ಭಾನುವಾರ, ಮಾರ್ಚ್ 7, 2021
22 °C
ಬದುಕು ಬನಿ

ಹೂವಿನ ಘಮ ಬದುಕಿಗಿಲ್ಲ

ನಿರೂಪಣೆ: ಎಚ್‌.ಅನಿತಾ Updated:

ಅಕ್ಷರ ಗಾತ್ರ : | |

ಹೂವಿನ ಘಮ ಬದುಕಿಗಿಲ್ಲ

ಬೆಂಗಳೂರು ಸೇರಿ ಹದಿನೈದು ವರ್ಷಗಳು ಕಳೆದಿವೆ. ಮೂರು ವರ್ಷ ಸರಿಯಾದ ದಾರಿಗಾಗಿ ಅಲ್ಲಲ್ಲಿ ಹುಡುಕುವುದರಲ್ಲಿಯೇ ಕಳೆದುಹೋದವು. ಹೂವಿನ ದಾರಿ ಸಿಕ್ಕಿ ಹನ್ನೆರಡು ವರ್ಷಗಳಾದವು. ಕೆ.ಆರ್‌. ಸರ್ಕಲ್‌ ಫುಟ್‌ಪಾತ್‌ ಮೇಲೆ ಫ್ಲವರ್‌ ಬೊಕೆ ವ್ಯಾಪಾರ ಮಾಡುತ್ತಿದ್ದೇನೆ.ತಂದೆ–ತಾಯಿಗೆ ನಾವು ನಾಲ್ಕು ಜನ ಮಕ್ಕಳು. ತಂದೆ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ತಾಯಿಯೇ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರು. ಮನೆ ಮತ್ತು ವಿವಿಧ ಕಚೇರಿಗಳಲ್ಲಿ ಕೆಲಸ ಮಾಡಿ ನಮಗೆ ಹಣ ಕಳುಹಿಸುತ್ತಿದ್ದರು. ಅಕ್ಕಂದಿರೂ ಊರಿನಲ್ಲಿಯೇ ಮನೆಗೆಲಸ ಮಾಡುತ್ತಿದ್ದರು. ನಾನು ಬೆಳಿಗ್ಗೆ ಪೇಪರ್‌, ಹಾಲು ಹಾಕುತ್ತಿದ್ದೆ. ಹೀಗೆ ಕಷ್ಟಪಟ್ಟು ಎಸ್ಸೆಸ್ಸೆಲ್ಸಿವರೆಗೂ ಬಂದೆ. ಆದರೆ ಪರೀಕ್ಷೆಯಲ್ಲಿ ಫೇಲಾದೆ.  ಮತ್ತೆ ಪರೀಕ್ಷೆ ಕಟ್ಟಿ ಪಾಸಾದೆ.ಮನೆಯ ಆರ್ಥಿಕ ಪರಿಸ್ಥಿತಿ ವಿದ್ಯಾಭ್ಯಾಸ ಮುಂದುವರಿಸಲು ಅಡ್ಡಿಯಾಯಿತು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ನಾನು, ಇಲ್ಲಿನ ಅಂಗಡಿಯೊಂದರಲ್ಲಿ  ಮೆಕ್ಯಾನಿಕ್‌ ಆಗಿ ಕೆಲಸಕ್ಕೆ ಸೇರಿಕೊಂಡೆ.  ಅವರು ಕೊಡುತ್ತಿದ್ದ ಸಂಬಳ ಊಟಕ್ಕೂ ಸಾಕಾಗುತ್ತಿರಲಿಲ್ಲ. ಸಂಬಂಧಿಯೊಬ್ಬರು ಆಗ ವಿಧಾನಸೌಧದ ಹಿಂಭಾಗದಲ್ಲಿದ್ದ ಓಣಿ ಮುನೇಶ್ವರ ದೇವಸ್ಥಾನದ ಬಳಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಫ್ಲವರ್‌ ಬೊಕೆಗಳನ್ನೂ ತಯಾರಿಸುತ್ತಿದ್ದರು. ಅವರ ಬಳಿ ಕೆಲಸಕ್ಕೆ ಸೇರಿದೆ. ಕೆಲಸ ಕಲಿತ ನಂತರ ನಾನೇ ಫ್ಲವರ್‌ ಬೊಕೆ ವ್ಯಾಪಾರ ಆರಂಭಿಸಿದೆ.ಆಗ ನನ್ನ ಬಳಿ ಇದ್ದದ್ದು ಕೇವಲ ₹ 200 ಬಂಡವಾಳ. ನಡುವೆ ಅನೇಕ ಸವಾಲುಗಳು ಎದುರಾದವು. ಇಲ್ಲಿನ ರಿಸರ್ವ್‌ ಬ್ಯಾಂಕ್‌ ಕಚೇರಿಗೆ ಅಗತ್ಯವಿರುವಾಗೆಲ್ಲ ನಮ್ಮ ಅಂಗಡಿಯಿಂದಲೇ ಬೊಕೆಗಳನ್ನು ಸರಬರಾಜು ಮಾಡುತ್ತೇವೆ. ಹುಟ್ಟು ಹಬ್ಬ, ಅಂತ್ಯಸಂಸ್ಕಾರ, ಕಚೇರಿಗಳಿಗೆ ಉನ್ನತ ಅಧಿಕಾರಿಗಳ ಭೇಟಿ ಇಲ್ಲವೇ  ಸಿಬ್ಬಂದಿಯ ನಿವೃತ್ತಿ ಸಂದರ್ಭಗಳಲ್ಲಿ ಇತರರೂ ಖರೀದಿ ಮಾಡುತ್ತಾರೆ.  