ಶನಿವಾರ, ಜನವರಿ 18, 2020
26 °C

ಹುಲಿ ಯೋಜನೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ತಾಲ್ಲೂಕಿನ ಭದ್ರಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಹತ್ತಾರು ಅರಣ್ಯದಂಚಿನ ಗ್ರಾಮಗಳ ರೈತರ ಭೂಮಿಯನ್ನು ವಶಕ್ಕೆ ಪಡೆಯುವ ಮತ್ತು ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹುಲಿ ಯೋಜನೆಯ ಹೆಸರಿನಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.ಪಟ್ಟಣದ ಸಾಲುಮರದಮ್ಮ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಂಸದೆ ಡಿ.ಕೆ.ತಾರಾದೇವಿ, ಯೋಜನೆ ಕುರಿತು ಅಧಿಸೂಚನೆ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೇಲಿನ ಆಪಾದನೆಯಿಂದ ಮುಕ್ತರಾಗಲು ಕೇಂದ್ರ ಸರ್ಕಾರದ ಮೇಲೆ ಈ ಯೋಜನೆಯ ಜಾರಿಯ ಕುರಿತು ವೃಥಾ ಆರೋಪ ಮಾಡುತ್ತಿದೆ ಎಂದು ದೂರಿದರು.  ಮಾಜಿ ಸಚಿವ ಜಯಪ್ರಕಾಶ್‌ಹೆಗ್ಡೆ ಮಾತನಾಡಿ, ಭದ್ರಾ ಮೇಲ್ದಂಡೆ ಮತ್ತು ಹುಲಿ ಸಂರಕ್ಷಣಾ ಯೋಜನೆಗಳು ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಬಹುದೊಡ್ಡ ಬಳುವಳಿಯಾಗಿದ್ದು, ಜನತೆ ಪಕ್ಷಭೇದ ಮರೆತು ಪ್ರಸ್ತುತ ಯೋಜನೆಯನ್ನು ವಿರೋಧಿಸಬೇಕಿದೆ ಎಂದರು.ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ಜನ ವಿರೋಧಿಯಾಗಿದ್ದು, ಕೂಡಲೆ ಹುಲಿ ಯೋಜನೆ ಅಧಿಸೂಚನೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ, ಜನರ ಗಮನಕ್ಕೆ ತಾರದೆ ರಾಜ್ಯ ಸರ್ಕಾರ ಹುಲಿಯೋಜನೆಯನ್ನು ಆಡಳಿತಾತ್ಮಕವಾಗಿ ಅನುಮೋದಿಸುವ ಹಿಂದೆ ಯಾವುದೋ ಷಡ್ಯಂತ್ರವಿದೆ ಎಂದರು. ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ಕೆಪಿಸಿಸಿ ಸದಸ್ಯ ಟಿ.ಎಚ್.ಶಿವಶಂಕರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಘನಿ ಅನ್ವರ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ದ್ರುವಕುಮಾರ್ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಕೆಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಅನ್ಬು, ಪುರಸಭಾಧ್ಯಕ್ಷೆ ಹೇಮಲತಾ, ಕಾಂಗ್ರೆಸ್ ಮುಖಂಡರಾದ ಬಿ.ಎನ್.ಚಂದ್ರಪ್ಪ, ಎಂ.ಶಿವಣ್ಣ, ಡಿ.ಬಿ.ಗಂಗಾಧರಪ್ಪ, ದೋರನಾಳು ಪರಮೇಶ್, ಆರ್.ಮಂಜುನಾಥ್, ಜಿ.ಎಚ್.ಶ್ರೀನಿವಾಸ್, ಟಿ.ಬಿ.ಶಿವಣ್ಣ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ಲೋಹಿತ್, ರವಿ, ಪರಮೇಶ್ ಮತ್ತು ಲಕ್ಕವಳ್ಳಿ ಹಾಗೂ ಲಿಂಗದಹಳ್ಳಿ ಹೋಬಳಿಯ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)