತ್ರ ಇರುವುದೋ ಎಂದು ಕೇಳಿದರೆ, ಅಲ್ಲ ಎಂದೇ ಹೇಳಬೇಕಾಗುತ್ತದೆ. ಭಾವನೆಗಳ ಸಂವಹನದಲ್ಲಿ ಇವುಗಳು ವಹಿಸುವ ಪಾತ್ರ ಹಿರಿದು. ಭರತನಾಟ್ಯ ಸೇರಿದಂತೆ ಇತರ ನೃತ್ಯ ಪ್ರಕಾರಗಳು, ಯಕ್ಷಗಾನ ಸೇರಿ ಇತರ ಜಾನಪದ ಕಲೆಗಳಲ್ಲಿ ಕಲಾವಿದರ ಮುಖಾಲಂಕಾರವನ್ನು ಗಮನಿಸಿರಬಹುದು. ಅದರಲ್ಲೂ, ಅವರು ಹುಬ್ಬುಗಳಿಗೆ ಕಪ್ಪು ಬಣ್ಣ ಬಳಿದು ವಿಶೇಷ ಆಕಾರ ಕೊಡುವುದನ್ನೂ ಗಮನಿಸುತ್ತೀರಿ.ಪ್ರದರ್ಶನಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಮುಖಭಾವನೆಗಳನ್ನು ವ್ಯಕ್ತಪಡಿಸಿ ಪ್ರೇಕ್ಷಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಕಲಾವಿದರಿಗೆ ನೆರವಾಗುವುದು ಗಾಢ ಬಣ್ಣದ ಹುಬ್ಬುಗಳು.ಅದು ಬಿಡಿ. ದೈನಂದಿನ ಬದುಕಿನಲ್ಲಿ, ನಮ್ಮ ಗಮನಕ್ಕೆ ಬರದಂತೆ ನಾವು ಹುಬ್ಬುಗಳನ್ನು ಸಂವಹನಕ್ಕೆ ಬಳಸುತ್ತೇವೆ ಎಂದರೆ ಅಚ್ಚರಿಯಾಗದೆ ಇದ್ದೀತೆ? ಉದಾಹರಣೆ ಕೊಡುವುದಾದರೆ ‘ಹುಬ್ಬು ಹಾರಿಸುವುದು’. ನಮ್ಮ ಪೂರ್ವಜರ ಸಂವಹನ ಪ್ರಕ್ರಿಯೆಯಲ್ಲಿ ಇದಕ್ಕೆ ಉನ್ನತ ಸ್ಥಾನವಿತ್ತು. ನಾವು ಈಗಲೂ ಇದನ್ನು ಅಪರೂಪಕ್ಕೆ ಬಳಸುತ್ತೇವೆ. ‘ಹುಬ್ಬು ಹಾರಿಸುವುದು’, ಸಮ್ಮತಿಯ ಅಥವಾ ಅಂಗೀಕಾರದ ಅರ್ಥವನ್ನು ಧ್ವನಿಸುತ್ತದೆ.  ಇದಷ್ಟೇ ಅಲ್ಲ. ಹುಬ್ಬುಗಳ ಚಲನೆ, ನಮ್ಮ ಮುಖಭಾವ ಮತ್ತು ಭಾವನೆಗಳ ಪ್ರಕಟಣೆ ನಡುವೆ ಅವಿನಾಭಾವ ಸಂಬಂಧವಿದೆ. ಒಬ್ಬ ವ್ಯಕ್ತಿಯ ಮನೋಲಹರಿ (ಮೂಡ್‌) ಹೇಗಿದೆ ಎಂಬುದನ್ನು ಆ ವ್ಯಕ್ತಿಯ ಹುಬ್ಬುಗಳ ಚಲನೆ ನೋಡಿ ಹೇಳಬಹುದು. ಅಪರಿಚಿತರನ್ನು ಮಾತನಾಡಿಸುವುದಕ್ಕೂ ಮುನ್ನ, ಅವರು ನಮ್ಮೊಂದಿಗೆ ಸ್ನೇಹದಿಂದ ಅಥವಾ ಕೋಪದಿಂದ ವರ್ತಿಸಬಹುದೇ ಎಂಬುದನ್ನೂ ಅವರ ಹುಬ್ಬುಗಳ ಸ್ಥಾನವನ್ನು (ಪೊಸಿಷನ್‌) ನೋಡಿ ಅರ್ಥೈಸಬಹುದು. ಅಷ್ಟರ ಮಟ್ಟಿಗೆ ಇವು ಮನೋಭಾವನೆಯ ವಾಹಕಗಳು!