ಸುಮಾರು ಹದಿನೈದಕ್ಕೂ ಹೆಚ್ಚು ಬಗೆಯ ಹೂಗಳಿಂದ ಬೊಕೆಗಳನ್ನು ತಯಾರಿಸುತ್ತೇವೆ. ಗುಲಾಬಿ ಹೂ ಬೊಕೆಗಳಿಗೆ ಹೆಚ್ಚು ಬೇಡಿಕೆ. ಒಂದಕ್ಕೆ ₹ 150ರಂತೆ ಮಾರಾಟ ಮಾಡುತ್ತೇವೆ. ದಿನಕ್ಕೆ 10–15 ಬೊಕೆಗಳು ಮಾರಾಟವಾಗುತ್ತವೆ.ಇದೊಂದೇ ವೃತ್ತಿ ನೆಚ್ಚಿಕೊಂಡರೆ ಬೆಂಗಳೂರಿನಂಥ ಊರಿನಲ್ಲಿ ದುಬಾರಿ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುವುದು ಕಷ್ಟ. ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸು ತ್ತಿದ್ದೇನೆ. ಹಾಗಾಗಿ ಮಧ್ಯಾಹ್ನದ ನಂತರ ಆಟೊ ಓಡಿಸುತ್ತೇನೆ. ಆ ಸಮಯದಲ್ಲಿ ನನ್ನ ಸೋದರ ಸಂಬಂಧಿ ಯೊಬ್ಬರು ಅಂಗಡಿ ವ್ಯಾಪಾರ ನಿರ್ವಹಿಸುತ್ತಾರೆ. ಎಷ್ಟೇ ದುಡಿದರೂ ಇದುವರೆಗೆ ಸ್ವಂತ ನೆಲೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ವಿಧಾನಸೌಧದಿಂದ 2 ಕಿ.ಮೀ. ವ್ಯಾಪ್ತಿಯಲ್ಲಿ ‘ಗ್ರೀನ್‌ ಪಾರ್ಕ್‌’ ಮಾಡುವ ಯೋಜನೆ ಇದೆಯಂತೆ. ಆಗ ನಮ್ಮಂಥ ಬೀದಿ ವ್ಯಾಪಾರಿಗಳು ಇಲ್ಲಿಂದ ಕಾಲು ಕೀಳಬೇಕಾಗುತ್ತದೆ. ಆಗ ಏನು ಮಾಡು ವುದೆಂಬ ಚಿಂತೆ ಶುರುವಾಗಿದೆ. ಊರಿನಲ್ಲಿ ಇರುವುದಕ್ಕೆ ಚಿಕ್ಕ ಸೂರು ಬಿಟ್ಟರೆ ದುಡಿಯಲು ಭೂಮಿ ಇಲ್ಲ.ಒಮ್ಮೆ ವ್ಯಕ್ತಿಯೊಬ್ಬ ‘ತುಂಬಾ ಹಸಿವಾಗಿದೆ. ಯಾರೂ ಕೆಲಸ ಕೊಡುತ್ತಿಲ್ಲ. ಊಟಕ್ಕೆ ಸಹಾಯ ಮಾಡಿ’ ಎಂದು ಬೇಡುತ್ತಿದ್ದ. ಆದಕ್ಕೆ ಒಬ್ಬರು, ‘ನಿನಗೇನು ದಾಡಿ, ಗಾರೆ ಕೆಲಸಕ್ಕೆ ಹೋಗು’ ಎಂದು ತಳ್ಳಿದರು. ಇದಕ್ಕೆ ಆಕ್ರೋಶಗೊಂಡ ವ್ಯಕ್ತಿ ಅವರಿಗೆ ಕಲ್ಲಿನಿಂದ ಹೊಡೆದು, ಜೇಬಿನಲ್ಲಿದ್ದ ಹಣವನ್ನೆಲ್ಲ ಕಿತ್ತುಕೊಂಡು ಓಡಿದ. ಹಸಿವಿನಿಂದ ಬಳಲುವ ಇಂತಹ ಅನೇಕರನ್ನು ನಿತ್ಯವೂ ನೋಡುತ್ತಿರುತ್ತೇನೆ.ವ್ಯಾಪಾರದ ಆರಂಭದಲ್ಲಿ ಕೆಲವರು ಪುಕ್ಕಟೆಯಾಗಿ ಬೊಕೆಗಳನ್ನು  ಕೇಳುತ್ತಿದ್ದರು. ಪುಕ್ಕಟೆ ಕೊಟ್ಟರೆ ಹೊಟ್ಟೆ ಹೊರೆಯುವುದು ಹೇಗೆಂದು ‍ಪ್ರಶ್ನಿಸಿದ್ದಕ್ಕೆ, ‘ಜಾಗ ಏನ್‌ ನಿಮ್ಮಪ್ಪನ ಮನೆದಾ? ಬಡವನಾದರೆ ಆತ್ಮಹತ್ಯೆ ಮಾಡಿಕೊ’ ಎಂದೆಲ್ಲ ನೋಯಿಸಿದರು. ಒಂದು ಕ್ಷಣ ತಿರುಗಿ ಬಿದ್ದಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ರೌಡಿಯಾಗಿರಬೇಕಿತ್ತು. ಆದರೆ ಸಂಯಮ ಕಳೆದುಕೊಳ್ಳದೆ ಕೆಲಸ ಮುಂದುವರಿಸಿಕೊಂಡು ಬಂದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.