ಎಲ್ಲಾ ಸರಿ, ಒಂದು ವೇಳೆ ಹುಬ್ಬುಗಳೇ ಇಲ್ಲದಿದ್ದರೆ...? ಅದೂ ಕಷ್ಟವೇ. ಕಣ್ಣಿನ ಮೇಲ್ಭಾಗ, ಹಣೆಯಲ್ಲಿರುವ ಹುಬ್ಬುಗಳು ಒಂದು ರೀತಿಯಲ್ಲಿ ತಡೆಗೋಡೆಗಳು. ಬೆವರು ಇಲ್ಲವೇ ನೀರು ನೇರವಾಗಿ ಕಣ್ಣಿಗೆ ಇಳಿಯುವುದನ್ನು ಇವು ತಡೆದು, ಅವುಗಳ ಪಥವನ್ನು ಬದಲಾಯಿಸುತ್ತವೆ. ಹುಬ್ಬುಗಳೇ ಇಲ್ಲದೇ (ಹುಬ್ಬಿನಲ್ಲಿ ಕೂದಲು ಇರದ) ಇರುವ ವ್ಯಕ್ತಿಯ ಪರಿಸ್ಥಿತಿಯನ್ನು ಊಹಿಸಿ ನೋಡಿ.ಸುಡು ಬೇಸಿಗೆಯಲ್ಲಿ ಹಣೆಯಲ್ಲಿ ಮೂಡುವ ಬೆವರು, ಸೀದ ಕಣ್ಣಿಗೆ ಹರಿದು ಕಣ್ಣುರಿ ಉಂಟು ಮಾಡಿದರೆ, ಮಳೆಗಾಲದಲ್ಲಿ ನೀರು ನೇರವಾಗಿ ಕಣ್ಣಿಗೆ ಸಾಗಿ ಕಿರಿ ಕಿರಿ ಮಾಡುತ್ತದೆ. ಒಟ್ಟಿನಲ್ಲಿ  ಹುಬ್ಬುಗಳಿರದ ವ್ಯಕ್ತಿಯ ಕೈಗೆ ಕಣ್ಣು ಒರೆಸುವ ಕೆಲಸ ಮಾತ್ರ ಖಾಯಂ! ಅಂದ ಹಾಗೆ, ಮಾನವರನ್ನು ಹೊರತು ಪಡಿಸಿ ಸಸ್ತನಿಗಳ ಅತ್ಯುನ್ನತ ಶ್ರೇಣಿಗೆ ಸೇರಿದ ವಾನರ, ಕಪಿಗಳು, ಕಾಡುಪಾಪ... ಇತ್ಯಾದಿ ಜೀವಿಗಳು ಪರಸ್ಪರ ಸಂಭಾಷಣೆಗೆ ಬಳಸುವುದು ಹುಬ್ಬುಗಳನ್ನೇ.

ಯೂನಿಬ್ರೊ ಅಥವಾ ಮೋನೊಬ್ರೊ

ಇಲ್ಲಿ ಎರಡೂ ಹುಬ್ಬುಗಳು ಸೇರಿಕೊಂಡಿರುತ್ತವೆ. ಒಂದಕ್ಕೊಂದು ಸೇರಿಕೊಂಡಿರುವ ಹುಬ್ಬುಗಳುಳ್ಳ ವ್ಯಕ್ತಿಗಳು ಹೆಚ್ಚು ಆಕರ್ಷಕರಾಗಿ ಕಾಣುತ್ತಾರೆ. ಇಂತಹ ಹುಬ್ಬು ಹೊಂದಿರುವವರು ಶುದ್ಧ ಹಸ್ತರು ಎಂದು ಹೇಳಲಾಗುತ್ತದೆ.ಪಾಶ್ಚಿಮಾತ್ಯ ಜನರು ಈ ರೀತಿಯ ಹುಬ್ಬನ್ನು ಇಷ್ಟಪಡುವುದಿಲ್ಲ. ಆ ರಾಷ್ಟ್ರಗಳನ್ನು ಹೊರತು ಪಡಿಸಿ ಇತರ ರಾಷ್ಟ್ರಗಳ ಸಂಸ್ಕೃತಿಯಲ್ಲಿ ಇತಿಹಾಸದಲ್ಲಿ ಇದಕ್ಕೆ ಸ್ಥಾನವಿದೆ. ಮಹಿಳೆಯರ ವಿಷಯದಲ್ಲಿ ಹೇಳುವುದಾದರೆ, ಯೂನಿಬ್ರೊ ಅಥವಾ ಮೋನೊಬ್ರೊ ಹೊಂದಿರುವ ಮಹಿಳೆ ಬಲು ಸುಂದರಿ. ಗಂಡಸರ ವಿಚಾರದಲ್ಲಿ ಇದು ಪುರುಷತ್ವದ ಸಂಕೇತ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.